Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

544 ಪುಟಗಳ ಕೃತಿಯಲ್ಲಿ ಬಾಬ್ರಿ ಮಸೀದಿ ಧ್ವಂಸವನ್ನು ನೆನಪಿಸಿಕೊಳ್ಳುವುದರಿಂದ ಹಿಡಿದು, ತಮ್ಮ ಪತಿ ರಾಜೀವ್ ಗಾಂಧಿ ಅವರ ಹತ್ಯೆ, ಕ್ಯಾನ್ಸರ್ ವಿರುದ್ಧದ ಹೋರಾಟ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಏಕೆ ನಿರಾಕರಿಸಿದರು, ತಮ್ಮ ವೈಯಕ್ತಿಕ ಜೀವನ ಸೇರಿದಂತೆ ಹಲವು ಘಟನೆಗಳ ಬಗ್ಗೆ ವಿವರಿಸಿದ್ದಾರೆ.
Indira Gandhi - Sonia Gandhi
ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ
Updated on: 

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ 544 ಪುಟಗಳ ಕೃತಿಯಲ್ಲಿ ಬಾಬರಿ ಮಸೀದಿ ಧ್ವಂಸವನ್ನು ನೆನಪಿಸಿಕೊಳ್ಳುವುದರಿಂದ ಹಿಡಿದು, ತಮ್ಮ ಪತಿ ರಾಜೀವ್ ಗಾಂಧಿ ಅವರ ಹತ್ಯೆ, ಕ್ಯಾನ್ಸರ್ ವಿರುದ್ಧದ ಹೋರಾಟ ಹಾಗೂ 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಏಕೆ ನಿರಾಕರಿಸಿದರು, ತಮ್ಮ ವೈಯಕ್ತಿಕ ಜೀವನ ಹಾಗೂ ಭಾರತದ ರಾಜಕೀಯ ಇತಿಹಾಸದ ಹಲವು ಘಟನೆಗಳ ಬಗ್ಗೆ ವಿವರಿಸಿದ್ದಾರೆ.

ಮಂಗಳವಾರ ಬಿಡುಗಡೆಯಾದ ಈ ಪುಸ್ತಕವು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ನೆಹರು-ಗಾಂಧಿ ಕುಟುಂಬವನ್ನು ಸಮರ್ಥಿಸಿಕೊಳ್ಳಲು ಸೋನಿಯಾ ಗಾಂಧಿ ಇತಿಹಾಸದ ಘಟನೆಗಳನ್ನು ಆಯ್ದುಕೊಂಡು ವಿವರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಕಾಂಗ್ರೆಸ್ ನಾಯಕರು, ಅವರ ವೈಯಕ್ತಿಕ ನೆನಪುಗಳನ್ನು ರಾಜಕೀಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಈ ಆತ್ಮಕಥನದಲ್ಲಿ ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದ ಹಲವು ವಿವಾದಾತ್ಮಕ ಘಟನೆಗಳನ್ನು ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ 1984ರ ಆಪರೇಷನ್ ಬ್ಲೂಸ್ಟಾರ್, ತುರ್ತು ಪರಿಸ್ಥಿತಿ, 1992ರ ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್ ಗಲಭೆ, ಶಾ ಬಾನೋ ವಿವಾದ ಹಾಗೂ ಯುಪಿಎ ಸರ್ಕಾರಕ್ಕೆ ಸವಾಲಾಗಿದ್ದ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿ ಪ್ರಮುಖವಾಗಿವೆ.

ಇದರ ಜೊತೆಗೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳು, ರಾಜಕೀಯ ಪ್ರವೇಶಿಸಲು ತಮಗಿದ್ದ ಆರಂಭಿಕ ಹಿಂಜರಿಕೆ, ಕ್ಯಾನ್ಸರ್ ಸಂಬಂಧಿತ ಎರಡು ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಇಟಲಿಯ ಜೀವನಶೈಲಿಯಿಂದ ಭಾರತದ ರಾಜಕೀಯ ಜೀವನಕ್ಕೆ ಹೊಂದಿಕೊಳ್ಳುವವರೆಗಿನ ತಮ್ಮ ವೈಯಕ್ತಿಕ ಅನುಭವಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಆದರೆ, 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುತ್ತಿದ್ದ ದೃಶ್ಯಗಳನ್ನು ದೂರದರ್ಶನದಲ್ಲಿ ವೀಕ್ಷಿಸುತ್ತಾ ಕಣ್ಣೀರಿಟ್ಟಿದ್ದೆ ಎಂಬ ಅವರ ನೆನಪು ಈಗ ರಾಜಕೀಯ ವಿವಾದದ ಪ್ರಮುಖ ವಿಷಯವಾಗಿದೆ.

ಬಾಬ್ರಿ ಮಸೀದಿ ಧ್ವಂಸ: ಕಣ್ಣೀರಿಟ್ಟಿದ್ದೆ ಎಂದ ಸೋನಿಯಾ, ಬಿಜೆಪಿಯ ತಿರುಗೇಟು

ತಮ್ಮ ಆತ್ಮಚರಿತ್ರೆಯಲ್ಲಿ ಬಾಬ್ರಿ ಮಸೀದಿ ಧ್ವಂಸವನ್ನು ಸ್ಮರಿಸಿರುವ ಸೋನಿಯಾ ಗಾಂಧಿ ಅವರು, ಈ ಘಟನೆಯನ್ನು ಭಾರತದ ರಾಜಕೀಯ ಪಯಣದಲ್ಲಿ ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂಘಟನೆಗಳ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ-ಆರ್‌ಎಸ್‌ಎಸ್ ಮತ್ತು ಅವುಗಳ ಅಂಗಸಂಸ್ಥೆಗಳು ತಮ್ಮ ವಿಭಜಕ ಕಾರ್ಯಸೂಚಿಯನ್ನು ಮುಂದುವರಿಸುತ್ತಿರುವುದಕ್ಕೆ ಹಲವು ವರ್ಷಗಳಿಂದ ಸ್ಪಷ್ಟ ಸೂಚನೆಗಳಿದ್ದವು. 1992ರಲ್ಲಿ ನಡೆದ ಬಾಬ್ರಿ ಮಸೀದಿಯ ದುರಂತ ಧ್ವಂಸ ಮತ್ತು ನಂತರ ಸಂಭವಿಸಿದ ಕೋಮು ಹಿಂಸಾಚಾರವು, ಆ ಸಂಘಟನೆಗಳು ಇನ್ನು ಮುಂದೆ ತೆರೆಮರೆಯಲ್ಲಿ ಕೆಲಸ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು. ಬಿಜೆಪಿ ತನ್ನ ಸಂಪೂರ್ಣ ಅಧಿಕಾರದ ಕನಸಿನತ್ತ ಸಾಗುತ್ತಿತ್ತು" ಎಂದು ಅವರು ಬರೆದಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೀದಿ ಧ್ವಂಸಕ್ಕೆ ಕಣ್ಣೀರಿಟ್ಟ ಸೋನಿಯಾ ಗಾಂಧಿ, ಹಿಂದೂ ಸಂತ್ರಸ್ತರು, ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದನಾ ದಾಳಿಗಳಲ್ಲಿ ಮೃತಪಟ್ಟವರ ಬಗ್ಗೆ ಇದೇ ರೀತಿಯ ಕಾಳಜಿ ತೋರಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಿಆರ್ ಕೇಶವನ್ ನೇರವಾಗಿ ಟೀಕಿಸಿ, ಈ ಪುಸ್ತಕಕ್ಕೆ 'ಬಿಲಾಂಗಿಂಗ್' ಬದಲು 'ವೈಟ್‌ವಾಶಿಂಗ್' ಎಂದು ಹೆಸರಿಡಬೇಕಿತ್ತು ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ತಮ್ಮ ಆತ್ಮಕಥನಕ್ಕೆ 'ಬಿಲಾಂಗಿಂಗ್' ಬದಲು 'ವೈಟ್‌ವಾಶಿಂಗ್' ಎಂದು ಹೆಸರಿಡಬಹುದಿತ್ತು. ಏಕೆಂದರೆ ನೆಹರು-ಗಾಂಧಿ ಕುಟುಂಬ ಮಾಡಿದ ಐತಿಹಾಸಿಕ ತಪ್ಪುಗಳನ್ನು ಸಿಹಿಗೊಳಿಸಿ ತೋರಿಸುವುದು ಮತ್ತು ಕಾಂಗ್ರೆಸ್ ಪಕ್ಷದ ಗಂಭೀರ ತಪ್ಪುಗಳನ್ನು ಮರೆಮಾಚುವುದು ಈ ಪುಸ್ತಕದ ಉದ್ದೇಶದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

1984ರ ಸಿಖ್ ವಿರೋಧಿ ಹಿಂಸಾಚಾರ, ಬಟ್ಲಾ ಹೌಸ್ ಎನ್‌ಕೌಂಟರ್ ಮತ್ತು 26/11 ಮುಂಬೈ ಭಯೋತ್ಪಾದನಾ ದಾಳಿಗಳನ್ನು ಉಲ್ಲೇಖಿಸಿದ ಕೇಶವನ್, ಆ ಸಂದರ್ಭಗಳಲ್ಲಿ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರೇ ಎಂದು ಪ್ರಶ್ನಿಸಿದ್ದಾರೆ.

1984ರಲ್ಲಿ ಗುರುದ್ವಾರಗಳ ಮೇಲೆ ದಾಳಿ ನಡೆದಾಗ ಮತ್ತು ಸಾವಿರಾರು ಸಿಖ್ಖರು ಹತ್ಯೆಯಾದಾಗ ಅವರು ಇದೇ ರೀತಿಯ ದುಃಖ ವ್ಯಕ್ತಪಡಿಸಿದ್ದರೇ? ಭಯೋತ್ಪಾದನಾ ದಾಳಿಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಮೃತಪಟ್ಟಾಗ ಅವರ ನೋವು ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಸೋನಿಯಾ ಪ್ರಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಆ ಅವಧಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು ಮತ್ತು ರಾಜಕೀಯ ವಿರೋಧಿಗಳನ್ನು ಬಂಧಿಸಲಾಗಿತ್ತು ಎಂದು ನೆನಪಿಸಿದ್ದಾರೆ.

Indira Gandhi - Sonia Gandhi
2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'No' ಎಂದಿದ್ದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ...!

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಕೂಡ ಸೋನಿಯಾ ಗಾಂಧಿ ಕುರಿತು ಟೀಕೆ ಮಾಡಿದ್ದು, ಬಾಬ್ರಿ ಮಸೀದಿ ಧ್ವಂಸ ಅಥವಾ ಬಟ್ಲಾ ಹೌಸ್ ಎನ್‌ಕೌಂಟರ್‌ನಂತಹ ಘಟನೆಗಳು ನಡೆದಾಗ ಮಾತ್ರ ಅವರ ಕಣ್ಣಲ್ಲಿ ಕಣ್ಣೀರು ಬರುತ್ತದೆ. ಗೋಧ್ರಾ ಘಟನೆ ನಡೆದಾಗ ಅವರ ಕಣ್ಣೀರು ಬತ್ತಿಹೋಗುತ್ತದೆ ಎಂದು ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಉಲ್ಲೇಖಿಸಿ, ಹಿಂದೂ ಯಾತ್ರಿಕರ ಹತ್ಯೆಯಾದಾಗ ಸೋನಿಯಾ ಗಾಂಧಿ ಇದೇ ರೀತಿಯ ದುಃಖ ವ್ಯಕ್ತಪಡಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇಟಲಿಯ ಮೂಲದ ಬಗ್ಗೆಯೂ ಮತ್ತೆ ವಿವಾದ ಎಬ್ಬಿಸಿರುವ ಗಿರಿರಾಜ್ ಸಿಂಗ್, ಸೋನಿಯಾ ಗಾಂಧಿ ಇಟಾಲಿಯನ್ ಪಾಸ್‌ಪೋರ್ಟ್ ಹೊಂದಿದ್ದ ವಿಚಾರ ಹಾಗೂ ಭಾರತೀಯ ಪೌರತ್ವ ಪಡೆಯಲು 12 ವರ್ಷ ತೆಗೆದುಕೊಂಡರು ಎಂಬ ಆರೋಪಗಳನ್ನು ಪ್ರಸ್ತಾಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಬಿಜೆಪಿಯ ಹಿರಿಯ ನಾಯಕರ ಹೇಳಿಕೆಗಳನ್ನು ನೆನಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಬಾಬರಿ ಮಸೀದಿ ಧ್ವಂಸವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಕೂಡ ಖಂಡಿಸಿದ್ದರು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಅವರು ಮಾತನಾಡಿಸ, ಬಾಬ್ರಿ ಮಸೀದಿ ಧ್ವಂಸವಾದಾಗ ಅಟಲ್ ಜೀ ಅದನ್ನು ತೀವ್ರವಾಗಿ ಟೀಕಿಸಿದ್ದರು. ಅವರ ಹೃದಯದಲ್ಲಿ ಬಾಬರ್ ಇದ್ದನೇ? ಅಡ್ವಾಣಿ ಜೀ ಅದನ್ನು ಗಂಭೀರ ತಪ್ಪು ಎಂದು ಕರೆದಿದ್ದರು. ಅವರ ಹೃದಯದಲ್ಲೂ ಬಾಬರ್ ಇದ್ದನೇ? ಜಸ್ವಂತ್ ಸಿಂಗ್ ಕೂಡ ಇದನ್ನು ಬಲವಾಗಿ ಖಂಡಿಸಿದ್ದರು. ಅವರ ಹೃದಯದಲ್ಲೂ ಬಾಬರ್ ಇದ್ದನೇ? ಎಂದು ಪ್ರಶ್ನಿಸಿದ್ದಾರೆ.

ಆತ್ಮಕಥನದಲ್ಲಿ ಮೋದಿ ಕುರಿತು ಉಲ್ಲೇಖ

ಬಾಬ್ರಿ ಮಸೀದಿ ವಿವಾದದ ಹೊರತಾಗಿ, ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರೊಂದಿಗೆ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆಯೂ ಆತ್ಮಕಥನದಲ್ಲಿ ವಿವರಿಸಿದ್ದಾರೆ.

ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಕೇವಲ ರಾಜಕೀಯ ಅಥವಾ ವೈಯಕ್ತಿಕ ವಿಚಾರಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಭಾರತದ ಬಗ್ಗೆ ಇರುವ ಎರಡು ವಿಭಿನ್ನ ದೃಷ್ಟಿಕೋನಗಳ ನಡುವಿನ ಸಂಘರ್ಷವಾಗಿದೆ ಎಂದು ಅವರು ಹೇಳಿದ್ದಾರೆ.

ನಾವಿಬ್ಬರೂ ವಿಭಿನ್ನ ಸೈದ್ಧಾಂತಿಕ ಜಗತ್ತಿಗೆ ಸೇರಿದವರು. ಈ ದೇಶದ ಬಗ್ಗೆ ಅವರ ಕಲ್ಪನೆ ನನ್ನ ಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದೆ. ವಿವಿಧ ಜನಾಂಗಗಳು, ಸಂಸ್ಕೃತಿಗಳು, ಭಾಷೆಗಳು ಮತ್ತು ಧರ್ಮಗಳನ್ನು ಒಳಗೊಂಡಿರುವ, ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡುವ ರಾಷ್ಟ್ರ ಎಂಬ ಭಾರತದ ಕಲ್ಪನೆಯನ್ನು ನನ್ನ ಕುಟುಂಬದ ಸದಸ್ಯರ ಜೀವನ, ಅವರ ಸೇವಾ ಮನೋಭಾವ ಮತ್ತು ನಂಬಿಕೆಯಿಂದ ನಾನು ಕಲಿತಿದ್ದೇನೆ" ಎಂದು ಬರೆದಿದ್ದಾರೆ.

ನರೇಂದ್ರ ಮೋದಿ ಅವರ ಭಾರತದ ಕಲ್ಪನೆಯು ಆರ್‌ಎಸ್‌ಎಸ್ ಸಿದ್ಧಾಂತಗಳಿಂದ ರೂಪುಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ನರೇಂದ್ರ ಮೋದಿಯವರ ಭಾರತದ ಕಲ್ಪನೆಯು ಆರ್‌ಎಸ್‌ಎಸ್ ಸೈದ್ಧಾಂತಿಕ ನಾಯಕರ ಮತ್ತು ಅವರ ಸ್ವಂತ ಬೆಳವಣಿಗೆಯ ಅನುಭವಗಳಿಂದ ರೂಪುಗೊಂಡಿದೆ. ಅದರಲ್ಲಿ ಅವರ ಧರ್ಮ ಮತ್ತು ಸಂಸ್ಕೃತಿಯು ಇತರ ಎಲ್ಲಕ್ಕಿಂತ ಮೇಲುಗೈ ಸಾಧಿಸುವ ಮೂಲಭೂತವಾದಕ್ಕೆ ಆದ್ಯತೆ ಇದೆ. ಅಂತಹ ಭಾರತದಲ್ಲಿ ಶ್ರೇಣೀಕರಣ, ನಿಯಂತ್ರಣ ಮತ್ತು ಶಿಸ್ತಿಗೆ ಪ್ರಮುಖ ಸ್ಥಾನವಿದೆ ಎಂದು ಹೇಳಿದ್ದಾರೆ.

ಅವರು ತಮ್ಮ ಭಾರತದ ದೃಷ್ಟಿಕೋನಕ್ಕಾಗಿ ಹೋರಾಡುತ್ತಿದ್ದರು. ನಾನು ನನ್ನ ಭಾರತದ ದೃಷ್ಟಿಕೋನಕ್ಕಾಗಿ ಹೋರಾಡುತ್ತಿದ್ದೆ. ಅದು ಪ್ರಾಬಲ್ಯಕ್ಕೆ ವಿರುದ್ಧವಾದ, ಒಳಗೊಳ್ಳುವಿಕೆ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಭಾರತ ಎಂದು ತಿಳಿಸಿದ್ದಾರೆ.

ಮೋದಿ ಪ್ರಧಾನಮಂತ್ರಿಯಾಗಿ 12 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಅವರೊಂದಿಗೆ ತಮಗೆ ಯಾವುದೇ ಅರ್ಥಪೂರ್ಣ ಸಂವಾದ ನಡೆದಿಲ್ಲ. ಸಂಸತ್ ಅಧಿವೇಶನದ ಕೊನೆಯಲ್ಲಿ ನಡೆಯುವ ಔಪಚಾರಿಕ ಶುಭಾಶಯ ವಿನಿಮಯಕ್ಕೆ ಮಾತ್ರ ತಮ್ಮ ಮಾತುಕತೆ ಸೀಮಿತವಾಗಿತ್ತು ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ, ಭಿನ್ನಮತವನ್ನು ಹತ್ತಿಕ್ಕುತ್ತಿದೆ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

Indira Gandhi - Sonia Gandhi
'ಪ್ರಧಾನಿ ಹುದ್ದೆಗೆ ಮಹತ್ವಾಕಾಂಕ್ಷಿಯಾಗುವುದು ಅಪರಾಧವೇ?' ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿ ತಿರುಗೇಟು!

ಇದೇ ವೇಳೆ ಜಾರಿ ನಿರ್ದೇಶನಾಲಯವನ್ನು ರಾಜಕೀಯ ಸೇಡಿಗಾಗಿ ಬಳಸಲಾಗುತ್ತಿದೆ ಮತ್ತು ಚುನಾವಣಾ ಆಯೋಗವು ಆಡಳಿತ ಪಕ್ಷದ ಅಧಿಕಾರದ ಹಂಬಲಕ್ಕೆ ಸಹಕರಿಸುತ್ತಿದೆ ಎಂದೂ ಟೀಕಿಸಿದ್ದಾರೆ.

ಕೆಲವು ದೂರದರ್ಶನ ಸುದ್ದಿವಾಹಿನಿಗಳು ಸರ್ಕಾರದ ಪ್ರಚಾರದ ಸಾಧನಗಳಾಗಿ ಬದಲಾಗಿವೆ ಎಂದೂ ಆರೋಪಿಸಿದ್ದಾರೆ.

ಗುಜರಾತ್ ಗಲಭೆ, ಗೋಧ್ರಾ ಘಟನೆ ಮತ್ತು ಆರ್‌ಎಸ್‌ಎಸ್ ರಾಜಕೀಯ ಬೆಳವಣಿಗೆ ಪ್ರಸ್ತಾಪ

ಇವಷ್ಟೇ ಅಲ್ಲದೆ, 2002ರ ಗುಜರಾತ್ ಗಲಭೆಗಳ ಬಗ್ಗೆಯೂ ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.

ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಹಿಂದೂ ಕರಸೇವಕರನ್ನು ಹೊತ್ತೊಯ್ಯುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಮಂದಿ ಮೃತಪಟ್ಟಿದ್ದರು. ನಂತರ ಗುಜರಾತ್‌ನ ಹಲವು ಭಾಗಗಳಲ್ಲಿ ಗಲಭೆಗಳು ಭುಗಿಲೆದ್ದಿದ್ದವು.

ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ವಿವಾದಾಸ್ಪದವಾಗಿದ್ದರೂ, ಅದರ ನಂತರದ ಹಿಂಸಾಚಾರವು ರಾಜ್ಯದ ಹಲವು ಭಾಗಗಳಿಗೆ ಹರಡಿತು. ಈ ಹಿಂಸಾಚಾರದ ಸಂತ್ರಸ್ತರಲ್ಲಿ ಬಹುಪಾಲು ಮುಸ್ಲಿಮರಾಗಿದ್ದರುಎಂದು ಅವರು ಬರೆದಿದ್ದಾರೆ.

ದೂರದರ್ಶನದಲ್ಲಿ ಗಲಭೆಯ ದೃಶ್ಯಗಳನ್ನು ನೋಡಿದಾಗ ನಾನು ಸೇರಿ ಕಾಂಗ್ರೆಸ್ ನಾಯಕರೆಲ್ಲರೂ ಆಘಾತಕ್ಕೊಳಗಾಗಿದ್ದೆವು ಎಂದು ಹೇಳಿದ್ದಾರೆ.

ನಾವು ನೇರ ಪ್ರಸಾರ ವರದಿಗಳನ್ನು ಭಯಭೀತರಾಗಿ ನೋಡುತ್ತಿದ್ದೆವು. ಗುಜರಾತ್‌ನಲ್ಲಿದ್ದ ನಮ್ಮ ಪಕ್ಷದ ಸಹೋದ್ಯೋಗಿಗಳು ತುರ್ತು ಸಹಾಯಕ್ಕಾಗಿ ಕರೆ ಮಾಡುತ್ತಿದ್ದರು. ಅವರಿಗೆ ನೆರವು ಒದಗಿಸಲು ಪ್ರಯತ್ನಿಸಿದ್ದೆವು. ಆದರೆ ಆಡಳಿತ ವ್ಯವಸ್ಥೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಬರೆದಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ಮತ್ತು ಬಜರಂಗದಳದ ಕೆಲವು ವಿಭಾಗಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದವು ಎಂದು ಆರೋಪಿಸಿದ್ದಾರೆ.

ಅಲ್ಲದೆ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರನ್ನು ರಾಷ್ಟ್ರೀಯ ಮಟ್ಟದ ನಾಯಕನನ್ನಾಗಿ ಬೆಳೆಸಲು ಆರ್‌ಎಸ್‌ಎಸ್ ಸಿದ್ಧತೆ ನಡೆಸುತ್ತಿತ್ತು ಎಂದೂ ಹೇಳಿದ್ದಾರೆ.

ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಯ ಬಗ್ಗೆಯೂ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಬಾಬುರಾವ್ 'ಅಣ್ಣಾ' ಹಜಾರೆ ಅವರು 'ಇಂಡಿಯಾ ಅಗೇನ್ಸ್ಟ್ ಕರಪ್ಷನ್' ಚಳವಳಿಯ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದರು.

ಈ ಚಳವಳಿಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ತೆರೆಮರೆಯಲ್ಲಿ ಸಂಘಟಿಸಿ ಬೆಂಬಲಿಸಿದ್ದವು ಎಂದು ಅದರ ಕೆಲವು ಪ್ರಮುಖ ಭಾಗವಹಿಸಿದವರು ನಂತರ ಬಹಿರಂಗಪಡಿಸಿದ್ದಾರೆ ಎಂದು ಅವರು ಬರೆದಿದ್ದಾರೆ.

ಈ ಚಳವಳಿಯು ಭ್ರಷ್ಟಾಚಾರದ ವಿರುದ್ಧ ದೊಡ್ಡ ಜನಾಂದೋಲನವನ್ನು ಸೃಷ್ಟಿಸಿತ್ತು. ಇದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತೀವ್ರ ಒತ್ತಡಕ್ಕೆ ಸಿಲುಕಿತ್ತು.

ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಮತ್ತು ಜನರ ಆಕ್ರೋಶವನ್ನು ಎದುರಿಸಲು ಕಾಂಗ್ರೆಸ್ ಹೆಣಗಾಡಿತು ಎಂದು ಸೋನಿಯಾ ಹೇಳಿದ್ದಾರೆ.

ಯುಪಿಎ ಅವಧಿಯಲ್ಲಿ ಪರಿಚಯಿಸಲಾದ ಲೋಕಪಾಲ್ ವ್ಯವಸ್ಥೆಯು ಬಿಜೆಪಿ ಆಡಳಿತದಲ್ಲಿ "ಹಲ್ಲಿಲ್ಲದ ಮತ್ತು ಬಹುತೇಕ ಕಾಣದ ಹುಲಿ"ಯಾಗಿ ಮಾರ್ಪಟ್ಟಿದೆ ಎಂದೂ ಟೀಕಿಸಿದ್ದಾರೆ.

Indira Gandhi - Sonia Gandhi
ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ; ನೆಹರು ವಿರುದ್ಧ 'ಬಿಜೆಪಿ ಹಗೆತನ': ಸೋನಿಯಾ ಆತ್ಮಚರಿತ್ರೆಯಲ್ಲಿ ರಿವೀಲ್!

ರಾಜೀವ್ ಗಾಂಧಿ ಹತ್ಯೆ: ಎಚ್ಚರಿಕೆ ನೀಡಿದ್ದ ರಾಹುಲ್

ಸೋನಿಯಾ ಗಾಂಧಿ ಅವರ ಆತ್ಮಕಥನದ ಅತ್ಯಂತ ಭಾವನಾತ್ಮಕ ಭಾಗಗಳಲ್ಲಿ ಒಂದು, 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ನಡೆದ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಕುರಿತಾದ ನೆನಪುಗಳು.

1984ರ ಅಕ್ಟೋಬರ್‌ನಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ರಾಜೀವ್ ಅವರ ಜೀವಕ್ಕೂ ಅಪಾಯವಿರಬಹುದು ಎಂಬ ಭಯ ಕುಟುಂಬವನ್ನು ಕಾಡುತ್ತಿತ್ತು ಎಂದು ವಿವರಿಸಿದ್ದಾರೆ.

ತಮ್ಮಲ್ಲಿ ಯಾರಿಗಾದರೂ ದಾಳಿ ನಡೆದರೆ ಮತ್ತೊಬ್ಬರೂ ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕದಿಂದ, ದಂಪತಿ ತಮ್ಮ ಅಂತ್ಯಕ್ರಿಯೆಯ ವ್ಯವಸ್ಥೆಗಳ ಬಗ್ಗೆಯೂ ಚರ್ಚಿಸಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ರಾಜೀವ್ ಗಾಂಧಿ ಅವರ ಚುನಾವಣಾ ಪ್ರಚಾರ ಪ್ರವಾಸದಲ್ಲಿ ಭಾಗವಹಿಸಿದ್ದ ಮಗ ರಾಹುಲ್ ಗಾಂಧಿ, ಹತ್ಯೆಗೆ ಎರಡು ತಿಂಗಳ ಮೊದಲು ನೀಡಿದ್ದ ಎಚ್ಚರಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.

ಅಪ್ಪನ ಭದ್ರತೆಯ ಬಗ್ಗೆ ಏನಾದರೂ ಕ್ರಮ ಕೈಗೊಳ್ಳದಿದ್ದರೆ, ಅವರ ಅಂತ್ಯಕ್ರಿಯೆಗೆ ಹಾಜರಾಗಲು ನಾನು ಶೀಘ್ರದಲ್ಲೇ ವಾಪಸ್ ಬರಬೇಕಾಗುತ್ತದೆ ಎಂಬುದು ನನಗೆ ಗೊತ್ತಿದೆ ಎಂದು ರಾಹುಲ್ ಹೇಳಿದ್ದರೆಂದು ಸೋನಿಯಾ ಬರೆದಿದ್ದಾರೆ.

1991ರ ಮೇ 21ರ ರಾತ್ರಿ ಸೋನಿಯಾ ಮನೆಯಲ್ಲಿದ್ದರು. ಆಗ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ಸ್ಫೋಟ ಸಂಭವಿಸಿರುವುದಾಗಿ ತಿಳಿಸಿದರು.

ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಸಂಘಟನೆಗೆ ಸೇರಿದ ಮಹಿಳೆಯೊಬ್ಬಳು ಹೂವಿನ ಹಾರ ಹಾಕುವ ನೆಪದಲ್ಲಿ ರಾಜೀವ್ ಗಾಂಧಿಯವರ ಬಳಿ ತೆರಳಿ ಸ್ಫೋಟಕ ಸಾಧನವನ್ನು ಸ್ಫೋಟಿಸಿದ್ದಳು. ಈ ದಾಳಿಯಲ್ಲಿ ರಾಜೀವ್ ಗಾಂಧಿ ಸೇರಿದಂತೆ 15 ಮಂದಿ ಮೃತಪಟ್ಟಿದ್ದರು.

ಪ್ರಿಯಾಂಕಾ ಹೇಳಿದ ವಿಷಯವನ್ನು ಆರಂಭದಲ್ಲಿ ನಂಬಲು ಸಾಧ್ಯವಾಗಲಿಲ್ಲ. ನಂತರ ಸತ್ಯ ಅರಿವಾದಾಗ ತಾವು ಭಾವನಾತ್ಮಕವಾಗಿ ಕುಸಿದುಬಿದ್ದಿದ್ದಾಗಿ ಸೋನಿಯಾ ವಿವರಿಸಿದ್ದಾರೆ.

ರಾಜೀವ್ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲು ನಡೆದ ವ್ಯವಸ್ಥೆಗಳು ಮತ್ತು ಕುಟುಂಬ ಅನುಭವಿಸಿದ ನೋವಿನ ಬಗ್ಗೆಯೂ ಬರೆದಿದ್ದಾರೆ.

ವಿ.ಪಿ. ಸಿಂಗ್ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿ ಅವರ ವಿಶೇಷ ರಕ್ಷಣಾ ಪಡೆ (SPG) ಭದ್ರತೆಯನ್ನು ಹಿಂಪಡೆದ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.

ಭದ್ರತೆಯನ್ನು ಮುಂದುವರಿಸುವಂತೆ ಶಿಫಾರಸು ಮಾಡಲಾಗಿದ್ದರೂ, ಅದನ್ನು ಹಿಂಪಡೆಯುವ ಮೊದಲು ಹೊಸದಾಗಿ ಬೆದರಿಕೆ ಮೌಲ್ಯಮಾಪನ ನಡೆಸಲಾಗಿರಲಿಲ್ಲ ಎಂದು ಸೋನಿಯಾ ಹೇಳಿದ್ದಾರೆ.

ರಾಜೀವ್ ಗಾಂಧಿ ಅವರಿಗೆ ಅಪಾಯವಿದೆ ಎಂಬ ಗುಪ್ತಚರ ಮಾಹಿತಿಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಪರಿಗಣಿಸಿರಲಿಲ್ಲ ಎಂದೂ ಆರೋಪಿಸಿದ್ದಾರೆ.

ರಾಜೀವ್ ಹತ್ಯೆಯ ನಂತರ, ಮತ್ತಷ್ಟು ಹಿಂಸಾಚಾರ ನಡೆಯುವ ಭೀತಿಯಿಂದ ಇಟಲಿಗೆ ಹಿಂದಿರುಗುವಂತೆ ತಮ್ಮ ಸಹೋದರಿ ಸಲಹೆ ನೀಡಿದ್ದರು ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಆದರೆ ಭಾರತವೇ ತನ್ನ ಮನೆ, ತನ್ನ ಮಕ್ಕಳು ಬೆಳೆದ ದೇಶವನ್ನು ತೊರೆದು ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಆ ಸಲಹೆಯನ್ನು ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ನಂತರವೇ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರವೇಶದ ಬಗ್ಗೆ ಗಂಭೀರವಾಗಿ ಯೋಚಿಸುವಂತಾಯಿತು ಎಂದು ಹೇಳಿದ್ದಾರೆ.

ಎರಡು ಬಾರಿ ಕ್ಯಾನ್ಸರ್ ಆತಂಕ

ಸೋನಿಯಾ ಗಾಂಧಿ ಅವರ ಆತ್ಮಕಥನದಲ್ಲಿ ಅವರ ಆರೋಗ್ಯದ ಬಗ್ಗೆಯೂ ಮಹತ್ವದ ವೈಯಕ್ತಿಕ ಮಾಹಿತಿ ಬಹಿರಂಗವಾಗಿದೆ.

2010 ಮತ್ತು 2011ರಲ್ಲಿ ಎದುರಿಸಿದ ಎರಡು ಗಂಭೀರ ಕ್ಯಾನ್ಸರ್ ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಮೊದಲ ಬಾರಿಗೆ ವಿವರಿಸಿದ್ದಾರೆ.

2010ರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಭಾರತದ ವೈದ್ಯರ ಮೇಲೆ ವಿಶ್ವಾಸವಿದ್ದರೂ, ಕಾಂಗ್ರೆಸ್ ಅಧ್ಯಕ್ಷೆಯಾಗಿ ತಮ್ಮ ಶಸ್ತ್ರಚಿಕಿತ್ಸೆಯ ವಿಚಾರ ದೊಡ್ಡ ಮಾಧ್ಯಮ ಸುದ್ದಿಯಾಗಬಹುದು ಎಂಬ ಕಾರಣಕ್ಕೆ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ನಾನು ಆಘಾತಕ್ಕೊಳಗಾಗಿದ್ದೆ ಮತ್ತು ಆತಂಕಗೊಂಡಿದ್ದೆ. ಸಮಯ ಕಳೆಯಲು ಅವಕಾಶವಿರಲಿಲ್ಲ. ನನಗೂ ನನ್ನ ಮಕ್ಕಳಿಗೂ ವೈದ್ಯರು ಈ ವಿಷಯ ತಿಳಿಸಿದ್ದರು. ನನ್ನ ಮನಸ್ಸಿನಲ್ಲಿ ಭಯಾನಕ ಪರಿಣಾಮಗಳ ಬಗ್ಗೆ ನಾನಾ ಆಲೋಚನೆಗಳು ಮೂಡತೊಡಗಿದವು ಎಂದು ಬರೆದಿದ್ದಾರೆ.

ಇಟಲಿಯ ಮಿಲಾನ್ ಸಮೀಪವಿರುವ ಯುರೋಪಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಉಂಬರ್ಟೊ ವೆರೋನೆಸಿ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ರಾಹುಲ್ ಮತ್ತು ಪ್ರಿಯಾಂಕಾ ತಮ್ಮ ಕೈ ಹಿಡಿದು ಧೈರ್ಯ ತುಂಬಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ವೈದ್ಯರು ಎರಡು ಗಡ್ಡೆಗಳನ್ನು ತೆಗೆದುಹಾಕುವುದರ ಜೊತೆಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲೇ ವಿಕಿರಣ ಚಿಕಿತ್ಸೆ (Intra-operative Radiation) ನೀಡಿದರು. ಇದರಿಂದ ಐದು ವಾರಗಳ ಕಾಲ ಪ್ರತ್ಯೇಕವಾಗಿ ರೇಡಿಯೊಥೆರಪಿ ಪಡೆಯುವ ಅಗತ್ಯ ತಪ್ಪಿತು ಎಂದು ಹೇಳಿದ್ದಾರೆ.

ಆದರೆ, ಆರೋಗ್ಯ ಸಮಸ್ಯೆ ಅಲ್ಲಿಗೆ ಮುಗಿಯಲಿಲ್ಲ. 2011ರಲ್ಲಿ ನಿಯಮಿತ ಆರೋಗ್ಯ ತಪಾಸಣೆ ವೇಳೆ ಮೇದೋಜೀರಕ ಗ್ರಂಥಿಯಲ್ಲಿ (Pancreas) ಮತ್ತೊಂದು ಬೆಳವಣಿಗೆ ಕಂಡುಬಂದಿತು.

ಇದರಿಂದ ಹಿಂದಿನ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿದೆಯೇ ಅಥವಾ ಇತರ ಭಾಗಗಳಿಗೆ ಹರಡಿದೆಯೇ ಎಂಬ ಆತಂಕ ಸೋನಿಯಾ ಮತ್ತು ಅವರ ಮಕ್ಕಳಲ್ಲಿ ಉಂಟಾಯಿತು.

ನಂತರ ನೆದರ್ಲೆಂಡ್ಸ್‌ನ ರೋಟರ್‌ಡ್ಯಾಮ್‌ನಲ್ಲಿ ಮೇದೋಜೀರಕ ಗ್ರಂಥಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಕ್ಯಾಸ್ಪರ್ ವ್ಯಾನ್ ಐಕ್ ಅವರ ನೇತೃತ್ವದಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾದರು.

ಶಸ್ತ್ರಚಿಕಿತ್ಸೆಯ ನಂತರವೇ ಆ ಗಡ್ಡೆಯ ನಿಜವಾದ ಸ್ವರೂಪ ಮತ್ತು ಗಂಭೀರತೆ ತಿಳಿಯಲು ಸಾಧ್ಯವಿತ್ತು. ಹೀಗಾಗಿ ಅವರು ಆತಂಕಗೊಂಡಿದ್ದರು ಎಂದು ವಿವರಿಸಿದ್ದಾರೆ.

ಆದರೆ, ಪರೀಕ್ಷೆಯ ನಂತರ ಅದು ಆರಂಭಿಕ ಹಂತದಲ್ಲಿದ್ದ, ಕ್ಯಾನ್ಸರ್ ಪೂರ್ವದ ಸ್ಥಿತಿಯ ಗಡ್ಡೆಯಾಗಿತ್ತು ಮತ್ತು ಸಮಯಕ್ಕೆ ಸರಿಯಾಗಿ ಪತ್ತೆಯಾಗಿತ್ತು ಎಂಬುದು ತಿಳಿದುಬಂದಿತು.

ಅವರು ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆ ಅವಧಿಯಲ್ಲಿ ಪ್ರಿಯಾಂಕಾ ಹೆಚ್ಚಿನ ಸಮಯ ತಾಯಿಯ ಜೊತೆಗಿದ್ದರು.

ಎರಡೂ ಶಸ್ತ್ರಚಿಕಿತ್ಸೆಗಳ ನಂತರ ಕೀಮೋಥೆರಪಿ ಚಿಕಿತ್ಸೆ ಪಡೆಯುವ ಅಗತ್ಯ ತಮಗೆ ಬರಲಿಲ್ಲ ಎಂಬುದನ್ನೂ ಸೋನಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X