ಗಾಜಿಯಾಬಾದ್ ಪೊಲೀಸ್ ಔಟ್ ಪೋಸ್ಟ್ ಸ್ಫೋಟ: ಹೊಣೆ ಹೊತ್ತ 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆ, ATS ತನಿಖೆ ಶುರು!

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಕೂಡ ಈ ತನಿಖೆಯಲ್ಲಿ ಪಾಲ್ಗೊಂಡಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ವಸುಂಧರಾ ಪೊಲೀಸ್ ಹೊರಠಾಣೆಯಲ್ಲಿ ಈ ಸ್ಫೋಟ ಸಂಭವಿಸಿದೆ.
police at spot
ಸ್ಫೋಟದ ಸ್ಥಳದಲ್ಲಿ ಪೊಲೀಸರು
Updated on: 

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸ್ ಹೊರಠಾಣೆಯೊಂದರಲ್ಲಿ ನಡೆದ ಸ್ಫೋಟದ ಹೊಣೆಯನ್ನು 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರ ಮೂಲಕ ಹೊತ್ತುಕೊಂಡಿದ್ದು, ಈ ಕುರಿತ ತನಿಖೆ ಆರಂಭವಾಗಿದೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಕೂಡ ಈ ತನಿಖೆಯಲ್ಲಿ ಪಾಲ್ಗೊಂಡಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ವಸುಂಧರಾ ಪೊಲೀಸ್ ಹೊರಠಾಣೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಲ್ಲಿನ ಎರಡು ಗಾಜಿನ ಕಿಟಕಿಗಳು ಪುಡಿಪುಡಿಯಾಗಿವೆ. ಈ ಘಟನೆಯಲ್ಲಿ ಆಹಾರ ವಿತರಣಾ ಸಿಬ್ಬಂದಿಯೊಬ್ಬರು (ಫುಡ್ ಡೆಲಿವರಿ ವರ್ಕರ್) ಗಾಯಗೊಂಡಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

'ತೆಹ್ರೀಕ್-ಎ-ಮುಜಾಹಿದ್ದೀನ್-ಎ-ಹಿಂದೂಸ್ತಾನ್' ಎಂದು ಕರೆದುಕೊಳ್ಳುವ ಉಗ್ರರ ಗುಂಪೊಂದು ಈ ಪೋಸ್ಟ್ ಮಾಡಿದ್ದು, ಕೇಸರಿ ಸರ್ಕಾರದ ವಿರುದ್ಧದ ಕ್ರಮವಾಗಿ ಪೊಲೀಸರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ತಮ್ಮ ಮನೆ, ಮಸೀದಿ, ನಂಬಿಕೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡುವ ಹಕ್ಕು ತಮಗಿದೆ ಎಂದು ಪ್ರತಿಪಾದಿಸಿರುವ ಆ ಗುಂಪು, ಈಗಿರುವುದು ಅಕ್ರಮ ಸರ್ಕಾರ ಎಂದು ಹೇಳಿದೆ.

ಆದಾಗ್ಯೂ, ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಅಥವಾ ಅದರಲ್ಲಿ ಮಾಡಲಾದ ಹೇಳಿಕೆಗಳನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ವರದಿಗಳ ಪ್ರಕಾರ, 'ಗಾಜಿ 2' (Gazi 2) ಹೆಸರಿನ 'ಎಕ್ಸ್' (X) ಖಾತೆಯ ಮೂಲಕ ಈ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ವಸುಂಧರಾ ಹೊರಠಾಣೆಯಲ್ಲಿ ನಡೆದ ಸ್ಫೋಟದ ಹಿಂದೆ ತಮ್ಮ ಗುಂಪು ಇದೆ ಎಂದು ಆ ಖಾತೆಯಲ್ಲಿ ಹೇಳಿಕೊಳ್ಳಲಾಗಿದ್ದು, ಜೊತೆಗೆ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿಯೂ ಬೆದರಿಕೆ ಹಾಕಲಾಗಿದೆ.

ಪೊಲೀಸರು ಈ ಪೋಸ್ಟ್ ಅನ್ನು ಪರಿಶೀಲಿಸುತ್ತಿದ್ದು, ಇದರಲ್ಲಿ ನೀಡಿರುವ ಹೇಳಿಕೆ ನಿಜವೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದ ಸನ್ನಿವೇಶಗಳನ್ನು ತನಿಖೆ ನಡೆಸಲು ಎಟಿಎಸ್ (ATS) ತಂಡವೊಂದು ಸ್ಥಳಕ್ಕೆ ಆಗಮಿಸಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯಬಹುದು ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

police at spot
ರಾಜಸ್ಥಾನ ATS ಪ್ರಮುಖ ಕಾರ್ಯಾಚರಣೆ: ಜೈಶ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಬಬಿತಾ ಬಂಧನ

ಇತ್ತೀಚೆಗಷ್ಟೇ, ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮತ್ತು ಶೆಹಜಾದ್ ಭಟ್ಟಿ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದ ಗುಂಪೊಂದನ್ನು ರಾಜ್ಯ ಪೊಲೀಸರು ಪತ್ತೆಹಚ್ಚಿ ಭೇದಿಸಿದ್ದರು. ಆರೋಪಿಗಳು ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಲು ಯೋಜನೆ ರೂಪಿಸಿದ್ದರು ಎಂದು ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದರು. ವಸುಂಧರಾ ಪೊಲೀಸ್ ಹೊರಠಾಣೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಈ ಹೇಳಿಕೆ ಇನ್ನೂ ದೃಢಪಟ್ಟಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X