

ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಅನೇಕ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸುವುದರ ಜೊತೆಗೆ ಹಲವು ಟೀಕೆಗಳಿಗೂ ಗುರಿಯಾಗಿದೆ. ಪುಸಕ್ತದಲ್ಲಿನ ಅಂತಹ ಭಾಗವೊಂದನ್ನು 2002ರ ಗೋಧ್ರಾ ರೈಲು ದಹನ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ತಳ್ಳಿಹಾಕಿದ್ದಾರೆ. ಈ ಪುಸ್ತಕದಲ್ಲಿ ಬೆಂಕಿಗೆ ಕಾರಣವನ್ನು "ವಿವಾದಾತ್ಮಕ" ಎಂದು ಉಲ್ಲೇಖಿಸಲಾಗಿದೆ.
ಎಎನ್ಐ (ANI) ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಸ್ಥಾನ, ಈ ಘಟನೆಯ ತನಿಖೆ ಪೂರ್ಣಗೊಂಡಿದೆ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ (forensic evidence) ಮೂಲಕ ಬೆಂಕಿ ಹತ್ತಿಕೊಂಡ ಕಾರಣವನ್ನು ಖಚಿತಪಡಿಸಲಾಗಿದೆ. ತನಿಖಾ ಫಲಿತಾಂಶಗಳ ಬಗ್ಗೆ ಈಗಲೂ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರೆ ಅದು ರಾಜಕೀಯ ಕಾರಣಗಳಿಗಾಗಿ" ಮಾತ್ರ ಎಂದರು.
"ಸಬರಮತಿ ಎಕ್ಸ್ಪ್ರೆಸ್ನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಗಲಭೆಗಳು ಭುಗಿಲೆದ್ದಿತ್ತು. 59 ಯಾತ್ರಾರ್ಥಿಗಳು ಮೃತಪಟ್ಟಿದ್ದರು. ರಾಮಮಂದಿರ ನಿರ್ಮಾಣಕ್ಕಾಗಿ ಸ್ವಯಂಸೇವಕರಾಗಿ ತೆರಳಿದ್ದ ಹಿಂದೂ 'ಕರಸೇವಕ'ರನ್ನು ಹೊತ್ತು, ಅಯೋಧ್ಯೆಯಿಂದ ರಾಜ್ಯದ ರಾಜಧಾನಿ ಅಹಮದಾಬಾದ್ಗೆ ಈ ರೈಲು ಮರಳುತ್ತಿತ್ತು. ಬೆಂಕಿ ಹತ್ತಿಕೊಂಡಕ್ಕೆ ಕಾರಣ ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ, ಆದರೆ ಅದರ ನಂತರ ಉಂಟಾದ ಅಲ್ಲೋಲಕಲ್ಲೋಲವು ರಾಜ್ಯದ ಹಲವು ಭಾಗಗಳಿಗೆ ಹರಡಿತು ಎಂದು ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಸ್ಥಾನ, ಇದು ಸಂಪೂರ್ಣವಾಗಿ ತಪ್ಪು, ತನಿಖೆಯು ಅಧಿಕೃತವಾಗಿದೆ. ಇದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗಿದೆ. ಈಗಲೂ ಯಾರಾದರೂ ಇದರ ಬಗ್ಗೆ ಸಂದೇಹ ಸೃಷ್ಟಿಸುತ್ತಿದ್ದರೆ, ಅದು ರಾಜಕೀಯ ಕಾರಣಗಳಿಗಾಗಿ ಮಾತ್ರ; ಇದಕ್ಕೆ ಬೇರೆ ಯಾವುದೇ ವಿವರಣೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ರಾಜಕೀಯ ಕಾರಣವು ನಿರ್ದಿಷ್ಟ "ವೋಟ್ ಬ್ಯಾಂಕ್" (ಮತ ಬ್ಯಾಂಕ್) ಗೆ ಸಂಬಂಧಿಸಿದೆಯೇ ಎಂದು ಕೇಳಿದಾಗ, "ಗೋಧ್ರಾದಲ್ಲಿ ಮೃತಪಟ್ಟವರೆಲ್ಲರೂ ಹಿಂದೂಗಳಾಗಿದ್ದರು. ಆದರೆ, ಮೃತಪಟ್ಟವರು ಯಾರೇ ಆಗಿರಲಿ - ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ - ಸಾವು ಸಾವೇ, ಕೊಲೆ ಕೊಲೆಯೇ. ಆದ್ದರಿಂದ ನಾವು ಇದನ್ನು ಒಂದು ಅಪರಾಧ ಕೃತ್ಯವೆಂದು ಪರಿಗಣಿಸಿ ತನಿಖೆ ನಡೆಸಿದೆವು. ಆದರೆ ದುರದೃಷ್ಟವಶಾತ್, ಈ ವಿಷಯವನ್ನು ತಿರುಚಿ ಮೋದಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತನಿಖೆ ನಡೆಸಲಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯಿತು ಎಂದರು.
2002ರ ಫೆಬ್ರವರಿ 27ರಂದು, ಹಿಂದೂ ಕರಸೇವಕರನ್ನು ಹೊತ್ತೊಯ್ಯುತ್ತಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಗುಂಪೊಂದು ಬೆಂಕಿ ಹಚ್ಚಿತು. ಈ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 59 ಮಂದಿ ಸಾವನ್ನಪ್ಪಿದರು. ಇದರ ಬೆನ್ನಲ್ಲೇ ಗುಜರಾತ್ ರಾಜ್ಯಾದ್ಯಂತ ಕೋಮುಗಲಭೆಗಳು ಭುಗಿಲೆದ್ದವು. ಇದರಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು. 2011ರಲ್ಲಿ, ವಿಶೇಷ ನ್ಯಾಯಾಲಯವೊಂದು ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿತು.
ನಂತರ, 2014ರಲ್ಲಿ ಗುಜರಾತ್ ಹೈಕೋರ್ಟ್ ಈ ಪೈಕಿ 11 ಮಂದಿಯ ಮೇಲಿನ ಶಿಕ್ಷೆಯನ್ನು ಎತ್ತಿಹಿಡಿಯಿತು ಮತ್ತು ಉಳಿದ 20 ಮಂದಿಯನ್ನು ದೋಷಮುಕ್ತಗೊಳಿಸಿತು. ಅಂತಿಮವಾಗಿ, ಭಾರತದ ಸುಪ್ರೀಂ ಕೋರ್ಟ್, ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ, ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು.