Raptadu ಶಾಲಾ ವಿದ್ಯಾರ್ಥಿನಿ ಮೇಲೆ ಹಲ್ಲೆ: ಆರೋಪಿ ಹೇಮಂತ್‌ ಕಾಲು ಕತ್ತರಿಸಿ ಹಾಕಿದ ವೈದ್ಯರು!

ಆರೋಪಿ ಹೇಮಂತ್ ನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಹೇಮಂತ್‌ನ ಕಾಲಿಗೆ ಗುಂಡೇಟು ಬಿದ್ದಿತ್ತು.
Raptadu school chainsaw attack Accuseds leg amputated
ರಾಪ್ತಾಡು ದಾಳಿಕೋರ ಹೇಮಂತ್ ಕಾಲು ಕತ್ತರಿಸಿ ತೆಗೆದ ವೈದ್ಯರು
Updated on: 

ಅನಂತಪುರ: ಆಂಧ್ರಪ್ರದೇಶದ ರಾಪ್ತಾಡು ಪಟ್ಟಣದ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಮರ ಕತ್ತರಿಸುವ ಚೈನ್ಸಾದಿಂದ ಭೀಕರ ದಾಳಿ ನಡೆಸಿದ್ದ ಆರೋಪಿ ಹೇಮಂತ್‌ನ ಬಲಗಾಲನ್ನು ವೈದ್ಯರು ಮಂಗಳವಾರ ಕತ್ತರಿಸಿ ತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (ಜಿಜಿಎಚ್) ಶಸ್ತ್ರಚಿಕಿತ್ಸೆ ನಡೆಸಿ ಮೊಣಕಾಲಿನ ಮೇಲ್ಭಾಗದಿಂದ ಕಾಲು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡುಬರುತ್ತಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದೆ.

ಆರೋಪಿ ಹೇಮಂತ್ ನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರೊಂದಿಗಿನ ಎನ್‌ಕೌಂಟರ್ ವೇಳೆ ಹೇಮಂತ್‌ನ ಕಾಲಿಗೆ ಗುಂಡೇಟು ಬಿದ್ದಿತ್ತು. ಪೊಲೀಸರು ಆರೋಪಿ ಹೇಮಂತ್ ನತ್ತ ಬರೊಬ್ಬರಿ 6 ಸುತ್ತು ಗುಂಡು ಹಾರಿಸಿದ್ದರು.

Raptadu school chainsaw attack Accuseds leg amputated
Raptadu School Attack: ಅಪ್ರಾಪ್ತೆಯ ಹಿಂದೆಬಿದ್ದಿದ್ದ ಭಗ್ನಪ್ರೇಮಿ; ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!

ಗುಂಡೇಟಿನಿಂದ ಗ್ಯಾಂಗ್ರಿನ್!

ಗುಂಡು ಕಾಲಿಗೆ ತಗುಲಿ ಗಂಭೀರ ಗಾಯವಾಗಿತ್ತು. ಇದರಿಂದ ಹೇಮಂತ್ ಕಾಲಿನಲ್ಲಿ ಗಂಭೀರ ಸಮಸ್ಯೆಗಳು ಉಂಟಾಗಿದ್ದು, ಕಾಲಿಗೆ ರಕ್ತ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ಗ್ಯಾಂಗ್ರೀನ್ ಸೋಂಕು ಕಾಣಿಸಿಕೊಂಡಿತ್ತು. ಸೋಂಕಿತ ಭಾಗವನ್ನು ಹಾಗೆಯೇ ಬಿಟ್ಟರೆ ಸುತ್ತಮುತ್ತಲಿನ ಅಂಗಾಂಶಗಳಿಗೂ ಹಾನಿಯಾಗಿ ಆರೋಪಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು.

ಹೀಗಾಗಿ ವೈದ್ಯರು ಕಾಲು ಕತ್ತರಿಸಲು ನಿರ್ಧರಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕಿ ಹಾಗೂ ಹೆಚ್ಚುವರಿ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಡಿ. ಮಲ್ಲೇಶ್ವರಿ ತಿಳಿಸಿದ್ದಾರೆ.

ಹೇಮಂತ್‌ನ ಎಡಗಾಲಿನ ರಕ್ತನಾಳಗಳಿಗೂ ಹಾನಿಯಾಗಿರುವುದು ಪತ್ತೆಯಾಗಿದೆ. ಹೀಗಾಗಿ ಆ ಕಾಲಿಗೂ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಆತನನ್ನು ಆಪರೇಷನ್ ಥಿಯೇಟರ್‌ನಿಂದ ತೀವ್ರ ವೈದ್ಯಕೀಯ ಆರೈಕೆ ಘಟಕಕ್ಕೆ (ಎಎಂಸಿ) ಸ್ಥಳಾಂತರಿಸಲಾಗಿದೆ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಗಂಭೀರ ಪ್ರಕರಣಗಳು ದಾಖಲು

ಇನ್ನೊಂದೆಡೆ, ಶಾಲಾ ಬಾಲಕಿಯ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಮಂತ್ ವಿರುದ್ಧ ಪೊಲೀಸರು ಹಲವು ಗಂಭೀರ ಆರೋಪಗಳನ್ನು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 109(1) ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

ಚೈನ್ಸಾದಿಂದ ಬಾಲಕಿಯ ಮುಖ ಮತ್ತು ಬೆನ್ನಿನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದಡಿ ಸೆಕ್ಷನ್ 118(1) ಹಾಗೂ ಅಪಾಯಕಾರಿ ಆಯುಧದೊಂದಿಗೆ ಶಾಲೆಯ ಆವರಣಕ್ಕೆ ಅಕ್ರಮವಾಗಿ ನುಗ್ಗಿ ದಾಳಿ ನಡೆಸಿದ ಆರೋಪದಡಿ ಸೆಕ್ಷನ್ 333ನ್ನೂ ಸೇರಿಸಲಾಗಿದೆ.

ದಾಳಿಯ ವೇಳೆ ಬಾಲಕಿಯನ್ನು ರಕ್ಷಿಸಲು ಮುಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೂ ಹೆಚ್ಚುವರಿ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಗಳು ಸಾಬೀತಾದಲ್ಲಿ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಫಲಿತಾಂಶಕ್ಕೆ ಅನುಗುಣವಾಗಿ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

Raptadu school chainsaw attack Accuseds leg amputated
Raptadu School Attack: 'ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದಾಳಿ ನಡೆದು ಹೋಗಿತ್ತು'; ಭಯಾನಕ ಘಟನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ! Video

ಬಾಲಕಿ ಆರೋಗ್ಯದಲ್ಲಿ ಸುಧಾರಣೆ

ಚೈನ್ಸಾ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 10ನೇ ತರಗತಿ ವಿದ್ಯಾರ್ಥಿನಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ವೈ. ಸತ್ಯಕುಮಾರ್ ಅವರ ಪ್ರಕಾರ, ಶಸ್ತ್ರಚಿಕಿತ್ಸೆಯ ಬಳಿಕ ಬಾಲಕಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆದುಹಾಕಲಾಗಿದೆ. ಆಕೆ ವೈದ್ಯರ ಮಾತಿಗೆ ಸ್ಪಂದಿಸಲು ಆರಂಭಿಸಿದ್ದಾಳೆ.

ಈಗ ಕೆಲವು ಪದಗಳನ್ನು ಮಾತನಾಡಲು ಸಾಧ್ಯವಾಗುತ್ತಿದ್ದು, ವೈದ್ಯರು ಕೇಳುವ ಪ್ರಶ್ನೆಗಳಿಗೆ ಮತ್ತು ನೀಡುವ ಸೂಚನೆಗಳಿಗೆ ನಿಧಾನವಾಗಿ ಪ್ರತಿಕ್ರಿಯಿಸುತ್ತಿದ್ದಾಳೆ. ಆಕೆಯ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ತಂಡ ನಿರಂತರ ನಿಗಾ ವಹಿಸಿದೆ. ಮಕ್ಕಳ ತೀವ್ರ ನಿಗಾ ಘಟಕದಲ್ಲಿ (ಪಿಐಸಿಯು) ನೀಡಲಾಗುತ್ತಿದ್ದ ಹೆಚ್ಚಿನ ಪ್ರಮಾಣದ ಆಮ್ಲಜನಕದ ನೆರವನ್ನೂ ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ.

ಮೂಗಿನ ಮೂಲಕ ಅಳವಡಿಸಿರುವ ಕೊಳವೆಯ ಮೂಲಕ ನೀಡಲಾಗುತ್ತಿರುವ ಪೌಷ್ಟಿಕ ಆಹಾರಕ್ಕೆ ಬಾಲಕಿ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ. ರಕ್ತಹೀನತೆ ಕಾಣಿಸಿಕೊಂಡಿದ್ದರಿಂದ ರಕ್ತವನ್ನೂ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೈಕಾಲುಗಳ ಚಲನೆ ಸುಧಾರಿಸಲು ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳಿಗಾಗಿ ಫಿಸಿಯೋಥೆರಪಿಯನ್ನೂ ಆರಂಭಿಸಲಾಗಿದೆ. ಆಕೆಗೆ ಪ್ರತಿಜೀವಕ ಔಷಧ, ನೋವು ನಿವಾರಕಗಳು ಹಾಗೂ ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ವೈದ್ಯರು ಆಕೆಯ ಆರೋಗ್ಯದ ಪ್ರಮುಖ ಸೂಚಕಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

Raptadu school chainsaw attack Accuseds leg amputated
Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿ ಭೀಕರ ದಾಳಿ; ಓರ್ವ ವಿದ್ಯಾರ್ಥಿನಿ ಸಾವು, ಮತ್ತೊಬ್ಬಳಿಗೆ ಗಾಯ! Video

ಪೊಲೀಸರ ಗುಂಡಿನ ದಾಳಿ ಬಗ್ಗೆ ಸ್ವತಂತ್ರ ತನಿಖೆಗೆ ಅರ್ಜಿ

ಇದೇ ವೇಳೆ, ಅನಂತಪುರ ಜಿಲ್ಲೆಯ ಆತ್ಮಕೂರು ಅರಣ್ಯ ಪ್ರದೇಶದಲ್ಲಿ ಹೇಮಂತ್ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಹಾಗೂ ಗಾಯಗೊಂಡ ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಅನುಚಿತವಾಗಿ ನಡೆಸಿಕೊಂಡ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಲಿಸಾ ಗಿಲ್ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಗುಂಡಿನ ದಾಳಿ ವೇಳೆ ಪೊಲೀಸರು ಆರು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಎಳೆದಾಡಿ, ಸರಿಯಾಗಿ ನಿರ್ವಹಿಸಿಲ್ಲ ಎಂದು ಅರ್ಜಿದಾರ ಗುಂಡಾ ಗೋಪಿಕೃಷ್ಣ ಆರೋಪಿಸಿದ್ದಾರೆ.

ಪೊಲೀಸರ ಈ ಕ್ರಮ ಕಾನೂನುಬಾಹಿರ ಮತ್ತು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರ ಪ್ರಭಾವ ಅಥವಾ ಹಸ್ತಕ್ಷೇಪವಿಲ್ಲದೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಬೇಕು. ಸಂಪೂರ್ಣ ಘಟನೆಯ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ನಿಗದಿತ ಅವಧಿಯೊಳಗೆ ತನಿಖೆ ನಡೆಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ. ತಪ್ಪಿತಸ್ಥರೆಂದು ಕಂಡುಬರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X