

ನವದೆಹಲಿ: ದೇವಾಲಯಗಳ ಒಳಗೆ ಬ್ರಾಹ್ಮಣ ಮಹಿಳೆಯರ ಸುರಕ್ಷತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಎಐಎಸ್ಎ(AISA) ಅಧ್ಯಕ್ಷೆ ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ದೇವಸ್ಥಾನಗಳಲ್ಲಿ ಅರ್ಚಕರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಆರೋಪಿಸಿದ್ದ ನೇಹಾ ಬೋರಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲೆ ಅಮಿತಾ ಸಚ್‌ದೇವ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ನೇಹಾ ಹೇಳಿಕೆಯು ಒಂದು ಧಾರ್ಮಿಕ ಸಮುದಾಯದ ಘನತೆಗೆ ಧಕ್ಕೆ ತರಬಹುದು ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಪರಿಣಾಮ ಬೀರಬಹುದು ಎಂದು ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ಈ ಸಂಬಂಧ ನೇಹಾ ಬೋರಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ಜನತಾ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ತನ್ನ ಸಾಮಾಜಿಕ ಜಾಲತಾಣವಾದ 'X' ನಲ್ಲಿ, ನೇಹಾ ಬೋರಾ ಅವರ ಇತ್ತೀಚಿನ ಹೇಳಿಕೆಯನ್ನು ಹಾಗೂ ರಾಹುಲ್ ಗಾಂಧಿ ಅವರ ಹಿಂದಿನ ಹೇಳಿಕೆಯೊಂದನ್ನು ಒಟ್ಟಿಗೆ ಹಂಚಿಕೊಂಡಿದೆ.
ಬೋರಾ ಅವರು ರಾಹುಲ್ ಗಾಂಧಿ ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೇ ಬೇರೆ ಪದಗಳಲ್ಲಿ ಪುನರಾವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಬ್ಬರೂ ಸನಾತನ ಧರ್ಮ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್‌ನ ಹೊಸ ಪೋಸ್ಟರ್ ಗರ್ಲ್ ನೇಹಾ ಬೋರಾ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದನ್ನು ಬೇರೆ ರೀತಿಯಲ್ಲಿ ಪುನರಾವರ್ತಿಸುತ್ತಿದ್ದಾರೆ. ಅವರ ಸನಾತನ ವಿರೋಧಿ ಮತ್ತು ಅರಾಜಕತಾವಾದಿ ಚಿಂತನೆಯು ಇಡೀ ದೇಶಕ್ಕೆ ಕುತ್ತು ತರುವಂತಿದೆ ಎಂದು ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಬರೆದಿದೆ.