

ಜೂಮ್ (Zoom), ಎಚ್‌ಎಸ್‌ಬಿಸಿ (HSBC), ಇಕ್ವಿಫ್ಯಾಕ್ಸ್ (Equifax), ಸಿಎನ್‌ಎನ್ (CNN), ಸೇಲ್ಸ್‌ಫೋರ್ಸ್ (Salesforce) ಮತ್ತು ಐಕಿಯಾ (IKEA) ಸೇರಿದಂತೆ ವಿಶ್ವದ ಅತಿ ಹೆಚ್ಚು ಜನರು ಭೇಟಿ ನೀಡುವ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಂಡಿದ್ದಾರೆ.
ಕ್ರಿಪ್ಟೋಕರೆನ್ಸಿ ಕದಿಯಲು ಮತ್ತು ಐಫೋನ್‌ಗಳಿಗೆ ಮಾಲ್‌ವೇರ್ ಸೋಂಕು ತಗುಲಿಸಲು ಈ ಸೈಬರ್ ದಾಳಿ ನಡೆಸಲಾಗಿದೆ ಎಂದು ಭದ್ರತಾ ಸಂಶೋಧಕರೊಬ್ಬರು ಸೋಮವಾರ ತಿಳಿಸಿದ್ದಾರೆ.
ವೆಬ್‌ಸೈಟ್ ಆಪ್ಟಿಮೈಸೇಶನ್ ವೇದಿಕೆಯಾದ 'ಆಪ್ಟಿಮೈಸ್ಲಿ' (Optimizely) ಮೂಲಕ ವಿವಿಧ ವಲಯಗಳ 178 ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅಪಾಯಕಾರಿ ಜಾವಾಸ್ಕ್ರಿಪ್ಟ್ (JavaScript) ಕೋಡ್‌ಗಳನ್ನು ಸೇರಿಸಲಾಗಿದೆ ಎಂದು ಸಂಶೋಧಕ ಸ್ಕಾಟ್ ಹೆಲ್ಮೆ ಹೇಳಿದ್ದಾರೆ.
ಈ ಸ್ಕ್ರಿಪ್ಟ್‌ಗಳು ಬಳಕೆದಾರರ ಕ್ರಿಪ್ಟೋಕರೆನ್ಸಿ ಪಾವತಿ ವಿಳಾಸಗಳನ್ನು ಬದಲಿಸಿ ಹ್ಯಾಕರ್‌ಗಳ ವ್ಯಾಲೆಟ್‌ಗೆ ಹಣ ಹೋಗುವಂತೆ ಮಾಡಲು ಪ್ರಯತ್ನಿಸಿವೆ. ಅಲ್ಲದೆ, ಬಳಕೆದಾರರು ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸುವಾಗ ಕಾರ್ಡ್ ಸಂಖ್ಯೆಗಳನ್ನು ಕದಿಯಲು, ಬ್ರೌಸರ್ ಕುಕೀಸ್ ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಲು ಹಾಗೂ ಐಒಎಸ್ (iOS) ಸಾಧನಗಳಲ್ಲಿ ಅಪಾಯಕಾರಿ ಕೋಡ್‌ಗಳನ್ನು ಅಳವಡಿಸಲು ಯತ್ನಿಸಿವೆ.
ಈ ವೆಬ್‌ಸೈಟ್‌ಗಳು ತಮ್ಮ ಸಂದರ್ಶಕರಿಗೆ ಹಾನಿಕಾರಕ ಕೋಡ್‌ಗಳನ್ನು ರವಾನಿಸಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಸೈಬರ್ ಭದ್ರತಾ ಸಂಸ್ಥೆ 'ಹಡ್ಸನ್‌ರಾಕ್' (HudsonRock) ಕೂಡ ತಿಳಿಸಿದೆ. ಪ್ರತಿಯೊಂದು ಪ್ರಕರಣದಲ್ಲೂ ಈ ಕೋಡ್‌ಗಳನ್ನು ಯಶಸ್ವಿಯಾಗಿ ಬಳಸಲಾಗಿದೆಯೇ ಅಥವಾ ಇದರಿಂದ ಎಷ್ಟರ ಮಟ್ಟಿಗೆ ಹ್ಯಾಕಿಂಗ್ ನಡೆದಿದೆ ಎಂಬುದನ್ನು ತಕ್ಷಣಕ್ಕೆ ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಅನಧಿಕೃತ ಆಪ್ಟಿಮೈಸ್ಲಿ ಸ್ಕ್ರಿಪ್ಟ್ ಬದಲಾವಣೆಗಳ ಕುರಿತು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸೇಲ್ಸ್‌ಫೋರ್ಸ್ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಯಿಟರ್ಸ್ ಕೇಳಿದ ಪ್ರಶ್ನೆಗಳಿಗೆ ಆಪ್ಟಿಮೈಸ್ಲಿ, ಆಪಲ್, ಜೂಮ್, ಎಚ್‌ಎಸ್‌ಬಿಸಿ, ಇಕ್ವಿಫ್ಯಾಕ್ಸ್, ಸಿಎನ್‌ಎನ್ ಮತ್ತು ಐಕಿಯಾ ಸಂಸ್ಥೆಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.