

ಪ್ರೀತಿಗೆ ಗಡಿಗಳಿಲ್ಲದಿರಬಹುದು, ಆದರೆ ದೂರದ ಪ್ರದೇಶಗಳಲ್ಲಿರುವ ವ್ಯಕ್ತಿಗಳ ನಡುವಿನ ಪ್ರೇಮಕಥೆಗಳೆಲ್ಲವೂ ಸುಖಾಂತ್ಯ ಕಾಣುತ್ತವೆ ಎಂದು ಹೇಳಲಾಗದು.
ಡೇಟಿಂಗ್ ಆ್ಯಪ್ ಒಂದರ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಲು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ರಾಜಸ್ಥಾನಕ್ಕೆ ಬಂದ ಕೆನಡಾದ ಮಹಿಳೆಯೊಬ್ಬರಿಗೆ ತೀವ್ರ ನಿರಾಸೆಯಾಗಿದೆ. ಮಹಿಳೆಯ ಅಸಲಿ ವಯಸ್ಸು ತಿಳಿಯುತ್ತಿದ್ದಂತೆಯೇ ಯುವಕ ಮದುವೆಯಾಗಲು ನಿರಾಕರಿಸಿದ್ದಾರೆ. ಪರಿಣಾಮ ಮಹಿಳೆ ಕೆನಡಾದ ರಾಯಭಾರ ಕಚೇರಿಯ ಮೊರೆ ಹೋಗಿದ್ದಾರೆ.
ಈ ಘಟನೆಯು ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ನೀಮ್ರಾನಾದಲ್ಲಿ ಬೆಳಕಿಗೆ ಬಂದಿದೆ. ಮದುವೆಯ ವಿಷಯದಲ್ಲಿ ಉಂಟಾದ ವಿವಾದದ ನಂತರ, ಆ ಮಹಿಳೆ ಕೆನಡಾದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ತದನಂತರ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.
ಡೇಟಿಂಗ್ ಆ್ಯಪ್‌ನಲ್ಲಿ ಆರಂಭವಾದ ಸ್ನೇಹ
ನೀಮ್ರಾನಾ ಪೊಲೀಸ್ ಠಾಣಾಧಿಕಾರಿ ಸುರೇಂದ್ರ ಯಾದವ್ ಅವರ ಪ್ರಕಾರ, ಹರಿಯಾಣದ ಪಾಣಿಪತ್ ನಿವಾಸಿ ನಿತಿನ್ ಮತ್ತು ಈ ಮಹಿಳೆ ಸುಮಾರು ಒಂದು ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಒಂದರ ಮೂಲಕ ಪರಿಚಯವಾಗಿದ್ದಾರೆ.
ಅವರ ನಡುವಿನ ಮಾತುಕತೆಗಳು ಕ್ರಮೇಣ ಪ್ರೀತಿಗೆ ತಿರುಗಿದ್ದು, ಅಂತಿಮವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ಯೋಜನೆಯ ಭಾಗವಾಗಿ, ಆ ಮಹಿಳೆ ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಪ್ರಯಾಣಿಸಿ, ನವೆಂಬರ್ 11 ರಂದು ದೆಹಲಿಗೆ ಬಂದಿಳಿದರು.
ಖುದ್ದು ನಿತಿನ್ ಅವರೇ ದೆಹಲಿ ಏರ್‌ಪೋರ್ಟ್‌ಗೆ ಹೋಗಿ ಆಕೆಯನ್ನು ಬರಮಾಡಿಕೊಂಡು, ನೀಮ್ರಾನಾದಲ್ಲಿರುವ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿದ್ದಾರೆ.
ಹೌಸಿಂಗ್ ಸೊಸೈಟಿಯ ಫ್ಲ್ಯಾಟ್‌ನಲ್ಲಿ ಇಬ್ಬರೂ ಎರಡು ದಿನಗಳ ಕಾಲ ಒಟ್ಟಿಗೆ ತಂಗಿದ್ದರು. ಈ ವೇಳೆ ಮದುವೆಯ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆದರೆ, ಮಹಿಳೆಗೆ ಸುಮಾರು 61 ವರ್ಷ ವಯಸ್ಸಾಗಿದೆ ಎಂಬ ಸತ್ಯ ನಿತಿನ್‌ಗೆ ತಿಳಿಯುತ್ತಿದ್ದಂತೆಯೇ ಇಡೀ ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಮಹಿಳೆಯ ವಯಸ್ಸಿನ ವಿಚಾರ ತಿಳಿದು ಆಘಾತಕ್ಕೆ ಒಳಗಾದ ನಿತಿನ್, ಮದುವೆಯಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ಮತ್ತು ಮನಸ್ತಾಪ ಉಂಟಾಗಿದೆ.
ವಿದೇಶಿ ನೆಲದಲ್ಲಿ ಪ್ರಿಯಕರನಿಂದ ಮೋಸ ಹೋದಂತಾದ ಕೆನಡಾ ಮಹಿಳೆ, ತಕ್ಷಣವೇ ನವೆಂಬರ್ 13ರಂದು ಕೆನಡಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತನಗಾದ ಅನ್ಯಾಯ ಮತ್ತು ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದಾರೆ. ರಾಯಭಾರ ಕಚೇರಿಯಿಂದ ಮಾಹಿತಿ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ನೀಮ್ರಾನಾ ಪೊಲೀಸರು, ತಕ್ಷಣವೇ ನಿತಿನ್ ಇದ್ದ ಫ್ಲ್ಯಾಟ್‌ಗೆ ತೆರಳಿ ಯುವಕ ಮತ್ತು ಕೆನಡಾ ಮಹಿಳೆ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಸದ್ಯ ಪೊಲೀಸರು ಆರೋಪಿ ನಿತಿನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೆನಡಾ ಮಹಿಳೆಗೆ ಕೋಟ್‌ಪುಟ್ಲಿಯ 'ಕೋರ್ ಸೆಂಟರ್'ನಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹರಿಯಾಣದ ಪಾಣಿಪತ್ ಮೂಲದ ನಿತಿನ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಯುವಕನ ವಿಚಾರಣೆ ಹಾಗೂ ತನಿಖೆಯ ವರದಿಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.