

ನವದೆಹಲಿ: ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು, ಕಳೆದ 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿಯನ್ನು ನೋಡಿ ಎಂದು ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಶನಿವಾರ ತಿರುಗೇಟು ನೀಡಿದೆ.
ಜೂನ್ 25, 1975 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯನ್ನು "ಸಮರ್ಥನೆ" ಮಾಡಿಕೊಂಡ ಸೋನಿಯಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, "ಅವರ ಸಾರ್ವಜನಿಕ ಸಂಪರ್ಕ ಚಟುವಟಿಕೆ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ" ಎಂದು ಹೇಳಿದೆ.
"ಸೋನಿಯಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ! ಅವರು ಇಂದಿರಾ ಗಾಂಧಿಯವರನ್ನು ಸಂತ್ರಸ್ತೆಯಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ, ಆದರೆ ಅವರ ಈ ಪ್ರಚಾರ ತಂತ್ರ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದ್ದರು; ಇನ್ನು ರಾಜೀವ್ ಗಾಂಧಿಯವರು, 1984ರಲ್ಲಿ ಸಿಖ್ಖರ ಹತ್ಯಾಕಾಂಡವನ್ನು ಸಮರ್ಥಿಸಿಕೊಳ್ಳುತ್ತಾ 'ಒಂದು ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ' ಎಂಬ ತಮ್ಮ ಕುಖ್ಯಾತ ಹೇಳಿಕೆಯ ಮೂಲಕ ಆ ಪರಂಪರೆಯನ್ನು ಮುಂದುವರಿಸಿದರು! ದೇಶವು ಗಾಂಧಿ ಕುಟುಂಬವನ್ನು ಕ್ಷಮಿಸಿಲ್ಲ, ಮುಂದೆಯೂ ಕ್ಷಮಿಸುವುದಿಲ್ಲ!" ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂಬ ಸೋನಿಯಾ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ತರುಣ್ ಚುಗ್, ಸೋನಿಯಾ ಗಾಂಧಿಯವರು ತಮ್ಮ ಇಟಾಲಿಯನ್ ಕನ್ನಡಕ ತೆಗೆದು ಭಾರತದ ಪ್ರಗತಿಯನ್ನು ನೋಡಬೇಕು. ಕಳೆದ 12 ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ ಮತ್ತು ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ನಂಬಿಕೆಯ ಹೊಸ ಅಲೆ ಗೋಚರಿಸುತ್ತಿದೆ, ಆದರೆ ಸೋನಿಯಾ ಗಾಂಧಿ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಬೆಳಕಿಗೆ ಬಂದ ಹಗರಣಗಳ ಬಗ್ಗೆಯೂ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಬೇಕು. ಜಾತಿ, ಧರ್ಮ ಮತ್ತು ಮತ ಬ್ಯಾಂಕ್ ರಾಜಕೀಯದ ಮೂಲಕ ದೇಶವನ್ನು ವಿಭಜಿಸುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಕಿಡಿಕಾರಿದ್ದಾರೆ.