

ನವದೆಹಲಿ: ದೇಶದ 'ಯಶೋಗಾಥೆಗಳನ್ನು ಪ್ರಚುರಪಡಿಸುವ ಕುರಿತು ಕೆಲಸ ಮಾಡುವಂತೆ' ಮಾಧ್ಯಮಗಳಿಗೆ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದು ಗುರುವಾರ ಹೇಳಿದರು.
ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ 'ದೀಪಾವಳಿ ಮಿಲನ್' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಎತ್ತಿ ತೋರಿಸಿದರು. ಅಲ್ಲದೆ, ಭಾರತವು ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ದೃಢವಾಗಿ ಹೇಳಿದರು.
'ಎನ್‌ಡಿಎ ಸರ್ಕಾರವು ದೇಶದಿಂದ ಬಡತನವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದೆ ಮತ್ತು 50 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ತಂದಿದೆ. ಹಿಂದೆ 'ಗರೀಬಿ ಹಟಾವೋ' (ಬಡತನ ನಿರ್ಮೂಲನೆ) ಎಂಬ ಘೋಷಣೆಗಳಿದ್ದವು. ಆದರೆ, ಈ ಸರ್ಕಾರವು ಬಡತನವನ್ನು ಹೋಗಲಾಡಿಸಿದೆ. ವಿಶ್ವ ಬ್ಯಾಂಕ್‌ನ ಪ್ರಕಾರ, ಕಳೆದ 12 ವರ್ಷಗಳಲ್ಲಿ 50 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ' ಎಂದು ಅವರು ತಿಳಿಸಿದರು.
ಇಂತಹ ಕಾರ್ಯಕ್ರಮಗಳಲ್ಲಿ ಕುರ್ಚಿಗಳನ್ನು ಜೋಡಿಸುತ್ತಿದ್ದ ದಿನಗಳಿಂದಲೂ ತಮಗೆ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ. 'ನಾನು ಮಾಧ್ಯಮಗಳೊಂದಿಗೆ ವ್ಯವಹರಿಸಿದ್ದೇನೆ ಮತ್ತು ಪತ್ರಿಕಾ ಪ್ರಕಟಣೆಗಳ ಕಾಲದಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗಿನ ಅವುಗಳ ವಿಕಾಸವನ್ನು ಕಂಡಿದ್ದೇನೆ' ಎಂದು ಮೋದಿ ಹೇಳಿದರು.
ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.
ಮಾದಕವಸ್ತು ದುರುಪಯೋಗದ ವಿರುದ್ಧದ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವಂತೆಯೂ ಮನವಿ ಮಾಡಿದ ಅವರು, ಭಾರತೀಯ ಮಾಧ್ಯಮಗಳು ದೇಶದ ಯಶೋಗಾಥೆಗಳನ್ನು (success stories) ಪ್ರಚುರಪಡಿಸುವ ಕೆಲಸ ಮಾಡಬೇಕೆಂದು ನಾನು ಕೋರುತ್ತೇನೆ. ಇಂತಹ ಕೆಲಸ ಈಗಾಗಲೇ ಸಾಕಷ್ಟು ನಡೆಯುತ್ತಿದೆ' ಎಂದರು.