

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯವು ಮತ್ತಷ್ಟು ಉಲ್ಬಣಗೊಂಡಿದ್ದು, ಶುಕ್ರವಾರ ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕವು (AQI) 494ಕ್ಕೆ ತಲುಪುವ ಮೂಲಕ 'ಅಪಾಯಕಾರಿ' ಮಟ್ಟವನ್ನು ತಲುಪಿದೆ.
ದಟ್ಟವಾದ ಮಂಜು ಮತ್ತು ವಿಷಕಾರಿ ಹೊಗೆ ನಗರವನ್ನು ಆವರಿಸಿದ್ದು, ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ವರದಿಯ ಪ್ರಕಾರ, ಬೆಳಿಗ್ಗೆ 7:31ರ ಸುಮಾರಿಗೆ ನಗರದ ಸರಾಸರಿ AQI 494 ದಾಖಲಾಗಿದೆ. ಹಲವು ಪ್ರದೇಶಗಳಲ್ಲಿ ಗೋಚರತೆ ತೀವ್ರವಾಗಿ ಕುಸಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಐಐಟಿ ದೆಹಲಿ ಪ್ರದೇಶದಲ್ಲಿ 488 ಎಕ್ಯೂಐ ದಾಖಲಾಗಿದ್ದರೆ, ಐಟಿಒನಲ್ಲಿ 455, ಆನಂದ್ ವಿಹಾರ್ನಲ್ಲಿ 419, ರೋಹಿಣಿಯಲ್ಲಿ 413 ಮತ್ತು ರಜೋಕ್ರಿ ಗಡಿಯಲ್ಲಿ 402 ಎಕ್ಯೂಐ ದಾಖಲಾಗಿದೆ. ಈ ಎಲ್ಲ ಪ್ರದೇಶಗಳು ತೀವ್ರ ಮಾಲಿನ್ಯದ ವಿಭಾಗದಲ್ಲಿವೆ.
ಇತರ ಪ್ರದೇಶಗಳಲ್ಲಿಯೂ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಆರ್.ಕೆ. ಪುರಂನಲ್ಲಿ 391, ಮಂದಿರ್ ಮಾರ್ಗ್ನಲ್ಲಿ 378, ದ್ವಾರಕಾ ಎಕ್ಸ್ಪ್ರೆಸ್ವೇಯಲ್ಲಿ 369, ಉತ್ತಮ್ ನಗರದಲ್ಲಿ 363 ಮತ್ತು ಲೋಧಿ ರಸ್ತೆಯಲ್ಲಿ 341 ಎಕ್ಯೂಐ ದಾಖಲಾಗಿದೆ. ಧೌಲಾ ಕುವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ 161 ಎಕ್ಯೂಐ ದಾಖಲಾಗಿದ್ದು, ಇದು ಸಾಧಾರಣ ಮಾಲಿನ್ಯದ ವಿಭಾಗದಲ್ಲಿದೆ.
ವಾಯುಮಾಲಿನ್ಯದ ತೀವ್ರತೆಯನ್ನು ತಗ್ಗಿಸಲು ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗರದಾದ್ಯಂತ ನೀರು ಸಿಂಪಡಿಸುವ ವಾಹನಗಳನ್ನು ನಿಯೋಜಿಸುವ ಮೂಲಕ ಗಾಳಿಯಲ್ಲಿನ ಧೂಳಿನ ಕಣಗಳ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಇದೇ ವೇಳೆ, ದೆಹಲಿಯ ವಾಯುಮಾಲಿನ್ಯದ ಪ್ರಮಾಣವನ್ನು ಬಿಜೆಪಿ ಸರ್ಕಾರ ತಪ್ಪಾಗಿ ಬಿಂಬಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಗುರುವಾರ ಆರೋಪಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸುತ್ತಿರುವ ವಾಯು ಗುಣಮಟ್ಟ ಸೂಚ್ಯಂಕದ ವಿಶ್ವಾಸಾರ್ಹತೆಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.
ಶುದ್ಧ ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ (ಸಿಆರ್ಇಎ) ವರದಿಯನ್ನು ಉಲ್ಲೇಖಿಸಿದ ಅವರು, ಅಧಿಕೃತ ಸರ್ಕಾರಿ ವೆಬ್ಸೈಟ್ಗಳಲ್ಲಿ ತೋರಿಸಲಾಗುತ್ತಿರುವ ಪ್ರಮಾಣಕ್ಕಿಂತ ವಾಸ್ತವಿಕ ವಾಯುಮಾಲಿನ್ಯ ಶೇ.49ರಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಾರದ್ವಾಜ್, 370ರಷ್ಟು ಎಕ್ಯೂಐ ದಾಖಲಾಗಿದ್ದರೆ, ವಾಸ್ತವಿಕ ಮಾಲಿನ್ಯದ ಪ್ರಮಾಣ 560 ಅಥವಾ ಅದಕ್ಕಿಂತ ಹೆಚ್ಚಿರಬಹುದು ಎಂದು ಪ್ರತಿಪಾದಿಸಿದರು.
ದೆಹಲಿಯ ಮಾಲಿನ್ಯದ ಪ್ರಮಾಣವನ್ನು ನಿಮಗೆ ತಿಳಿಸಲಾಗಿರುವುದಕ್ಕಿಂತ ಶೇ.49ರಷ್ಟು ಹೆಚ್ಚಾಗಿ ಸಿಆರ್ಇಎ ವರದಿ ತೋರಿಸಿದೆ. ಅಂದರೆ, ನಿಮಗೆ ತಿಳಿಸಿರುವ ಪ್ರಮಾಣಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಮಾಲಿನ್ಯವಿದೆ ಎಂದು ಹೇಳಿದರು.
ಮಾಲಿನ್ಯ ಮಾಪನ ವ್ಯವಸ್ಥೆಯ ಮಿತಿಗಳ ಕುರಿತು ಸಿಪಿಸಿಬಿ ನೀಡಿರುವ ವಿವರಣೆಯನ್ನೂ ಭಾರದ್ವಾಜ್ ಪ್ರಶ್ನಿಸಿದ್ದಾರೆ. ಎಕ್ಯೂಐ ಪ್ರಮಾಣ 999 ಮೀರಿದರೆ ಅದನ್ನು ದಾಖಲಿಸಲು ಅಥವಾ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ ಎಂಬ ಮಂಡಳಿಯ ಹೇಳಿಕೆಯನ್ನು ಅವರು ಟೀಕಿಸಿದ್ದಾರೆ.
ಮಾಲಿನ್ಯದ ಪ್ರಮಾಣ 999 ತಲುಪಿದರೆ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ ಮತ್ತು 999 ಎಂಬ ಸಂಖ್ಯೆಯನ್ನೂ ಪ್ರದರ್ಶಿಸುವುದಿಲ್ಲ ಎಂದು ಸಿಪಿಸಿಬಿ ಹೇಳಿದೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಶೂನ್ಯ ಎಂದು ತೋರಿಸಲಾಗುತ್ತದೆ ಎಂದು ಆರೋಪಿಸಿದರು.
ಇಂತಹ ವ್ಯತ್ಯಾಸವು ದೆಹಲಿಯ ಎರಡು ಕೋಟಿ ಜನರಿಗೆ ಮಾಡುತ್ತಿರುವ ವಂಚನೆಯಾಗಿದೆ. ಇದರಿಂದ ಮಕ್ಕಳು ಮತ್ತು ವೃದ್ಧರ ಆರೋಗ್ಯಕ್ಕೆ ಅಪಾಯ ಎದುರಾಗುತ್ತಿದೆ ಎಂದು ಭಾರದ್ವಾಜ್ ದೂರಿದ್ದಾರೆ.
ದೆಹಲಿಯ 59 ಮಾಲಿನ್ಯ ಮಾಪನ ಕೇಂದ್ರಗಳಿಂದ ಸಂಗ್ರಹಿಸಲಾದ ಗಂಟೆವಾರು ಪಿಎಂ2.5 ದತ್ತಾಂಶವನ್ನು ಆಧರಿಸಿ ಸಿಆರ್ಇಎ ಈ ವಿಶ್ಲೇಷಣೆ ನಡೆಸಿದೆ. ನವೆಂಬರ್ 8ರ ಸಂಜೆ 4ರಿಂದ ನವೆಂಬರ್ 9ರ ಸಂಜೆ 4ರವರೆಗಿನ ಅವಧಿಯಲ್ಲಿ 255 ಗಂಟೆವಾರು ಮಾಪನ ದಾಖಲೆಗಳು ಲಭ್ಯವಿರಲಿಲ್ಲ ಎಂದು ವರದಿ ಗುರುತಿಸಿದೆ.
ಇದೇ ಅವಧಿಯಲ್ಲಿ 24 ಗಂಟೆಗಳ ಸರಾಸರಿ ಪಿಎಂ2.5 ಸಾಂದ್ರತೆಯು ಪ್ರತಿ ಘನ ಮೀಟರ್ಗೆ 269 ಮೈಕ್ರೋಗ್ರಾಂನಿಂದ 400 ಮೈಕ್ರೋಗ್ರಾಂಗೆ ಏರಿಕೆಯಾಗಿದ್ದು, ಸುಮಾರು ಶೇ.49ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.