SIR ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟವರು Form 6 ಮೂಲಕ ಮರುಅರ್ಜಿ ಸಲ್ಲಿಸಿದರೆ ಕಾನೂನು ಕ್ರಮವಿಲ್ಲ: ಚುನಾವಣಾ ಆಯೋಗ

ಈ ಹಿಂದೆ ಮತದಾರರಾಗಿ ನೋಂದಣಿಯಾಗಿದ್ದರೂ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಯು ಹೊಸದಾಗಿ ಫಾರ್ಮ್ 6 ಸಲ್ಲಿಸಬಹುದು.
Supreme court
ಸುಪ್ರೀಂ ಕೋರ್ಟ್
Updated on: 

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು, ಜನತಾ ಪ್ರಾತಿನಿಧ್ಯ ಕಾಯ್ದೆ-1950ರ ಸೆಕ್ಷನ್ 31ರ ಅಡಿಯಲ್ಲಿ ಯಾವುದೇ ಕಾನೂನು ಕ್ರಮ ಅಥವಾ ವಿಚಾರಣೆಯ ಭೀತಿಯಿಲ್ಲದೆ ಫಾರ್ಮ್ 6 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ (ಇಸಿ) ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಶನಿವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಈ ಹಿಂದೆ ಮತದಾರರಾಗಿ ನೋಂದಣಿಯಾಗಿದ್ದರೂ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿರುವವರು ಹೊಸದಾಗಿ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಮರು ಸೇರ್ಪಡೆಗೊಳಿಸಿಕೊಳ್ಳಬಹುದು ಎಂದು ತಿಳಿಸಿದೆ.

ಈ ಹಿಂದೆ ಮತದಾರರಾಗಿ ನೋಂದಣಿಯಾಗಿದ್ದರೂ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಸಿದ್ಧಪಡಿಸಿದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಯು ಹೊಸದಾಗಿ ಫಾರ್ಮ್ 6 ಸಲ್ಲಿಸಬಹುದು. ಅಂತಹ ವ್ಯಕ್ತಿಯ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆ-1950ರ ಸೆಕ್ಷನ್ 31ರ ಅಡಿಯಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಆಯೋಗ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಈ ಹಿಂದೆ ಮತದಾರರಾಗಿ ನೋಂದಣಿಯಾಗಿದ್ದರೂ ಮತ್ತೊಮ್ಮೆ ಫಾರ್ಮ್ 6 ಸಲ್ಲಿಸಿದರೆ ಅದನ್ನು ಸುಳ್ಳು ಘೋಷಣೆ ಅಥವಾ ದ್ವಿಪ್ರತಿಯಾಗಿ ನೋಂದಣದು ಪರಿಗಣಿಸಿ ದಂಡನಾತ್ಮಕ ಕ್ರಮ ಕೈಗೊಳ್ಳಬಹುದು ಎಂಬ ಆತಂಕದಿಂದ ಹಲವು ಮತದಾರರು ಅರ್ಜಿ ಸಲ್ಲಿಸಲು ಹಿಂಜರಿಯುತ್ತಿದ್ದಾರೆ ಎಂಬ ವರದಿಗಳು ಬಂದಿವೆ ಎಂದು ಆಯೋಗ ಹೇಳಿದೆ.

ಈ ಆತಂಕಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿರುವ ಆಯೋಗ, ಮತದಾರರ ಪಟ್ಟಿಗೆ ಮರು ಸೇರ್ಪಡೆಗೊಳ್ಳಲು ಫಾರ್ಮ್ 6 ಸಲ್ಲಿಸುವುದು ಕಾನೂನಿನಡಿ ಲಭ್ಯವಿರುವ ಮಾನ್ಯ ಪರಿಹಾರವಾಗಿದೆ. ಕೇವಲ ಈ ಅರ್ಜಿ ಸಲ್ಲಿಸಿದ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುವುದಿಲ್ಲ ಎಂದು ತಿಳಿಸಿದೆ.

Supreme court
ವಿರೋಧದ ಬೆನ್ನಲ್ಲೇ ದೆಹಲಿ-ಮಹಾರಾಷ್ಟ್ರ ಸೇರಿ 7 ರಾಜ್ಯಗಳಲ್ಲಿ SIR ಸಂಬಂಧ ಚುನಾವಣಾ ಆಯೋಗ ಮಹತ್ವದ ಆದೇಶ!

ಈ ಸ್ಪಷ್ಟನೆ ಎಲ್ಲ ಮತದಾರರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ (ಸಿಇಒ) ಸ್ಥಳೀಯ ಭಾಷೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಸಣ್ಣ ಪಟ್ಟಣಗಳಲ್ಲಿ ವ್ಯಾಪಕ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಎಸ್‌ಐಆರ್ ಪ್ರಕ್ರಿಯೆಯಿಂದ ಕರಡು ಮತದಾರರ ಪಟ್ಟಿಯಿಂದ ಹಲವು ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಬಾಧಿತ ಮತದಾರರು ತಮ್ಮ ಹೆಸರುಗಳನ್ನು ಮರು ಸೇರ್ಪಡೆಗೊಳಿಸಿಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಸುವುದೊಂದೇ ಮಾರ್ಗವಾಗಿದೆ. ಹೀಗೆ ಅರ್ಜಿ ಸಲ್ಲಿಸುವವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಂಡರೆ, ನಿಖರ ಮತ್ತು ಎಲ್ಲರನ್ನೂ ಒಳಗೊಂಡ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶವೇ ವಿಫಲವಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ತಾಂತ್ರಿಕ ಲೋಪ ಅಥವಾ ಕಾನೂನು ಕ್ರಮದ ಭೀತಿಯಿಂದ ಅರ್ಹ ನಾಗರಿಕರು ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಚುನಾವಣಾ ಆಯೋಗ ಒತ್ತಿಹೇಳಿದೆ. ಈ ಸ್ಪಷ್ಟನೆಯನ್ನು ಅಧಿಕೃತ ಮಾರ್ಗಗಳು ಮತ್ತು ಸಾರ್ವಜನಿಕ ಪ್ರಕಟಣೆಗಳ ಮೂಲಕ ಎಲ್ಲೆಡೆ ಪ್ರಸಾರ ಮಾಡಲಾಗುವುದು. ಆ ಮೂಲಕ ಮತಗಟ್ಟೆ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತದಾರರಿಗೆ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದೆ.

ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರ (CEC) ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 17ರಂದು ನಡೆಸಲಿದೆ. ರಾಕೇಶ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿ ಸೇರಿದಂತೆ ಸಂಬಂಧಿತ ಅರ್ಜಿಗಳು ವಿಚಾರಣೆಗೆ ಬರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X