

ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ಡಚ್ಚನ್-ಮಾರ್ವಾ ಪ್ರದೇಶದಲ್ಲಿ ಬುಧವಾರ ಗಸ್ತು ತಿರುಗುತ್ತಿದ್ದಾಗ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ(ಎಸ್‌ಪಿಒ) ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಕಾಣೆಯಾದ ಸಂದೇಶ ಬಂದ ತಕ್ಷಣ ಅಧಿಕಾರಿಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹಲವು ಗಂಟೆಗಳ ಶೋಧದ ನಂತರ ಧೇರ್ನಾ ಪೋಸ್ಟ್‌ನಿಂದ ಇಬ್ಬರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಅವರ ಬಳಿಯಿದ್ದ ಸೇವಾ ಶಸ್ತ್ರಾಸ್ತ್ರಗಳು (ಸರ್ವಿಸ್ ವೆಪನ್ಸ್) ನಾಪತ್ತೆಯಾಗಿವೆ. ಇದು ಈ ಘಟನೆಯಲ್ಲಿ ಉಗ್ರರ ಕೈವಾಡವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಹತ್ಯೆಗೀಡಾದ ಎಸ್‌ಪಿಒಗಳನ್ನು ದಚ್ಚನ್ ಪ್ರದೇಶದ ಕಿಯಾರ್ ಗ್ರಾಮದ ನಿವಾಸಿಗಳಾದ ರಶ್ಪಾಲ್ ಕುಮಾರ್ (40) ಮತ್ತು ಬಾಬಿ ಚಂದ್ (54) ಎಂದು ಗುರುತಿಸಲಾಗಿದೆ.
ಒಬ್ಬ ಅಧಿಕಾರಿ ತಲೆಗೆ ಗುಂಡು ತಗುಲಿದ್ದರೆ, ಇನ್ನೊಬ್ಬ ಅಧಿಕಾರಿಯ ಬೆನ್ನಿಗೆ ಗಾಯವಾಗಿತ್ತು. ಇವರಿಬ್ಬರೂ ಕಿಶ್ತ್ವಾರ್ ಪೊಲೀಸರ ‘ಸ್ಪೆಷಲ್ ಆಪರೇಷನ್ಸ್ ಗ್ರೂಪ್’ (SOG) ಗೆ ಸೇರಿದವರಾಗಿದ್ದು, ಕಿಯಾರ್ ವಲಯದಲ್ಲಿ ನಿಯೋಜನೆಗೊಂಡಿದ್ದರು.
ಅಧಿಕಾರಿಗಳ ಪ್ರಕಾರ, ಚಂದ್ ಮತ್ತು ಕುಮಾರ್ ಅವರಿಗೆ ಮಾರ್ವಾಹ್‌ನ ಧರ್ನಾ ವಲಯದಲ್ಲಿರುವ 17ನೇ ರಾಷ್ಟ್ರೀಯ ರೈಫಲ್ಸ್ (RR) ನ ತಾತ್ಕಾಲಿಕ ಕಾರ್ಯಾಚರಣೆ ನೆಲೆಗೆ (TOB) ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಬುಧವಾರ ಅವರು ಕಿಯಾರ್‌ನಲ್ಲಿರುವ ತಮ್ಮ ಶಿಬಿರದಿಂದ ಸೇನಾ ನೆಲೆಗೆ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದರು, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇಬ್ಬರು ಅಧಿಕಾರಿಗಳು ನಾಪತ್ತೆಯಾದ ಬೆನ್ನಲ್ಲೇ ಸೇನಾ ಪಡೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.