ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ, 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!

1969ರ ಜನವರಿ 18ರಂದು ಸೋನಿಯಾ ಗಾಂಧಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿಗದಿತ ಹೆರಿಗೆ ದಿನಾಂಕಕ್ಕಿಂತ ಎರಡು ತಿಂಗಳು ಮೊದಲೇ ಸಹಜ ಹೆರಿಗೆಯಾಗಿತ್ತು. ಕುಟುಂಬದಲ್ಲಿ ಸಂಭ್ರಮ ಮನೆಮಾಡಿದ್ದರೂ ಆ ಸಂತೋಷ ಕೇವಲ ಒಂದು ದಿನಕ್ಕೆ ಸೀಮಿತವಾಯಿತು.
'Mouth on fire': Sonia Gandhi recalls trying tandoori chicken with Rajiv
ಸೋನಿಯಾ - ರಾಜೀವ್ ಗಾಂಧಿ
Updated on: 

ನವದೆಹಲಿ: 1968ರ ಸೆಪ್ಟೆಂಬರ್‌ನ ಒಂದು ದಿನ ಸೋನಿಯಾ ಗಾಂಧಿ ಗರ್ಭಿಣಿಯಾಗಿರುವ ಸುದ್ದಿ ಗಾಂಧಿ ಕುಟುಂಬದಲ್ಲಿ ಸಂತಸದ ಅಲೆ ಎಬ್ಬಿಸಿತ್ತು. ಸಾಮಾನ್ಯವಾಗಿ ಗಂಭೀರ ಮುಖಭಾವ ಹೊಂದಿರುತ್ತಿದ್ದ ಇಂದಿರಾ ಗಾಂಧಿ ಕೂಡ ಸೊಸೆಯನ್ನು ಪ್ರೀತಿಯಿಂದ ಅಪ್ಪಿಕೊಂಡು, ಮುತ್ತಿಟ್ಟು ಸಂಭ್ರಮಿಸಿದ್ದರು. “ಒಬ್ಬ ದೊಡ್ಡ ಮಗು ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದೆ!” ಎಂದು ಹರ್ಷ ವ್ಯಕ್ತಪಡಿಸಿದ್ದರು.

ಆದರೆ, ಆ ಸಂತಸ ಹೆಚ್ಚು ದಿನ ಉಳಿಯಲಿಲ್ಲ.

1969ರ ಜನವರಿ 18ರಂದು ಸೋನಿಯಾ ಗಾಂಧಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿಗದಿತ ಹೆರಿಗೆ ದಿನಾಂಕಕ್ಕಿಂತ ಎರಡು ತಿಂಗಳು ಮೊದಲೇ ಸಹಜ ಹೆರಿಗೆಯಾಗಿತ್ತು. ಕುಟುಂಬದಲ್ಲಿ ಸಂಭ್ರಮ ಮನೆಮಾಡಿದ್ದರೂ ಆ ಸಂತೋಷ ಕೇವಲ ಒಂದು ದಿನಕ್ಕೆ ಸೀಮಿತವಾಯಿತು.

ಸೋನಿಯಾ ಗಾಂಧಿ ತಮ್ಮ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ನಲ್ಲಿ ಇದೇ ಮೊದಲ ಬಾರಿಗೆ ಮೊದಲ ಮಗುವಿನ ಸಾವಿನ ನೋವನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ಬಿಡುಗಡೆಯಾದ ಈ ಪುಸ್ತಕದಲ್ಲಿ, ಮಗುವನ್ನು ಪತಿ ರಾಜೀವ್ ಗಾಂಧಿ ಮತ್ತು ಮೈದುನ ಸಂಜಯ್ ಗಾಂಧಿ ಅವರು ಮೆಹ್ರೌಲಿಯಲ್ಲಿರುವ ಫಿರೋಜ್ ಗಾಂಧಿ ಅವರ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದನ್ನು ವಿವರಿಸಿದ್ದಾರೆ.

ಮಗುವನ್ನು ಇನ್‌ಕ್ಯುಬೇಟರ್‌ನಲ್ಲಿ ಇರಿಸಿದಾಗ ಅದರ ಮೊದಲ ಅಳುವಿನ ಧ್ವನಿ ಕೇಳಿಸಿತ್ತು. ಬಳಿಕ ರಾಜೀವ್ ನನ್ನನ್ನು ಮಗುವನ್ನು ನೋಡಲು ಕರೆದೊಯ್ದರು. ಅದು ಪುಟ್ಟದಾದರೂ ಸಂಪೂರ್ಣವಾಗಿ ರೂಪುಗೊಂಡಿದ್ದ ಗಂಡು ಮಗು. ದಟ್ಟವಾದ ಕಪ್ಪು ಕೂದಲು ಮತ್ತು ಉದ್ದನೆಯ ತೆಳುವಾದ ಬೆರಳುಗಳಿದ್ದವು. ರಾಜೀವ್ ನನ್ನ ಭುಜದ ಮೇಲೆ ಕೈ ಹಾಕಿಕೊಂಡು ನಾವಿಬ್ಬರೂ ಮಗುವನ್ನು ನೋಡುತ್ತಿದ್ದೆವು. ಮೊದಲ ನೋಟದಲ್ಲೇ ಅದರ ಮೇಲೆ ನಮಗೆ ಅಪಾರ ಪ್ರೀತಿ ಮೂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಆದರೆ, ಈ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಮಗು ಬದುಕುಳಿಯುವ ಬಗ್ಗೆ ವೈದ್ಯರಿಗೆ ಅನುಮಾನಗಳಿವೆ ಎಂಬ ಮಾಹಿತಿ ರಾಜೀವ್ ಅವರಿಗೆ ಮೊದಲೇ ತಿಳಿಸಲಾಗಿತ್ತು.

ಬೆಳಿಗ್ಗೆ 6.30ಕ್ಕೆ ಮಗು ಕೊನೆಯುಸಿರೆಳೆದಾಗ ಇಂದಿರಾ ಗಾಂಧಿ ಅವರ ಸಿಬ್ಬಂದಿಯ ಭಾಗವಾಗಿದ್ದ ಆಮಿ ಆಂಟಿ ಅವರ ಸಮ್ಮುಖದಲ್ಲಿ ರಾಜೀವ್ ಈ ವಿಷಯವನ್ನು ನನಗೆ ನಿಧಾನವಾಗಿ ತಿಳಿಸಿದರು. ‘ಇಲ್ಲ, ಇದು ಸಾಧ್ಯವಿಲ್ಲ! ಯಾಕೆ, ಯಾಕೆ?’ ಎಂದು ನಾನು ಮತ್ತೆ ಮತ್ತೆ ಕೇಳುತ್ತಿದ್ದೆ. ನಾವಿಬ್ಬರೂ ಆಘಾತಕ್ಕೊಳಗಾಗಿದ್ದೆವು, ಹೃದಯ ಒಡೆದಂತಾಗಿತ್ತು. ಪರಸ್ಪರ ಗಟ್ಟಿಯಾಗಿ ಅಪ್ಪಿಕೊಂಡೆವು. ನಾನು ಮನಸೋ ಇಚ್ಛೆ ಅತ್ತೆ. ಸದಾ ಭಾವನೆಗಳನ್ನು ನಿಯಂತ್ರಿಸಿಕೊಳ್ಳುತ್ತಿದ್ದ ರಾಜೀವ್ ಕೂಡ ಕಣ್ಣೀರು ಹಾಕಿದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಮಗುವಿನ ಸಾವಿನ ಸುದ್ದಿ ತಿಳಿದ ತಕ್ಷಣ, ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದರು.

ಅವರು ನಮ್ಮನ್ನು ಅಪ್ಪಿಕೊಂಡರು. ಅವರ ಕಣ್ಣುಗಳು ಕೆಂಪಾಗಿ ಊದಿಕೊಂಡಿದ್ದವು. ನಮ್ಮೊಂದಿಗೆ ಬಹಳ ಹೊತ್ತು ಕುಳಿತರು. ನಮ್ಮ ಜೊತೆಯಲ್ಲೇ ಇರಬೇಕೆಂಬ ಆಸೆ ಇದೆ, ಆದರೆ, ಪ್ರವಾಸದ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಹೇಳಿದರು.

'Mouth on fire': Sonia Gandhi recalls trying tandoori chicken with Rajiv
Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

ಮರುದಿನ ಮುಂಜಾನೆ ದುಃಖತಪ್ತರಾಗಿ ಹೊರಟರು. ಅವರೂ ಈ ಸಂತಸದ ಕ್ಷಣಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದರು.

ಬಳಿಕ ಮಗುವಿನ ಅಂತ್ಯಕ್ರಿಯೆ ಹೇಗೆ ನಡೆಸಬೇಕು ಎಂಬ ಪ್ರಶ್ನೆ ಎದುರಾಯಿತು. ಹಿಂದೂ ಸಂಪ್ರದಾಯದ ಪ್ರಕಾರ ನವಜಾತ ಶಿಶುವಿನ ಮೃತದೇಹವನ್ನು ಸಾಮಾನ್ಯವಾಗಿ ದಹನ ಮಾಡುವುದಿಲ್ಲ.

ನವಜಾತ ಶಿಶುವಿನ ದೇಹವನ್ನು ನದಿಗೆ ಬಿಡಲಾಗುತ್ತಿತ್ತು. ಯಾವುದೇ ಸ್ಮಶಾನದಲ್ಲಿ ಹೂಳುವಂತಿರಲಿಲ್ಲ. ಕ್ರೈಸ್ತರ ಸ್ಮಶಾನದಲ್ಲಿ ಹೂಳುವುದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಿತ್ತು. ಹತ್ತಿರದಲ್ಲಿದ್ದ ಪಾರ್ಸಿ ಸ್ಮಶಾನದಲ್ಲೂ ಅವಕಾಶವಿರಲಿಲ್ಲ. ನಾವೇನು ಮಾಡಬೇಕು? ದುಃಖದಿಂದ ಬಳಲುತ್ತಿದ್ದ ನಾನು ಸುಸ್ತಾಗಿ ಕುಳಿತಿದ್ದೆ. ಮಾತನಾಡುವ ಅಥವಾ ಪ್ರತಿಕ್ರಿಯಿಸುವ ಸ್ಥಿತಿಯಲ್ಲೂ ಇರಲಿಲ್ಲ.

ಮಗುವಿನ ಮೃತದೇಹವನ್ನು ನದಿಗೆ ಬಿಡಬೇಕೆಂಬ ವಿಚಾರ ಸೋನಿಯಾ ಅವರಿಗೆ ಹಿಂದಿನ ಘಟನೆಯೊಂದನ್ನು ನೆನಪಿಸಿತ್ತು.

ಒಮ್ಮೆ ಓಖ್ಲಾ ಬ್ಯಾರೇಜ್ ಬಳಿ ನದಿಯ ನೀರಿನಲ್ಲಿ ತೇಲಿಬಂದಿದ್ದ ವ್ಯಕ್ತಿಯೊಬ್ಬರ ಮೃತದೇಹ ಕಸದ ರಾಶಿಯಲ್ಲಿ ಸಿಲುಕಿಕೊಂಡಿತ್ತು. ನೀರಿನ ಸೆಳೆತದಿಂದ ದಡಕ್ಕೆ ಬಂದಿದ್ದ ಆ ದೇಹವನ್ನು ಹಸಿದ ಬೀದಿ ನಾಯಿಗಳು ಎಳೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ಅವರ ಮನಸ್ಸಿನಲ್ಲಿ ಉಳಿದಿತ್ತು.

ಇಲ್ಲ, ಏನೇ ಆದರೂ ನಮ್ಮ ಮಗುವನ್ನು ನದಿಗೆ ಎಸೆಯಲು ನಾನು ಬಿಡುವುದಿಲ್ಲ. ನದಿ ಎಷ್ಟೇ ಪವಿತ್ರವಾಗಿದ್ದರೂ ನನ್ನ ಮಗುವಿಗೆ ಹೀಗೆ ಮಾಡಲು ಸಾಧ್ಯವಿಲ್ಲ. ಬದುಕುವ ಅವಕಾಶವನ್ನೇ ಕಳೆದುಕೊಂಡಿರುವ ನನ್ನ ಪುಟ್ಟ ಮಗುವಿನೊಂದಿಗೆ ಇಂತಹ ಅಮಾನವೀಯವಾಗಿ ಕಾಣುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾಗಿ ಸೋನಿಯಾ ಸ್ಮರಿಸಿದ್ದಾರೆ.

ಕೊನೆಗೆ ಮೆಹ್ರೌಲಿಯಲ್ಲಿದ್ದ ಫಿರೋಜ್ ಗಾಂಧಿ ಅವರ ತೋಟದ ಜಮೀನಿನಲ್ಲಿ ಮಗುವನ್ನು ಸಮಾಧಿ ಮಾಡಲು ನಿರ್ಧರಿಸಲಾಯಿತು.

ಅದು ನೋವಿನಿಂದ ಕೂಡಿದ, ಸಂಕಟದ ನಿರ್ಧಾರವಾಗಿತ್ತು. ಆದರೆ, ಬೇರೆ ದಾರಿಯಿರಲಿಲ್ಲ. ರಾಜೀವ್ ಮತ್ತೆ ಆಸ್ಪತ್ರೆಗೆ ಬಂದು, ತಾವು ಮತ್ತು ಸಂಜಯ್ ಮಗುವನ್ನು ತೋಟದ ಮನೆಯ ಸುಂದರವಾದ ಗುಲಾಬಿ ಬಣ್ಣದ ಬೌಗೆನ್‌ವಿಲ್ಲಾ ಗಿಡದ ಕೆಳಗೆ ಆಳವಾಗಿ ಹೂತುಬಂದಿರುವುದಾಗಿ ತಿಳಿಸಿದರು. ಆಗ ಆ ಗಿಡದಲ್ಲಿ ಹೂವುಗಳು ಸಂಪೂರ್ಣವಾಗಿ ಅರಳಿದ್ದವು. ಮನೆಯ ಒಳಗೋಡೆಯ ಎಡಭಾಗದಲ್ಲಿರುವ ಗಡಿಯ ಪಕ್ಕದಲ್ಲಿ ಆ ಸ್ಥಳವಿತ್ತು ಎಂದು ಬರೆದಿದ್ದಾರೆ.

ಬಹಳ ದಿನಗಳವರೆಗೆ ನಾವು ಅಲ್ಲಿಗೆ ಹೋದಾಗಲೆಲ್ಲ ಆ ಜಾಗದಲ್ಲಿ ಹೂವೊಂದನ್ನು ಇಟ್ಟು ಬರುತ್ತಿದ್ದೆವು. ಅದರಿಂದ ನಮ್ಮ ನೋವು ಕಡಿಮೆಯಾಗದಿದ್ದರೂ, ಅನಿವಾರ್ಯವಾದ ವಾಸ್ತವವನ್ನು ಒಪ್ಪಿಕೊಳ್ಳಬೇಕಾಯಿತು.

ಮಗುವಿನ ಜನನಕ್ಕೂ ಮುನ್ನದ ದಿನಗಳು ಸಹಜವಾಗಿಯೇ ಸಾಗಿದ್ದವು. ಇಂದಿರಾ ಗಾಂಧಿ ಆಹಾರ ಪದ್ಧತಿ, ನಡಿಗೆ ಮತ್ತು ವ್ಯಾಯಾಮದ ಬಗ್ಗೆ ಸೋನಿಯಾ ಅವರಿಗೆ ಆಗಾಗ ಸಲಹೆ ನೀಡುತ್ತಿದ್ದರು.

ನನ್ನ ಸ್ವಂತ ತಾಯಿಯ ವಿಚಾರದಲ್ಲಿ ನಾನು ಖಡಾಖಂಡಿತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದೆ. ಆದರೆ, ರಾಜೀವ್ ಅವರ ತಾಯಿಯ ಮುಂದೆ ಆಗ ನಾನು ಅಷ್ಟೊಂದು ಧೈರ್ಯದಿಂದ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದೆ. ಇಟಾಲಿಯನ್ ಆಹಾರ ಸಿಗುತ್ತಿಲ್ಲ ಎಂಬ ಕೊರತೆ ಬಿಟ್ಟರೆ ಬೇರೆ ಯಾವುದೇ ತೊಂದರೆ ಇರಲಿಲ್ಲ.

ನೇರಳೆ ಹಣ್ಣು, ಫಾಲ್ಸಾ ಹಣ್ಣುಗಳ ಮೇಲೆ ಹೊಸದಾಗಿ ಆಸಕ್ತಿ ಬೆಳೆದಿತ್ತು. ಫ್ಯಾಂಟಾ ಎಂಬ ಕಿತ್ತಳೆ ಬಣ್ಣದ ತಂಪು ಪಾನೀಯವನ್ನೂ ದಿನಕ್ಕೆ 12 ಲೋಟ ಕುಡಿಯುತ್ತಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ.

ಮೊದಲ ಮಗುವನ್ನು ಕಳೆದುಕೊಂಡ ಆಘಾತ ಸೋನಿಯಾ ಅವರನ್ನು ದೀರ್ಘಕಾಲ ಕಾಡಿತ್ತು. ತಾವು ಖಿನ್ನತೆಗೆ ಒಳಗಾಗಿದ್ದೆ, ಅಸಮರ್ಥಳು ಮತ್ತು ತಪ್ಪಿತಸ್ಥಳು ಎಂಬ ಭಾವನೆ ಕಾಡುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ದಂಪತಿ ಮೊದಲ ಮಗುವಿನ ಸಾವಿನ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲೇ ಬಲಪಂಥೀಯ ವಿರೋಧ ಪಕ್ಷದ ಪತ್ರಿಕೆಯೊಂದು, ಇಂದಿರಾ ಗಾಂಧಿ ಅವರು ಅಕ್ರಮ ಸಂಬಂಧದಿಂದ ಹುಟ್ಟಿದ ಮಗುವಿನ ಅಜ್ಜಿಯಾಗುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿತ್ತು.

ಆ ಮಾತುಗಳಲ್ಲಿದ್ದ ವಿಷ ನನ್ನ ಹೃದಯದಲ್ಲಿ ಗಾಯ ಮಾಡಿತು. ಜನರು ಹೇಗೆ ಇಷ್ಟೊಂದು ಕ್ರೂರಿಗಳಾಗಲು ಸಾಧ್ಯ? ಇಂತಹ ದ್ವೇಷಕ್ಕೆ ನಾನು ಏನು ಮಾಡಿದ್ದೆ? ಆ ಕಟುವಾದ ಟೀಕೆಯಿಂದ ಮಗುವನ್ನು ಕಳೆದುಕೊಂಡ ನೋವು ಮತ್ತಷ್ಟು ಹೆಚ್ಚಾಯಿತು. ನನ್ನ ಬಗ್ಗೆಯೇ ಕೀಳರಿಮೆ ಮೂಡಿತು ಎಂದು ಸೋನಿಯಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಕಾಲ ಕಳೆದಂತೆ ದುಃಖದ ಕಾರ್ಮೋಡ ನಿಧಾನವಾಗಿ ಸರಿಯತೊಡಗಿತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ಸೋನಿಯಾ ಮತ್ತೊಮ್ಮೆ ಗರ್ಭಿಣಿಯಾಗಿರುವ ಸುದ್ದಿಯನ್ನು ರಾಜೀವ್ ಅವರಿಗೆ ತಿಳಿಸಿದರು.

ಸಂತೋಷದ ಜೊತೆಗೆ ಆತಂಕವನ್ನೂ ಹೊಂದಿದ್ದ ಸೋನಿಯಾ, 1970ರ ಜೂನ್ 19ರಂದು ರಾಹುಲ್ ಗಾಂಧಿಗೆ ಜನ್ಮ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X