ಮುಂಬೈ (ಮಹಾರಾಷ್ಟ್ರ): ದೀಪಾವಳಿಯ ಸಂಭ್ರಮದ ನಡುವೆಯೇ ಮಾಲಿನ್ಯದ ಕುರಿತ ಚರ್ಚೆಗಳು ಮತ್ತೆ ತಾರಕಕ್ಕೇರಿವೆ. ಇತ್ತೀಚೆಗಷ್ಟೇ ನಟಿ ದಿಯಾ ಮಿರ್ಜಾ ಅವರ ಪರಿಸರ ಜಾಗೃತಿಯ ಜಾಹೀರಾತು ಭಾರೀ ವಿವಾದ ಸೃಷ್ಟಿಸಿ ಕೊನೆಗೆ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಆಗಿತ್ತು. ಆದರೆ, ಕೋರ್ಟ್ ಮಧ್ಯಸ್ಥಿಕೆಯಿಂದ ಆ ವಿಡಿಯೋ ಮತ್ತೆ ಕಾಣಿಸಿಕೊಂಡಿತ್ತು. ಈ ವಿವಾದದ ಬೆಂಕಿ ಆರುವ ಮುನ್ನವೇ, ಬಾಲಿವುಡ್ ನಟಿ ಹಾಗೂ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಇಂಟರ್ನೆಟ್ ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಅದರಲ್ಲೂ, ದೀಪಾವಳಿಗೆ ಪಟಾಕಿ ಸಿಡಿಸುವವರು ದೇಶದ್ರೋಹಿಗಳು ಎಂಬ ವಿವಾದಾತ್ಮಕ ಹೇಳಿಕೆಯು ಈಗ ದೇಶಾದ್ಯಂತ ಪರ-ವಿರೋಧದ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಸೋನಿ ರಜ್ದಾನ್ ಹೇಳಿದ್ದೇನು?
ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಸೋನಿ ರಜ್ದಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, "ವಾಯು ಮಾಲಿನ್ಯದಿಂದಾಗಿ ಸಣ್ಣ ಮಕ್ಕಳು ಎಷ್ಟು ಕಷ್ಟಪಡುತ್ತಿದ್ದಾರೆ, ಅನಾರೋಗ್ಯದಿಂದಾಗಿ ಅವರು ಎಷ್ಟು ದಿನ ಶಾಲೆಯನ್ನು ಮಿಸ್ ಮಾಡುತ್ತಿದ್ದಾರೆ ಎಂಬುದು ಸಣ್ಣ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಚೆನ್ನಾಗಿ ಗೊತ್ತು. ಇಂತಹ ಪರಿಸ್ಥಿತಿಯಲ್ಲಿ, ಈ ದೀಪಾವಳಿಗೆ ಒಂದೇ ಒಂದು ಪಟಾಕಿ ಸಿಡಿಸುವುದು ಕೂಡ ಸಂಪೂರ್ಣವಾಗಿ ಸರಿಯಾಗಿದೆ ಎಂದು ನೀವು ಹೇಳುವುದಾದರೆ, ಅದು ನನಗೆ ಜೀವ ವಿರೋಧಿ, ಆರೋಗ್ಯ ವಿರೋಧಿ ಮತ್ತು ಹೌದು... ದೇಶ ವಿರೋಧಿ ಎಂದು ಅನ್ನಿಸುತ್ತದೆ. ಆರೋಗ್ಯ ಎಂಬುದು ನಮಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ನಾವು ಮಾಡುವ ಸರಿಯಾದ ಆಯ್ಕೆಯಾಗಿದೆ" ಎಂದು ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ಸೋನಿ ರಜ್ದಾನ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, "ಬಾಲಿವುಡ್ ಮಂದಿ ತಮ್ಮ ಸಿನಿಮಾ ಪ್ರಚಾರ, ಹೊಸ ವರ್ಷ ಅಥವಾ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸಿದಾಗ ಪರಿಸರ ನೆನಪಾಗುವುದಿಲ್ಲವೇ? ಕೇವಲ ಹಿಂದೂಗಳ ಹಬ್ಬ ದೀಪಾವಳಿಗೆ ಮಾತ್ರ ಇಂತಹ ನೀತಿ ಪಾಠ ಮತ್ತು ದೇಶ ವಿರೋಧಿ ಎಂಬ ಪಟ್ಟ ಏಕೆ?" ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.