

ನವದೆಹಲಿ: 1978 ರ ಕ್ರಿಸ್‌ಮಸ್ ದಿನದಂದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೆಹಲಿಯ ತಿಹಾರ್ ಜೈಲಿಗೆ ತನ್ನ ಅತ್ತೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಗಾಗಿ ಮನೆಯಿಂದ ಊಟವನ್ನು ಕೊಂಡೊಯ್ದಿದ್ದರು.
ಮಾಜಿ ಪ್ರಧಾನಿಯ ಕೋರಿಕೆಯ ಮೇರೆಗೆ, ಸೋನಿಯಾ ಗಾಂಧಿ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನ ಪ್ರೇಯಸಿಗೂ ತಮ್ಮ ಮನೆಯೂಟ ತಲುಪಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇಂದಿರಾ ಗಾಂಧಿ ಅವರ ಕಾವಲು ಕಾಯುತ್ತಿರುವ ಮೂವರು ಮಹಿಳೆಯರಿಗೆ ಮತ್ತು ಅದೇ ಕಾಂಪೌಂಡ್‌ನಲ್ಲಿರುವ ಯುವ ವಿದೇಶಿ ಕೈದಿಗಳಿಗೆ ಸಾಕಷ್ಟು ಸೋನಿಯಾ ಗಾಂಧಿ ಅವರು ಊಟ ತಲುಪಿಸಿದ್ದು, ಆ ಕೈದಿಯನ್ನು ಸರಣಿ ಹಂತಕ ಚಾರ್ಲ್ಸ್ ಸೊಬ್ರಾಜ್‌ನ ಗೆಳತಿ ಎಂದು ಗುರುತಿಸಿದ್ದಾರೆ.
ನವೆಂಬರ್ 10 ರಂದು ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ, "ಬಿಲಾಗಿಂಗ್ ಎ ಜರ್ನಿ ಆಫ್ ಲವ್" (Bilogging a Journey of Love)ಯಲ್ಲಿ ಉಲ್ಲೇಖಿಸಿರುವ ಅನೇಕ ಸಂಗತಿಗಳು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಯುಕ್ತ ವಿರೋಧ ಪಕ್ಷಗಳ ಒಕ್ಕೂಟವಾದ ಜನತಾ ಪಕ್ಷವು ಅಧಿಕಾರಕ್ಕೆ ಬಂದಿತು. ಇದರಿಂದಾಗಿ ಇಂದಿರಾ ಗಾಂಧಿ ಅವರು ತಿಹಾರ್ ಜೈಲಿನಲ್ಲಿ ಸುಮಾರು ಒಂದು ವಾರ ಕಳೆಯಬೇಕಾಯಿತು. ಈ ಅವಧಿಯಲ್ಲಿ, ಪ್ರತಿದಿನ ಜೈಲಿಗೆ ಭೇಟಿ ನೀಡುತ್ತಿದ್ದೆ ಎಂಬ ಮಾಹಿತಿಯನ್ನು ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ.
"ನನ್ನ ಅತ್ತೆಯ ಕೋರಿಕೆಯ ಮೇರೆಗೆ, ಜೈಲಿನಲ್ಲಿದ್ದ ಮತ್ತೊಬ್ಬ ಯುವ ಮಹಿಳಾ ಕೈದಿ ಮತ್ತು ಮೂವರು ಮಹಿಳಾ ಕಾವಲುಗಾರರಿಗೂ ಸಾಕಾಗುವಷ್ಟು ಊಟವನ್ನು ನಾನು ತಯಾರಿಸಿ ತೆಗೆದುಕೊಂಡು ಹೋಗಬೇಕಾಯಿತು. ಆ ಮಹಿಳಾ ಕೈದಿ ಆಸ್ಟ್ರೇಲಿಯಾ ಮೂಲದವಳಾಗಿದ್ದು, ಥೈಲ್ಯಾಂಡ್, ನೇಪಾಳ ಮತ್ತು ಭಾರತದಲ್ಲಿ ಹಲವಾರು ಪ್ರವಾಸಿಗರನ್ನು ಹತ್ಯೆಗೈದ ಅಪರಾಧಿಯಾಗಿದ್ದ ಕುಖ್ಯಾತ ಚಾರ್ಲ್ಸ್ ಶೋಭರಾಜ್‌ನ ಸಹಚರೆಯಾಗಿದ್ದಳು" ಎಂದು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಆದರೆ ಆ ಮಹಿಳೆಯ ಹೆಸರನ್ನು ಬಹಿರಂಗಪಡಿಸದೆ ಕೇವಲ 'ಆಸ್ಟ್ರೇಲಿಯಾದ ಹುಡುಗಿ' ಎಂದು ಮಾತ್ರ ಬರೆದಿದ್ದಾರೆ.