ನವದೆಹಲಿ: ಅಮೆರಿಕ ಪ್ರಯಾಣ ಬೆಳೆಸುವ ಭಾರತೀಯ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಸ್ಥೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಮಧ್ಯಪ್ರಾಚ್ಯ ಉದ್ವಿಗ್ನತೆಯ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಮುಂಬೈ ಮತ್ತು ದೆಹಲಿಯಿಂದ ಅಮೆರಿಕದ ಪ್ರಮುಖ ನಗರಗಳಿಗೆ ಇರಾಕ್ ವಾಯುಪ್ರದೇಶದ ಮೂಲಕ ಸಂಚರಿಸುವ ನೇರ ವಿಮಾನ ಹಾರಾಟವನ್ನು ಏರ್ ಇಂಡಿಯಾ ಪುನರಾರಂಭಿಸಿದೆ.
ಈ ಮೂಲಕ ರೋಮ್ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ತಾಂತ್ರಿಕ ನಿಲುಗಡೆ ಮಾಡುವ ಅಗತ್ಯವನ್ನು ತಪ್ಪಿಸಿದೆ.
ಕಳೆದ ಒಂದು ದಶಕದಿಂದ ಕೇವಲ ಸೇನಾ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ಮೀಸಲಾಗಿದ್ದ ಇರಾಕ್‌ನ ವಾಯುಪ್ರದೇಶವನ್ನು ಇತ್ತೀಚೆಗೆ ಮುಕ್ತಗೊಳಿಸಿರುವುದು ವಿಮಾನಯಾನ ಸಂಸ್ಥೆಯ ಮಾರ್ಗ ಬದಲಾವಣೆಗೆ ಅನುಕೂಲ ಮಾಡಿಕೊಟ್ಟಿದೆ.
ಇದರಿಂದ ಪ್ರಯಾಣದ ಅವಧಿ ಮೂರು ಗಂಟೆ ಕಡಿಮೆಯಾಗಿದ್ದು, ಈ ಹಿಂದೆ 21 ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣ ಇದೀಗ 18 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ.
ಏರ್ ಇಂಡಿಯಾ ಅಮೆರಿಕಕ್ಕೆ ಒಟ್ಟು 4 ವಿಮಾನಗಳನ್ನು ನಿರ್ವಹಿಸುತ್ತಿದ್ದು, ಎರಡು ವಿಮಾನಗಳು ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣಕ್ಕೆ ಹಾಗೂ ಮತ್ತೆರಡು ನ್ಯೂವಾರ್ಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತವೆ.
ಇರಾಕ್‌ನ ವಾಯುಪ್ರದೇಶ ಮುಚ್ಚಿದ್ದರಿಂದ ಅಮೆರಿಕಕ್ಕೆ ತೆರಳುವ ಅತಿ ದೂರದ ವಿಮಾನಗಳು ಸುತ್ತು ಬಳಸಿ ಸಂಚರಿಸಬೇಕಾಗಿತ್ತು. ಮಾರ್ಗಮಧ್ಯೆ ಇಂಧನ ತುಂಬಿಸಿಕೊಳ್ಳಲು ರೋಮ್ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ವಿಮಾನದಿಂದ ಕೆಳಗಿಳಿಯಲು ಅವಕಾಶವಿರಲಿಲ್ಲ ಎಂದು ಏರ್ ಇಂಡಿಯಾ ಮೂಲವೊಂದು ತಿಳಿಸಿದೆ.
ಹಿಂದೆ ತಡೆರಹಿತ ವಿಮಾನ ಸೇವೆ ನೀಡುವ ಮೂಲಕ ಎಮಿರೇಟ್ಸ್, ಕತಾರ್ ಮತ್ತು ಎತಿಹಾದ್‌ನಂತಹ ಪ್ರಮುಖ ಗಲ್ಫ್ ವಿಮಾನಯಾನ ಸಂಸ್ಥೆಗಳಿಗಿಂತ ನಾವು ಹೆಚ್ಚಿನ ಅನುಕೂಲ ಹೊಂದಿದ್ದೆವು. ಆ ಸಂಸ್ಥೆಗಳ ವಿಮಾನಗಳು ಮಾರ್ಗಮಧ್ಯೆ ಗಲ್ಫ್ ರಾಷ್ಟ್ರಗಳಲ್ಲಿ ನಿಲುಗಡೆ ಮಾಡುತ್ತಿದ್ದವು. ಇದೀಗ ನಮ್ಮ ವಿಶೇಷ ಅನುಕೂಲ ಮತ್ತೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರದಿಂದ ದೆಹಲಿಯಿಂದ ಹೊರಡುವ ಎರಡು ವಿಮಾನಗಳು ರಾಜಸ್ಥಾನ, ಗುಜರಾತ್, ಓಮನ್, ಯುಎಇ, ಕುವೈತ್ ಮತ್ತು ಇರಾಕ್ ವಾಯುಪ್ರದೇಶದ ಮೂಲಕ ಟರ್ಕಿ ತಲುಪಿ, ಅಲ್ಲಿಂದ ಯುರೋಪ್ ಮಾರ್ಗವಾಗಿ ಅಮೆರಿಕಕ್ಕೆ ತೆರಳಿವೆ ಎಂದು ಮತ್ತೊಂದು ಮೂಲ ವಿವರಿಸಿದೆ.
ಇರಾಕ್‌ನ ವಾಯುಪ್ರದೇಶ ಮುಚ್ಚಿದ್ದ ಸಂದರ್ಭದಲ್ಲಿ ದೆಹಲಿಯಿಂದ ಹೊರಟ ವಿಮಾನಗಳು ಭಾರತದ ವಾಯುಪ್ರದೇಶ ದಾಟಿದ ಬಳಿಕ ಓಮನ್, ಯೆಮೆನ್ ಮತ್ತು ಸೌದಿ ಅರೇಬಿಯಾದ ದಕ್ಷಿಣ ಭಾಗದ ಮೇಲೆ ಹಾರಾಟ ನಡೆಸಿ, ಇಂಧನ ತುಂಬಿಸಿಕೊಳ್ಳಲು ರೋಮ್‌ಗೆ ತೆರಳುತ್ತಿದ್ದವು. ಅರೇಬಿಯನ್ ಸಮುದ್ರದ ಮೇಲೆ ಹಾರಾಟ ನಡೆಸಿ ಗಲ್ಫ್ ಪ್ರದೇಶ ಪ್ರವೇಶಿಸುತ್ತಿದ್ದ ಮುಂಬೈನ ವಿಮಾನಗಳೂ ಇದೇ ಮಾರ್ಗವನ್ನು ಅನುಸರಿಸುತ್ತಿದ್ದವು.
ಮಾರ್ಗ ಬದಲಾವಣೆಯನ್ನು ದೃಢಪಡಿಸಿರುವ ಏರ್ ಇಂಡಿಯಾ ಅಧಿಕಾರಿಯೊಬ್ಬರು, ಜಾಗತಿಕ ವಾಯುಪ್ರದೇಶದಲ್ಲಿ ಹೆಚ್ಚುತ್ತಿರುವ ಆಯ್ಕೆಗಳಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಮಾರ್ಗ ಯೋಜನೆಯಲ್ಲಿ ಈಗ ನಮಗೆ ಹೆಚ್ಚಿನ ನಮ್ಯತೆ ದೊರೆತಿದೆ ಎಂದು ಹೇಳಿದ್ದಾರೆ.
ವಿಮಾನ ಇಂಧನದ ಬೆಲೆ ನಿರಂತರವಾಗಿ ಏರುತ್ತಿರುವ ಸಂದರ್ಭದಲ್ಲಿ ಹೊಸ ಮಾರ್ಗದಿಂದ ಇಂಧನ ವೆಚ್ಚ ಕಡಿಮೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೂಲವೊಂದು, ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆ ಸಾಮರ್ಥ್ಯದ ಮೇಲಿನ ನಿರ್ಬಂಧಗಳಿಂದಾಗಿ ಈ ಲಾಭ ಸರಿದೂಗುತ್ತದೆ ಎಂದು ತಿಳಿಸಿದೆ.
ವಿಮಾನದಲ್ಲಿ ಪೂರ್ಣ ಪ್ರಮಾಣದ ಇಂಧನ ತುಂಬಿಸಿಕೊಂಡು ಹಾರಾಟ ನಡೆಸಿದಾಗ ಅದರ ಒಟ್ಟು ತೂಕ ಹೆಚ್ಚಾಗುತ್ತದೆ. ಇದರಿಂದ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಬೇಕಾಗುತ್ತದೆ. ಹೀಗಾಗಿ ಇಂಧನ ವೆಚ್ಚದಲ್ಲಿ ಸಿಗುವ ಅನುಕೂಲವನ್ನು ಇತರ ಅಂಶಗಳು ಸರಿದೂಗಿಸುತ್ತವೆ ಎಂದು ಮೂಲ ವಿವರಿಸಿದೆ.