'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಇಂಧನ ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ಈ ಮಾದರಿಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದರು.
Rahul Gandhi
ರಾಹುಲ್ ಗಾಂಧಿ
Updated on: 

ನವದೆಹಲಿ: ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳ ಪ್ರಯೋಗಾಲಯ ಪರೀಕ್ಷೆಗಳನ್ನು ಉಲ್ಲೇಖಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ನಿಗದಿತ ಮಿತಿಯಾದ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಪೂರೈಕೆ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಶನಿವಾರ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ಮಾನ್ಯತೆ ಪಡೆದ ಪ್ರಯೋಗಾಲಯವೊಂದರಲ್ಲಿ ಪರೀಕ್ಷಿಸಲಾದ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನು ಟೀಕಿಸಿದ ಗಾಂಧಿ, 'E20 ಎಂಬುದು '420' ಆಗಿ ಬದಲಾಗಿದೆ - ಇದು ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಅನ್ನು ಕದಿಯುತ್ತಿದೆ!. ಸಾರ್ವಜನಿಕ ಮತ್ತು ಖಾಸಗಿ ವಲಯದ ಇಂಧನ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಎಥೆನಾಲ್ ಅನ್ನು ಮಿಶ್ರಣ ಮಾಡುತ್ತಿವೆ. ಇದು ಇವುಗಳ ಪರೀಕ್ಷಾ ಪ್ರಕ್ರಿಯೆಗಳಲ್ಲಿನ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ ಎಂದು ದೂರಿದರು.

ರಾಹುಲ್ ಗಾಂಧಿ ಉಲ್ಲೇಖಿಸಿದ ಮಾಹಿತಿ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ಕ್ರಮವಾಗಿ ಶೇ 31.2 ಮತ್ತು ಶೇ 30.5 ರಷ್ಟಿರುವುದು ಕಂಡುಬಂದಿದೆ.

ಕರ್ನಾಟಕದ ಏಳು ಜಿಲ್ಲೆಗಳಾದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರಿನಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಪರೀಕ್ಷಾ ಪ್ರಕ್ರಿಯೆಯಲ್ಲಿ ಇಂಧನ ಮಾದರಿಗಳನ್ನು ಒಳಗೊಂಡಿದ್ದ ಕಂಪನಿಗಳ ಪೈಕಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ನಯಾರಾ ಎನರ್ಜಿ ಮತ್ತು ಶೆಲ್ (Shell) ಸೇರಿವೆ ಎಂದು ಗಾಂಧಿ ಉಲ್ಲೇಖಿಸಿದರು.

Rahul Gandhi
Watch | 63 ಪೆಟ್ರೋಲ್ ಮಾದರಿ ಪರೀಕ್ಷೆ; ಎಥೆನಾಲ್ ಪ್ರಮಾಣ 20% ಕ್ಕಿಂತ ಹೆಚ್ಚು ಪತ್ತೆ!

ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ಈ ಮಾದರಿಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದರು.

'ಮೋದಿ ಜೀ, ನಮಗೆ ಹೇಳಿ - ದೇಶದ ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಏನು ತುಂಬಲಾಗುತ್ತಿದೆ? ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥೆನಾಲ್ ಇದೆ? ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಅನ್ನು ಬೆರೆಸುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ? ಮತ್ತು ಚರ್ಚೆಗೆ ನೀಡಿದ ಸವಾಲು ಇನ್ನೂ ಹಾಗೆಯೇ ಇದೆ. ಇದರೊಂದಿಗೆ ಮತ್ತೊಂದು ವಿಷಯವನ್ನೂ ಸೇರಿಸೋಣ - ನಿಮ್ಮ ನೀತಿಗಳಿಂದ ವಾಸ್ತವವಾಗಿ ಯಾರಿಗೆ ಲಾಭವಾಗುತ್ತಿದೆ?' ಎಂದು ಅವರು ಹೇಳಿದರು.

ರಾಜ್ಯದ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ನಡುವೆ ವಿವಾದವೊಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ.

ಬೆಂಗಳೂರಿನಲ್ಲಿರುವ, NABL ಮಾನ್ಯತೆ ಪಡೆದ ಮತ್ತು ISO ಪ್ರಮಾಣೀಕೃತ 'ಶ್ರೀರಾಮ್ ರಿಸರ್ಚ್ ಇನ್‌ಸ್ಟಿಟ್ಯೂಟ್' ನಡೆಸಿದ ಪರೀಕ್ಷೆಗಳಲ್ಲಿ, ಪೆಟ್ರೋಲ್‌ನ ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ನಿಗದಿತ ಮಿತಿಯಾದ ಶೇ 20ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ ಎಂದು ಕರ್ನಾಟಕದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಈ ಹಿಂದೆ ತಿಳಿಸಿದ್ದರು.

ಮಾದರಿಗಳನ್ನು ಆರಂಭದಲ್ಲಿ ಐಒಸಿಎಲ್ (IOCL) ಮತ್ತು ಬಿಪಿಸಿಎಲ್ (BPCL) ನ ಆಂತರಿಕ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ, ಆ ವರದಿಗಳಲ್ಲಿ ಎಥೆನಾಲ್ ಪ್ರಮಾಣದ ಬಗ್ಗೆ ಮಾಹಿತಿ ಇರಲಿಲ್ಲ; ಹೀಗಾಗಿ ಸ್ವತಂತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು ಎಂದು ರಾಜ್ಯ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X