Raptadu School Attack: ಅಪ್ರಾಪ್ತೆಯ ಹಿಂಬಾಲಿಸುತ್ತಿದ್ದ ಭಗ್ನಪ್ರೇಮಿ, ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!

ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಮೂಲದವನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Raptadu School Attack
ರಾಪ್ತಾಡು ಶಾಲೆ ಮೇಲೆ ದುಷ್ಕರ್ಮಿ ದಾಳಿ
Updated on: 

ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಬ್ಬರು 10ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಚೈನ್ಸಾದಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.

ವಿದ್ಯಾರ್ಥಿನಿಯೊಬ್ಬಳಿಗೆ ಆರೋಪಿ ಈ ಹಿಂದೆ ಪ್ರೀತಿಯ ಪ್ರಸ್ತಾಪ ಮಾಡಿದ್ದ. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡು ದಾಳಿ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಳಿ ನಡೆಸಿದ ಆರೋಪಿಯು ಸಂತ್ರಸ್ತ ವಿದ್ಯಾರ್ಥಿನಿಯ ಸಂಬಂಧಿ (ಚಿಕ್ಕಪ್ಪ) ಎನ್ನಲಾಗಿದೆ. ಆಕೆಯನ್ನು ಆತ ನಿರಂತರವಾಗಿ ಹಿಂಬಾಲಿಸುತ್ತಿದ್ದ (ಸ್ಟಾಕಿಂಗ್) ಎಂಬ ಆರೋಪವೂ ಕೇಳಿಬಂದಿದೆ.

ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಮೂಲದವನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Raptadu School Attack
Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿ ಭೀಕರ ದಾಳಿ; ಓರ್ವ ವಿದ್ಯಾರ್ಥಿನಿ ಸಾವು, ಮತ್ತೊಬ್ಬಳಿಗೆ ಗಾಯ! Video

ತರಗತಿಯೊಳಗೆ ನುಗ್ಗಿ ಚೈನ್ಸಾದಿಂದ ದಾಳಿ!

ಶನಿವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ರಾಪ್ತಾಡು ಗ್ರಾಮದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಎಂದಿನಂತೆ ಪಾಠ ನಡೆಯುತ್ತಿತ್ತು. ಈ ವೇಳೆ ಕೈಯಲ್ಲಿ ಚೈನ್ಸಾ ಹಿಡಿದು ಬಂದ 21 ವರ್ಷದ ಆರೋಪಿ ನೇರವಾಗಿ 10ನೇ ತರಗತಿಯ ಕೊಠಡಿಗೆ ನುಗ್ಗಿದ್ದಾನೆ.

ತರಗತಿಯಲ್ಲಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿದ್ದ ಸಂದರ್ಭದಲ್ಲೇ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಚೈನ್ಸಾದಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಅವರಲ್ಲಿ ಒಬ್ಬಳ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ತಕ್ಷಣ ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ವಿದ್ಯಾರ್ಥಿನಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಘಟನೆಯ ಹಿಂದಿನ ನಿಖರ ಕಾರಣ ಹಾಗೂ ದಾಳಿ ನಡೆದ ಸಂದರ್ಭದ ಸಂಪೂರ್ಣ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಲು 20 ಕೌನ್ಸೆಲರ್‌ಗಳ ನಿಯೋಜನೆ

ಶಾಲೆಯಲ್ಲಿ ನಡೆದ ಭೀಕರ ಘಟನೆಯಿಂದ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶಿಕ್ಷಣ ಸಚಿವ ನಾರಾ ಲೋಕೇಶ್ ವಿಶೇಷ ಕ್ರಮ ಕೈಗೊಂಡಿದ್ದಾರೆ. 10ನೇ ತರಗತಿಯ ಎ ವಿಭಾಗದ 32 ವಿದ್ಯಾರ್ಥಿಗಳು ಹಾಗೂ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರ ಮನೆಗಳಿಗೆ ಭೇಟಿ ನೀಡಲು 20 ಮಾನಸಿಕ ಆರೋಗ್ಯ ಸಲಹೆಗಾರರನ್ನು (ಕೌನ್ಸೆಲರ್‌ಗಳು) ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ರಾಪ್ತಾಡಿನಲ್ಲಿ ನಡೆದ ಅತ್ಯಂತ ಆಘಾತಕಾರಿ ಘಟನೆಯ ಬಳಿಕ ಮಕ್ಕಳ ಸುರಕ್ಷತೆ ಮತ್ತು ಅವರಿಗೆ ಅಗತ್ಯವಾದ ಬೆಂಬಲ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.

"ನಿಯೋಜಿತ 20 ಕೌನ್ಸೆಲರ್‌ಗಳು 10ನೇ ತರಗತಿಯ ಎ ವಿಭಾಗದ ಎಲ್ಲಾ 32 ವಿದ್ಯಾರ್ಥಿಗಳ ಮನೆಗಳಿಗೆ ಹಾಗೂ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮಕ್ಕಳು ಮತ್ತು ಅವರ ಪೋಷಕರೊಂದಿಗೆ ಮಾತನಾಡಿ, ಅವರಿಗೆ ಭಾವನಾತ್ಮಕ ಬೆಂಬಲ ನೀಡುತ್ತಿದ್ದಾರೆ. ಈ ಘಟನೆಯಿಂದ ಉಂಟಾಗಿರುವ ಮಾನಸಿಕ ಆಘಾತದಿಂದ ಹೊರಬರಲು ನೆರವಾಗುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X