ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಂಸ್ಥಾಪಕ ಲಲಿತ್ ಮೋದಿ, ಸೆಪ್ಟೆಂಬರ್ 15, 2026 ರಂದು ತಾವು ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿರುವುದಾಗಿ ಶನಿವಾರ ಘೋಷಿಸಿದ್ದಾರೆ. ಇದನ್ನು ಅವರು ತಮ್ಮ ಜೀವನದ ಅತ್ಯಂತ ವೈಯಕ್ತಿಕ ಮತ್ತು ಹೆಮ್ಮೆಯ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ನವೆಂಬರ್ 14 ರಂದು ಪ್ರತಿಷ್ಠಿತ 'ಆಕ್ಸ್ಫರ್ಡ್ ಯೂನಿಯನ್' (Oxford Union) ನಲ್ಲಿ ಮಾತನಾಡುತ್ತಿದ್ದಾಗ ಈ ವಿಷಯವನ್ನು ಹಂಚಿಕೊಂಡ ಮೋದಿ, ಯುನೈಟೆಡ್ ಕಿಂಗ್ಡಮ್ ಹಲವು ವರ್ಷಗಳಿಂದ ತಮ್ಮ ಮನೆಯಾಗಿದೆ. ಬ್ರಿಟಿಷ್ ಪ್ರಜೆಯಾಗುವುದು ಕೇವಲ ಒಂದು ಸವಲತ್ತು ಮಾತ್ರವಲ್ಲ, ಬದಲಾಗಿ ಅದೊಂದು ಜವಾಬ್ದಾರಿಯೂ ಹೌದು. ಈ ಜವಾಬ್ದಾರಿಯನ್ನು ಹೆಮ್ಮೆ, ಕೃತಜ್ಞತೆ ಮತ್ತು ತಮಗೆ ಆ ದೇಶದೊಂದಿಗೆ ಬಲವಾದ ನಂಟಿದೆ ಎಂಬ ಭಾವನೆಯೊಂದಿಗೆ ಸ್ವೀಕರಿಸಿದ್ದಾಗಿ ತಿಳಿಸಿದರು.
'ಒಂದು ಹೆಮ್ಮೆಯ ಕ್ಷಣ. ಒಂದು ಹೊಸ ಅಧ್ಯಾಯ. ಇಂದು, 14 ನವೆಂಬರ್ 2026 ರಂದು, ಆಕ್ಸ್ಫರ್ಡ್ ಯೂನಿಯನ್ನಲ್ಲಿ (Oxford Union) ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ, ನನ್ನ ಜೀವನದ ಅತ್ಯಂತ ವಿಶೇಷ ಹಾಗೂ ವೈಯಕ್ತಿಕ ಮೈಲಿಗಲ್ಲೊಂದನ್ನು ನಾನು ಸಾರ್ವಜನಿಕವಾಗಿ ಹಂಚಿಕೊಂಡೆ. ಬ್ರಿಟಿಷ್ ಪ್ರಜೆಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. 15 ಸೆಪ್ಟೆಂಬರ್ 2026 ರಂದು, ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಾನು ನನ್ನ ಬ್ರಿಟಿಷ್ ಪೌರತ್ವವನ್ನು ಸಂಭ್ರಮಿಸಿದೆ. ಈ ಸಮಾರಂಭವು ನನ್ನ ಹೃದಯದಲ್ಲಿ ಸದಾ ವಿಶೇಷ ಸ್ಥಾನ ಹೊಂದಿರುತ್ತದೆ. ಯುನೈಟೆಡ್ ಕಿಂಗ್ಡಮ್ ಹಲವು ವರ್ಷಗಳಿಂದ ನನ್ನ ಮನೆಯಾಗಿದೆ. ಇಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ನಾನು ಆಳವಾಗಿ ಮೆಚ್ಚಿಕೊಂಡಿದ್ದೇನೆ ಮತ್ತು ಗೌರವಿಸುತ್ತೇನೆ. ಬ್ರಿಟಿಷ್ ಪ್ರಜೆಯಾಗುವುದು ಒಂದು ವಿಶೇಷ ಗೌರವ ಹಾಗೂ ಜವಾಬ್ದಾರಿಯಾಗಿದೆ; ಇದನ್ನು ನಾನು ಹೆಮ್ಮೆ, ಕೃತಜ್ಞತೆ ಮತ್ತು ಇಲ್ಲಿನ ಭಾಗವಾಗಿದ್ದೇನೆ ಎಂಬ ಭಾವನೆಯೊಂದಿಗೆ ಸ್ವೀಕರಿಸುತ್ತೇನೆ' ಎಂದು ಮೋದಿ ಅವರು 'ಎಕ್ಸ್' (X) ಪೋಸ್ಟ್ನಲ್ಲಿ ಬರೆದಿದ್ದಾರೆ.
ವಿವಿಧ ಸಂಸ್ಕೃತಿಗಳು ಮತ್ತು ಅನುಭವಗಳ ಮೂಲಕ ಸಾಗಿದ ತಮ್ಮ ಪಯಣವನ್ನು ಮೆಲುಕು ಹಾಕುತ್ತಾ, ತಾವು ಈಗ ಹೆಮ್ಮೆಯಿಂದ 'ತಮ್ಮ ಮನೆ' ಎಂದು ಕರೆಯುವ ಈ ದೇಶಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಈ ಸ್ಮರಣೀಯ ಸಂದರ್ಭದ ಭಾಗವಾಗಿದ್ದಕ್ಕಾಗಿ ಅವರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಆಕ್ಸ್ಫರ್ಡ್ ಯೂನಿಯನ್ಗೆ ಧನ್ಯವಾದ ಅರ್ಪಿಸಿದರು. ಕಿಂಗ್ ಚಾರ್ಲ್ಸ್ III ಅವರ ಜನ್ಮದಿನದಂದು ಈ ಘೋಷಣೆಯನ್ನು ಹಂಚಿಕೊಂಡಿದ್ದು ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದಿದ್ದಾರೆ.
'ನನ್ನ ಜೀವನದ ಪಯಣವು ವಿವಿಧ ಸಂಸ್ಕೃತಿಗಳು ಮತ್ತು ಅನುಭವಗಳಿಂದ ರೂಪಿತವಾಗಿದೆ. ನಾನು ಹೆಮ್ಮೆಯಿಂದ 'ನನ್ನ ಮನೆ' ಎಂದು ಕರೆಯುವ ಈ ದೇಶಕ್ಕೆ ಸಕಾರಾತ್ಮಕ ಕೊಡುಗೆಯನ್ನು ನೀಡುವುದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ. ನನ್ನ ಕುಟುಂಬ, ಸ್ನೇಹಿತರು ಮತ್ತು ಈ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಹಾಗೆಯೇ, ಈ ಸುದ್ದಿಯನ್ನು ಹಂಚಿಕೊಳ್ಳಲು ಇಂತಹ ಸ್ಮರಣೀಯ ಅವಕಾಶವನ್ನು ಒದಗಿಸಿಕೊಟ್ಟ 'ಆಕ್ಸ್ಫರ್ಡ್ ಯೂನಿಯನ್'ಗೂ (Oxford Union) ಧನ್ಯವಾದಗಳು. ಇದೊಂದು ಹೊಸ ಅಧ್ಯಾಯ; ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಿರೀಕ್ಷೆಗಳಿವೆ. ಮಹಾರಾಜ ಚಾರ್ಲ್ಸ್ III ಅವರ ಜನ್ಮದಿನದಂದು ಈ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ವಿಶೇಷವಾಗಿದೆ. ಗಾಡ್ ಸೇವ್ ದಿ ಕಿಂಗ್! - ಲಲಿತ್ ಮೋದಿ, ಐಪಿಎಲ್ (IPL) ಸಂಸ್ಥಾಪಕ' ಎಂದು ಅವರು ಹೇಳಿದರು.