ಮುರಿಯದ ಮನೋಬಲ, ಕುಗ್ಗದ ಸಾಧನೆಯ ಹಂಬಲ: ಗಾಯಗೊಂಡರೂ ಛಲ ಬಿಡದ ಸೈನಿಕರು; Asian Para Games ಸಾಧಕ ಯೋಧರಿಗೆ ಸೇನಾ ಮುಖ್ಯಸ್ಥರಿಂದ ಸನ್ಮಾನ..!

ಗಾಯಗೊಂಡ ಸೈನಿಕರ ಪುನರ್ವಸತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಗೆ ಸೇನೆ ನಿರಂತರವಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಈ ಪದಕಗಳು ಸಾಕ್ಷಿಯಾಗಿವೆ.
Army chief Gen Dhiraj Seth on Thursday felicitated the six soldier-athletes, who won one gold, two silver and three bronze at Aichi-Nagoya last month.
ಧಕ ಯೋಧರಿಗೆ ಸೇನಾ ಮುಖ್ಯಸ್ಥರಿಂದ ಸನ್ಮಾನ.
Updated on: 

ನವದೆಹಲಿ: ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಿ ತೀವ್ರವಾಗಿ ಗಾಯಗೊಂಡು ಅಂಗವೈಕಲ್ಯಕ್ಕೆ ಒಳಗಾಗಿದ್ದರೂ, ಅದನ್ನೇ ಸವಾಲಾಗಿ ಸ್ವೀಕರಿಸಿ ಕ್ರೀಡಾ ಲೋಕದಲ್ಲಿ ಭಾರತದ ಧ್ವಜವನ್ನು ಎತ್ತಿಹಿಡಿದ ಆರು ವೀರ ಯೋಧರನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಅವರು ನವದೆಹಲಿಯಲ್ಲಿ ಸನ್ಮಾನಿಸಿ ಗೌರವಿಸಿದರು.

ಜಪಾನ್‌ನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಸೇನೆಯ ಒಟ್ಟು 9 ಕ್ರೀಡಾಪಟುಗಳು ಭಾಗವಹಿಸಿದ್ದು, ಈ ಪೈಕಿ ಆರು ಯೋಧರು 1 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಗಾಯಗೊಂಡ ಸೈನಿಕರ ಪುನರ್ವಸತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಗೆ ಸೇನೆ ನಿರಂತರವಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ಈ ಪದಕಗಳು ಸಾಕ್ಷಿಯಾಗಿವೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆರು ಮಂದಿಯಲ್ಲಿ ನಾಲ್ವರು ಏಷ್ಯನ್, ವಿಶ್ವಮಟ್ಟದ ಅಥವಾ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಈ ಹಿಂದೆಯೂ ಪದಕ ಗೆದ್ದ ಸಾಧಕರು.

ಇವರಲ್ಲಿ ಗಮನ ಸೆಳೆದ ಸಾಧಕ 21 ಮದ್ರಾಸ್ ರೆಜಿಮೆಂಟ್‌ನ ಸುಬೇದಾರ್ ಡಿ. ಸೋಲೈರಾಜ್. 2018ರಲ್ಲಿ ಬಟಾಲಿಕ್ ಪ್ರದೇಶದ ತೀವ್ರ ಚಳಿಯಿಂದಾಗಿ ಅವರ ಎಡಗಾಲಿಗೆ ರಕ್ತ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ಮೊಣಕಾಲಿನ ಕೆಳಭಾಗದಿಂದ ಕಾಲನ್ನು ಕತ್ತರಿಸಬೇಕಾಯಿತು.

ತಮಿಳುನಾಡಿನ ತೂತುಕುಡಿ ಮೂಲದ ಈ ಯೋಧ, ಇದೀಗ 7.15 ಮೀಟರ್ ಜಿಗಿತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಸತತ ಮೂರನೇ ವರ್ಷ ಏಷ್ಯನ್ ದಾಖಲೆಯನ್ನೂ ಮುರಿದಿದ್ದಾರೆ.

9 ಅಸ್ಸಾಂ ರೆಜಿಮೆಂಟ್‌ನ ಸುಬೇದಾರ್ ಎಚ್. ಹೊಕಾಟೊ ಸೇಮಾ ಅವರ ಸಾಧನೆಯೂ ಅಷ್ಟೇ ಸ್ಫೂರ್ತಿದಾಯಕವಾಗಿದೆ. ಸೇನೆಗೆ ಸೇರಿ ಕೇವಲ 16 ತಿಂಗಳಾಗಿದ್ದಾಗ, 2002ರಲ್ಲಿ ಚೌಕಿಬಾಲ್‌ನಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಅವರು ಎಡಗಾಲನ್ನು ಮೊಣಕಾಲಿನ ಕೆಳಭಾಗದಿಂದ ಕಳೆದುಕೊಂಡಿದ್ದರು.

ನಾಗಾಲ್ಯಾಂಡ್ ಮೂಲದ ಈ ಯೋಧ, 24 ವರ್ಷಗಳ ಬಳಿಕ ಗುಂಡು ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2023ರ ಹ್ಯಾಂಗ್‌ಝೌ ಮತ್ತು 2024ರ ಪ್ಯಾರಿಸ್ ಕ್ರೀಡಾಕೂಟಗಳಲ್ಲೂ ಅವರು ಕಂಚು ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಾಗಾಲ್ಯಾಂಡ್‌ನ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Army chief Gen Dhiraj Seth on Thursday felicitated the six soldier-athletes, who won one gold, two silver and three bronze at Aichi-Nagoya last month.
Asian Para Games: ಭಾರತಕ್ಕೆ 9 ಚಿನ್ನ ಸೇರಿ ಒಟ್ಟು 35 ಪದಕ

12 ಡೋಗ್ರಾ ರೆಜಿಮೆಂಟ್‌ನ ಸುಬೇದಾರ್ ಅಜಯ್ ಕುಮಾರ್ ಅವರ ತಂದೆ ಚುನ್ನಿ ಲಾಲ್ ಕೂಡ ಇದೇ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದರು. 2017ರಲ್ಲಿ ಉರಿ ಸೆಕ್ಟರ್'ನಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಅಜಯ್ ತಮ್ಮ ಎಡಗಾಲನ್ನು ಮೊಣಕಾಲಿನ ಕೆಳಭಾಗದಿಂದ ಕಳೆದುಕೊಂಡಿದ್ದರು.

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯವರಾದ ಅವರು, ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದರು. ಈ ಬಾರಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ದೇವೇಂದರ್ ಕುಮಾರ್ ಇಬ್ಬರು ಸೈನಿಕರೊಂದಿಗೆ ಅಖಿಲ ಭಾರತ ಡಿಸ್ಕಸ್ ಪೋಡಿಯಂ ಅನ್ನು ಮುನ್ನಡೆಸಿದರು.16 ರಾಜಪುತಾನಾ ರೈಫಲ್ಸ್‌ನ ಹವಿಲ್ದಾರ್ ಪ್ರದೀಪ್ ಕುಮಾರ್ ಕೂಡ ಈ ಸಾಧನೆಯ ಭಾಗವಾಗಿದ್ದಾರೆ. 2019ರಲ್ಲಿ ಸುಂದರ್‌ಬನಿಯಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಿಂದಾಗಿ ಅವರ ಎಡಪಾದದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಅವರು, ಈ ಬಾರಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ.

ಇದು ವೇದಿಕೆಯಲ್ಲಿದ್ದವರ ಪೈಕಿ ಅತ್ಯಂತ ದೂರದ ಎಸೆತವಾಗಿದ್ದರೂ, ಈ ಸ್ಪರ್ಧೆಯಲ್ಲಿ ವಿವಿಧ ಅಂಗವೈಕಲ್ಯ ವರ್ಗಗಳ ಕ್ರೀಡಾಪಟುಗಳ ಸಾಧನೆಯನ್ನು ಅಂಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.

629 ಎಸ್‌ಎಟಿಎ ಬ್ಯಾಟರಿಯ ಹವಿಲ್ದಾರ್ ರಾಕೇಶ್ ಕುಂಡು ಈ ತಂಡದ ಹೊಸ ಪ್ಯಾರಾ ಕ್ರೀಡಾಪಟು. 2018ರಲ್ಲಿ ಹೈದರಾಬಾದ್‌ನ ಫಿರಂಗಿ ತರಬೇತಿ ಕೇಂದ್ರದಲ್ಲಿ ಗಾಯಗೊಂಡಿದ್ದರಿಂದ ಅವರ ಪಾದದ ಚಲನೆಯ ಸಾಮರ್ಥ್ಯ ಕುಂದಿತ್ತು.

2023ರಲ್ಲಿ ಅವರು ಸೇನೆಯ ಪ್ಯಾರಾಲಿಂಪಿಕ್ ಕೇಂದ್ರಕ್ಕೆ ಸೇರಿದ್ದರು. ಹರಿಯಾಣದ ರೋಹ್ಟಕ್ ಜಿಲ್ಲೆಯ ಟಿಟೌಲಿ ಗ್ರಾಮದ ನಿವಾಸಿಯಾಗಿರುವ ಅವರು, ಬೆಳ್ಳಿ ಪದಕದೊಂದಿಗೆ ಮನೆಗೆ ಮರಳಿದ ಬಳಿಕ ಅದನ್ನು ತಮ್ಮ ತಾತ ಹವಾ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ.

ಈಜು ಸ್ಪರ್ಧೆಯಲ್ಲೂ ಭಾರತೀಯ ಯೋಧನ ಸಾಧನೆ ಗಮನ ಸೆಳೆದಿದೆ. 5 ರಾಜಪುತ ರೆಜಿಮೆಂಟ್‌ನ ಹವಿಲ್ದಾರ್ ಕಪಿಲ್ ಕುಮಾರ್ 2020ರಲ್ಲಿ ಪೂಂಚ್‌ನಲ್ಲಿ ಗಾಯಗೊಂಡಿದ್ದರು. ಈ ಬಾರಿ 400 ಮೀಟರ್ ಫ್ರೀಸ್ಟೈಲ್ ಎಸ್10 ವಿಭಾಗದಲ್ಲಿ ಇರಾನ್‌ನ ಶಾಹಿನ್ ಇಜಾದಿಯಾರ್ ಅವರನ್ನು 0.21 ಸೆಕೆಂಡ್‌ಗಳ ಅಂತರದಿಂದ ಹಿಂದಿಕ್ಕಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಇದೇ ಸಮಾರಂಭದಲ್ಲಿ ಜನರಲ್ ಸೇಠ್ ಅವರು ಸಿಮ್ರನ್ ಶರ್ಮಾ ಅವರನ್ನೂ ಸನ್ಮಾನಿಸಿದರು. ಅಕಾಲಿಕವಾಗಿ ಜನಿಸಿದ ಕಾರಣ ದೃಷ್ಟಿದೋಷ ಹೊಂದಿರುವ ಸಿಮ್ರನ್, 100 ಮತ್ತು 200 ಮೀಟರ್ ಟಿ12 ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರ ಪತಿ ಹಾಗೂ ತರಬೇತುದಾರ ನಾಯಕ್ ಗಜೇಂದರ್ ಸೇನೆಯ ಸರ್ವೀಸ್ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಾಧನೆಗಳ ಹಿಂದೆ ಪುಣೆಯ ಕಿರ್ಕಿಯಲ್ಲಿ 2017ರಲ್ಲಿ ಸ್ಥಾಪನೆಯಾದ ಸೇನೆಯ ಪ್ಯಾರಾಲಿಂಪಿಕ್ ಕೇಂದ್ರದ ಮಹತ್ವದ ಪಾತ್ರವಿದೆ.

ಕೃತಕ ಅಂಗ ಕೇಂದ್ರ ಮತ್ತು ಬೆನ್ನುಹುರಿ ಗಾಯಗಳ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಈ ಘಟಕ ಕಾರ್ಯನಿರ್ವಹಿಸುತ್ತಿದೆ. ಗಾಯಗೊಂಡ ಸೈನಿಕರಿಗೆ ವಿಶೇಷ ವೈದ್ಯಕೀಯ ಆರೈಕೆ, ಕೃತಕ ಅಂಗಗಳ ನೆರವು, ಪುನರ್ವಸತಿ ಹಾಗೂ ಕ್ರಮಬದ್ಧ ಕ್ರೀಡಾ ತರಬೇತಿಯನ್ನು ಇಲ್ಲಿ ಒದಗಿಸಲಾಗುತ್ತದೆ.

ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಸೇನೆಯ ಪ್ಯಾರಾ ಕ್ರೀಡಾಪಟುಗಳು ಏಳು ಪದಕಗಳನ್ನು ಗೆದ್ದಿದ್ದರೆ, ಈ ಬಾರಿ ಆರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಭಾರತ ಒಟ್ಟಾರೆ 114 ಪದಕಗಳನ್ನು ಗೆದ್ದು ದಾಖಲೆಯ ಸಾಧನೆಯೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಈ ನಡುವೆ ಸೋಲೈರಾಜ್ ಅವರಿಗೆ ತಮಿಳುನಾಡು ಸರ್ಕಾರ 75 ಲಕ್ಷ ರೂ. ಬಹುಮಾನ ಘೋಷಿಸಿದೆ. ಇದೀಗ ಅವರ ಮುಂದಿನ ಗುರಿ 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X