ಮುಂಬೈ (ಮಹಾರಾಷ್ಟ್ರ): ಭಾರತವು ಒಂದು ಜಾತ್ಯತೀತ ರಾಷ್ಟ್ರ ದೇಶವಲ್ಲವಾ? ಪರಿಸರ ಕಾಳಜಿಯ ವಿಷಯದಲ್ಲಿ ಯಾವುದೇ ಧಾರ್ಮಿಕ ಕೋನ ಅಥವಾ ಬಣ ರಾಜಕಾರಣಕ್ಕೆ ಆಸ್ಪದವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಪರಿಸರ ಸ್ನೇಹಿ ಮತ್ತು ಪಟಾಕಿ ಮುಕ್ತ ದೀಪಾವಳಿ ಆಚರಣೆಗೆ ಮನವಿ ಮಾಡಿದ್ದ ನಟಿ ದಿಯಾ ಮಿರ್ಜಾ ಅವರ ವಿಡಿಯೋವನ್ನು ಮರು ಅಪ್‌ಲೋಡ್ ಮಾಡಲು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಮುಂಬೈನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ, ಪಟಾಕಿ ಮುಕ್ತ ಮತ್ತು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹೈಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಬಿಎಂಸಿ ಜಾಗೃತಿ ಅಭಿಯಾನ ನಡೆಸಿತ್ತು. ಇದಕ್ಕಾಗಿ ದಿಯಾ ಮಿರ್ಜಾ, ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಸೇರಿದಂತೆ ಹಲವು ಗಣ್ಯರ ವಿಡಿಯೋ ಸಂದೇಶಗಳನ್ನು ಬಿಎಂಸಿ ಹಂಚಿಕೊಂಡಿತ್ತು. ಆದರೆ, ದಿಯಾ ಮಿರ್ಜಾ ಅವರು ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸಬೇಡಿ ಎಂದು ಮನವಿ ಮಾಡಿದ್ದ ವಿಡಿಯೋವನ್ನು ಬಿಜೆಪಿ ನಾಯಕರು ಆಕ್ಷೇಪಿಸಿದ್ದರು. ಅದರಂತೆ, ಮುಂಬೈ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಅಮೀತ್ ಸಾತಮ್ ಅವರು, "ದೀಪಾವಳಿ ಆಚರಣೆಯ ಕುರಿತು ದಿಯಾ ಮಿರ್ಜಾ ಅವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ, ಇದು ಹಿಂದೂ ವಿರೋಧಿ" ಎಂದು ಆರೋಪಿಸಿದ್ದರು. ಈ ರಾಜಕೀಯ ಒತ್ತಡಕ್ಕೆ ಮಣಿದ ಬಿಎಂಸಿ ಭಾನುವಾರ ದಿಯಾ ಮಿರ್ಜಾ ಅವರ ವಿಡಿಯೋವನ್ನು ಮಾತ್ರ ಡಿಲೀಟ್ ಮಾಡಿತ್ತು. ಆದರೆ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ವಿಡಿಯೋಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.
ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಡಾ. ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. "ಕೇವಲ ಬೇರೆ ಧರ್ಮದವರು ಎಂಬ ಕಾರಣಕ್ಕೆ ಒಬ್ಬರ ಭಾಗವಹಿಸುವಿಕೆಯನ್ನು ನೀವು ಹೇಗೆ ವಿರೋಧಿಸುತ್ತೀರಿ? ನಾವೇನು ಜಾತ್ಯತೀತ ದೇಶವಲ್ಲವೇ? ಮಾಲಿನ್ಯ ಮತ್ತು ಆರೋಗ್ಯದ ಬಗ್ಗೆ ಮಾತನಾಡುವಾಗ ಬಣ ರಾಜಕಾರಣಕ್ಕೆ ಜಾಗವಿಲ್ಲ. ಪ್ರತಿಯೊಬ್ಬರೂ ಒಂದೇ ಗಾಳಿಯನ್ನು ಉಸಿರಾಡುತ್ತಿದ್ದಾರೆ" ಎಂದು ನ್ಯಾಯಪೀಠವು ರಾಜಕಾರಣಿಗಳ ನಡೆಗೆ ತರಾಟೆಗೆ ತೆಗೆದುಕೊಂಡಿತು. ಜೊತೆಗೆ, ನಟಿ ದಿಯಾ ಮಿರ್ಜಾ ಅವರು ಕೋರ್ಟ್ ಆದೇಶದ ಅನ್ವಯವೇ ಪರಿಸರ ಕಾಳಜಿಯ ಉತ್ತಮ ಸಂದೇಶ ನೀಡಿದ್ದಾರೆ. ಹಾಗಾಗಿ, ರಾಜಕಾರಣಿಗಳ ಸಣ್ಣ ಆಕ್ಷೇಪಣೆಗಳಿಗೆ ಬಿಎಂಸಿ ತಕ್ಷಣವೇ ಮಣಿಯುವ ಅಗತ್ಯವಿರಲಿಲ್ಲ ಎಂದು ಕೋರ್ಟ್ ಹೇಳಿದ್ದು, ಜನರ ವಿಶ್ವಾಸ ಮರುಗಳಿಸಲು ವಿಡಿಯೋವನ್ನು ಮತ್ತೆ ಅಪ್‌ಲೋಡ್ ಮಾಡಲು ಸೂಚಿಸಿದೆ.