

ಮುಂಬೈ: ಮಹಾರಾಷ್ಟ್ರದ ಕರಾಡ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಾಲ್ವರು ಯುವಕರು ಅಪಘಾತದಲ್ಲಿ ಮೃತಪಟ್ಟ ಫ್ಲೈಓವರ್‌ನಲ್ಲೇ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಕರಡ್ ಪೊಲೀಸ್ ಅಧಿಕಾರಿ ಸೋನಲ್ ಪಾಟೀಲ್ ಎಂಬುವವರು ಅಕ್ಟೋಬರ್ 31ರಂದು ಕೊಲ್ಹಾಪುರ ನಾಕಾ-ನಾಂದಲಾಪುರ ಫ್ಲೈಓವರ್‌ನಲ್ಲಿ ತಮ್ಮ ಹೊಸ ಕಾರಿನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ರಾತ್ರಿ ವೇಳೆ ನಡೆದ ಈ ಸಂಭ್ರಮದಲ್ಲಿ ಕೇಕ್ ಕತ್ತರಿಸಿ, ಹೂಗುಚ್ಛ ಹಿಡಿದು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅಲ್ಲದೆ, ಪೈರೋ ಗನ್‌ನಿಂದ ಚಿನ್ನದ ಬಣ್ಣದ ಕಿಡಿಗಳನ್ನು ಹಾರಿಸಿ ಸಂಭ್ರಮಿಸಿದ್ದಾರೆ. ಕಾರಿನ ಮುಂದೆ ನಿಂತು ಹಾಗೂ ಅದರ ಬಾನೆಟ್ ಮೇಲೆ ಕುಳಿತು ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಯ ವರ್ತನೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವಂತೆ ಜನರಿಗೆ ತಿಳಿಸಬೇಕಾದ ಪೊಲೀಸರೇ ಸಾರ್ವಜನಿಕ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಖಾಸಗಿ ಸಂಭ್ರಮಾಚರಣೆ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಾಲ್ವರ ಬಲಿ ಪಡೆದ ಜಾಗ
ಈ ಹುಟ್ಟುಹಬ್ಬದ ಆಚರಣೆಗೆ ಮತ್ತೊಂದು ಕಾರಣದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಫ್ಲೈಓವರ್‌ನಲ್ಲಿ ಕೇವಲ 10ರಿಂದ 15 ದಿನಗಳ ಹಿಂದಷ್ಟೇ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕೊಲ್ಹಾಪುರದಿಂದ ಸಾತಾರಾ ಕಡೆಗೆ ತೆರಳುತ್ತಿದ್ದ ಕಾರೊಂದು ಅಪಘಾತಕ್ಕೀಡಾಗಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಕೊಲ್ಹಾಪುರ ನಾಕಾ ಮತ್ತು ನಾಂದಲಾಪುರವನ್ನು ಸಂಪರ್ಕಿಸುವ 3.5 ಕಿ.ಮೀ ಉದ್ದದ ಈ ಫ್ಲೈಓವರ್ ಕೆಲವೇ ತಿಂಗಳ ಹಿಂದೆ ನಿರ್ಮಾಣಗೊಂಡಿದೆ. ಸಂಚಾರ ಆರಂಭವಾದಾಗಿನಿಂದಲೇ ಈ ರಸ್ತೆಯಲ್ಲಿ ವಾಹನಗಳ ಅತಿಯಾದ ವೇಗ ಮತ್ತು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಇದೀಗ ನಾಲ್ವರ ಸಾವಿಗೆ ಸಾಕ್ಷಿಯಾಗಿದ್ದ ರಸ್ತೆಯಲ್ಲೇ ಪೊಲೀಸ್ ಅಧಿಕಾರಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ.