ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ರಾಷ್ಟ್ರಪತಿ ಅಂಗರಕ್ಷಕ ದಳದ ಯೋಧನ ತಲೆಗೆ ಗುಂಡೇಟು, ಸ್ಥಿತಿ ಗಂಭೀರ

ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ, ಸೌರಭ್ ತೋಮರ್ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಜೊತೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಗ್ರಾಮದವರಾದ ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ.
Saurabh
ಸೌರಭ್ ತೋಮರ್
Updated on: 

ಬಾಗ್‌ಪತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ದೀಪಾವಳಿ ರಾತ್ರಿ ಪಟಾಕಿ ಸಿಡಿಸುವ ವಿಚಾರಕ್ಕೆ ಆರಂಭವಾದ ಗಲಾಟೆ ಗುಂಡಿನ ದಾಳಿಗೆ ತಿರುಗಿದ್ದು, ರಾಷ್ಟ್ರಪತಿ ಅಂಗರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ತಲೆಗೆ ಗುಂಡು ತಗುಲಿದೆ.

ಗಾಯಗೊಂಡ ಯೋಧನನ್ನು ಸೌರಭ್ ತೋಮರ್ ಎಂದು ಗುರುತಿಸಲಾಗಿದ್ದು, ಮೀರತ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ, ಸೌರಭ್ ತೋಮರ್ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಜೊತೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಗ್ರಾಮದವರಾದ ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ.

ನೋಡನೋಡುತ್ತಿದ್ದಂತೆ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಎರಡೂ ಕಡೆಯವರ ನಡುವೆ ಉದ್ವಿಗ್ನತೆ ಹೆಚ್ಚಾದಾಗ ಧೀರಜ್ ದೇಶೀ ನಿರ್ಮಿತ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡೊಂದು ಮೊದಲು ಗೋಡೆಗೆ ತಾಗಿ ಬಳಿಕ ಸೌರಭ್ ಅವರ ತಲೆಗೆ ತಗುಲಿದೆ.

ಗುಂಡೇಟಿನಿಂದ ಸೌರಭ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಇದೇ ವೇಳೆ ಧೀರಜ್‌ನ ಸಹೋದರ ಕೋಲು ಹಿಡಿದು ಬಂದು ವಿನೀತ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಸೇರಿದ್ದ ಜನರು ಆತಂಕದಿಂದ ಓಡಲು ಆರಂಭಿಸಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳೀಯರ ಪ್ರಕಾರ, ಎರಡೂ ಕುಟುಂಬಗಳ ನಡುವೆ ಮೊದಲಿನಿಂದಲೂ ಪರಿಚಯವಿದ್ದು, ಸ್ನೇಹ ಸಂಬಂಧವೂ ಇತ್ತು. ಅವರು ಆಗಾಗ ಒಟ್ಟಿಗೆ ಕಾಲ ಕಳೆಯುತ್ತಿದ್ದರು. ಸುಮಾರು ಎರಡು ತಿಂಗಳ ಹಿಂದೆಯೂ ಇವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

Saurabh
ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡಬೇಡಿ: ಸಿನಿಮಾ ತಾರೆಯರಿಗೆ ರಾಷ್ಟ್ರಪತಿ ಮುರ್ಮು ಮನವಿ; Video

26 ವರ್ಷದ ಸೌರಭ್ 2021ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸೇನೆಯ ಅತ್ಯಂತ ಹಳೆಯ ಮತ್ತು ಹಿರಿಯ ಅಶ್ವದಳವಾದ ರಾಷ್ಟ್ರಪತಿ ಅಂಗರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೀಪಾವಳಿ ಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಲು ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದೆ.

ಗುಂಡಿನ ದಾಳಿಯ ಬಳಿಕ ಕುಟುಂಬದವರು ಸೌರಭ್ ಅವರನ್ನು ಬರೌತ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಆದರೆ, ಕುಟುಂಬದವರು ಅವರನ್ನು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದರು.

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತಲೆಯಲ್ಲಿದ್ದ ಗುಂಡನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಬಳಿಕ ಸೌರಭ್ ಅವರ ತಂದೆ ಜನಕ್ ರಾಜ್ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗ್ರಾಮಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬರೌತ್ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಮೊದಲು ಬರೌತ್‌ನಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್‌ಗೆ ಕಳುಹಿಸಲಾಗಿದೆ.

ಜನಕ್ ರಾಜ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಧೀರಜ್ ಮತ್ತು ಮೋನು ಅಲಿಯಾಸ್ ಪ್ರವೀಣ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X