Lateef Bhat ಎನ್‌ಕೌಂಟರ್‌; ಎ ಕೆಟಗರಿ ಉಗ್ರ, ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇ ರೋಚಕ; LeT ಸೇರಿದ ಒಂದೇ ವರ್ಷಕ್ಕೆ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

ಲಷ್ಕರ್‌ನ ಸ್ಥಳೀಯ ಕಮಾಂಡರ್ ಆಗಿದ್ದ ಈತ ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದ. ಲಷ್ಕರ್‌ನ ಮತ್ತೊಂದು ಸಂಘಟನೆ ಎಂದು ಗುರುತಿಸಲಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ (TRF) ಜತೆ ಸಂಪರ್ಕ ಹೊಂದಿದ್ದ.
Lateef Bhat Meets His End Exactly A Year After Joining Lashkar
ಉಗ್ರ ಲತೀಫ್ ಭಟ್ ಎನ್ಕೌಂಟರ್
Updated on: 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌-ಎ-ತೊಯ್ಬಾ (LeT) ಸಂಘಟನೆಯ ಮೋಸ್ಟ್‌ ವಾಂಟೆಡ್‌ ಉಗ್ರ ಲತೀಫ್ ಭಟ್ ಹತನಾಗಿದ್ದು, ಈತ ಉಗ್ರ ಸಂಘಟನೆಗೆ ಸೇರಿದ ಸರಿಯಾಗಿ ಒಂದು ವರ್ಷದ ಬಳಿಕ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.

23 ವರ್ಷದ ಲತೀಫ್ ಭಟ್ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿಯಾಗಿದ್ದ. ಈತನನ್ನು ಭದ್ರತಾ ಸಂಸ್ಥೆಗಳು 'ಎ ಕೆಟಗರಿ' ಉಗ್ರ ಎಂದು ಗುರುತಿಸಿದ್ದವು. ಕಣಿವೆಯಲ್ಲಿ ಸಕ್ರಿಯವಾಗಿದ್ದ ಏಕೈಕ ಸ್ಥಳೀಯ ಉಗ್ರ ಈತನೇ ಆಗಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ವೇಳೆ ಲತೀಫ್ ಭಟ್ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ. ಆತನಿಗೆ ಶರಣಾಗುವಂತೆ ಭದ್ರತಾ ಪಡೆಗಳು ಅವಕಾಶ ನೀಡಿದ್ದರೂ ಆತ ಒಪ್ಪಿರಲಿಲ್ಲ. ಬೆಳಗಿನ ಜಾವ 2.45ಕ್ಕೆ ಭದ್ರತಾ ಪಡೆಗಳ ಮೇಲೆ ಆತ ಗುಂಡಿನ ದಾಳಿ ನಡೆಸಿದ್ದಾನೆ.

ಇದಕ್ಕೆ ಪಡೆಗಳು ಪ್ರತಿದಾಳಿ ನಡೆಸಿ ಆತನನ್ನು ಹತ್ಯೆ ಮಾಡಿವೆ. ಕಾರ್ಯಾಚರಣೆ ವೇಳೆ ಮಸೀದಿಗೆ ಯಾವುದೇ ಹಾನಿಯಾಗದಂತೆ ಭದ್ರತಾ ಪಡೆಗಳು ಎಚ್ಚರಿಕೆ ವಹಿಸಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Lateef Bhat Meets His End Exactly A Year After Joining Lashkar
Kulgam Encounter: LeT ಸಂಘಟನೆಯ ಪ್ರಮುಖ ಉಗ್ರ ಲತೀಫ್ ಭಟ್ ಹೊಡೆದುರುಳಿಸಿದ ಭಾರತೀಯ ಸೇನೆ! ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕ!

ಉಗ್ರ ಸಂಘಟನೆ ಸೇರಿದ ಒಂದು ವರ್ಷದ ಬಳಿಕ ಅಂತ್ಯ

ಭದ್ರತಾ ಸಂಸ್ಥೆಗಳ ಪ್ರಕಾರ, ಲತೀಫ್ ಭಟ್ 2025ರ ನವೆಂಬರ್ 18ರಿಂದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಅಂದರೆ, ಲಷ್ಕರ್ ಸಂಘಟನೆ ಸೇರಿದ ಸರಿಯಾಗಿ ಒಂದು ವರ್ಷದ ಬಳಿಕ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.

ಲಷ್ಕರ್‌ನ ಸ್ಥಳೀಯ ಕಮಾಂಡರ್ ಆಗಿದ್ದ ಈತ ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದ. ಲಷ್ಕರ್‌ನ ಮತ್ತೊಂದು ಸಹೋದರ ಸಂಘಟನೆ ಎಂದು ಗುರುತಿಸಲಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್‌ (TRF) ಜತೆ ಸಂಪರ್ಕ ಹೊಂದಿದ್ದ.

ಅಲ್ಲದೆ, ಕಾಶ್ಮೀರ ರೆವಲ್ಯೂಷನರಿ ಆರ್ಮಿ (KRA) ಸಂಘಟನೆಯೊಂದಿಗೂ ನಂಟು ಹೊಂದಿದ್ದ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.

ಎ ಕೆಟಗರಿ ಉಗ್ರ

'ಎ ಕೆಟಗರಿ' ಉಗ್ರರು ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಕ್ರಿಯ ಉಗ್ರರಾಗಿದ್ದು, ಭದ್ರತಾ ಪಡೆಗಳ ಪ್ರಮುಖ ಗುರಿಗಳಾಗಿರುತ್ತಾರೆ.

ಮರಗೆಲಸ ಮಾಡುತ್ತಿದ್ದವ ಉಗ್ರನಾಗಿದ್ದೇಗೆ?

ಲಷ್ಕರ್ ಸಂಘಟನೆ ಸೇರುವ ಮೊದಲು ಲತೀಫ್ ಭಟ್ ಮರಗೆಲಸ ಮಾಡುತ್ತಿದ್ದ. ಭಾನ್‌ನ ಶಾಲೆಯಲ್ಲಿ ಎಂಟನೇ ತರಗತಿ ಹಾಗೂ ಅಶ್ಮುಜಿಯ ಮತ್ತೊಂದು ಶಾಲೆಯಲ್ಲಿ 12ನೇ ತರಗತಿ ಪೂರ್ಣಗೊಳಿಸಿದ್ದ. ಬಳಿಕ ಕುಲ್ಗಾಂ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಸೇರಿದ್ದರೂ ಅದನ್ನು ಅರ್ಧಕ್ಕೆ ನಿಲ್ಲಿಸಿದ್ದ.

ನಂತರ ಮರಗೆಲಸ ಆರಂಭಿಸಿದ್ದ ಈತ, 2025ರ ನವೆಂಬರ್ 18ರಂದು ಮನೆಯಿಂದ ನಾಪತ್ತೆಯಾಗಿ ಲಷ್ಕರ್ ಸಂಘಟನೆ ಸೇರಿದ್ದ ಎಂದು ವರದಿಯಾಗಿದೆ.

ಈ ವರ್ಷದ ಜುಲೈ 22ರಂದು ಅನಂತನಾಗ್‌ನಲ್ಲಿ ನಡೆದ ದಾಳಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದರು. ಈ ದಾಳಿಯಲ್ಲಿ ಲತೀಫ್ ಭಟ್ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿತ್ತು. ಆಗಸ್ಟ್ 1ರಂದು ಕುಲ್ಗಾಂನಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣದಲ್ಲೂ ಆತನ ಹೆಸರು ಕೇಳಿಬಂದಿತ್ತು.

ಸಿಆರ್‌ಪಿಎಫ್ ಚೆಕ್‌ಪೋಸ್ಟ್ ದಾಳಿ ಬಳಿಕ ತೀವ್ರ ಶೋಧ

ನವೆಂಬರ್ 11ರಂದು ಕುಲ್ಗಾಂನಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳದ ಪರಿಶೀಲನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಗೂ ಮುನ್ನ ಸ್ಥಳವನ್ನು ಪರಿಶೀಲಿಸುತ್ತಿರುವ ಹಾಗೂ ದಾಳಿಯ ಬಳಿಕ ಪರಾರಿಯಾಗುತ್ತಿರುವ ಉಗ್ರರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಲತೀಫ್ ಭಟ್‌ಗೆ ಕಳೆದ ಐದಾರು ತಿಂಗಳಿಂದ ಆಶ್ರಯ ಮತ್ತು ಇತರ ನೆರವು ನೀಡುತ್ತಿದ್ದ ಉಮರ್ ನಿಸಾರ್ ದಾರ್‌ನನ್ನು ನವೆಂಬರ್ 16ರಂದು ಕುಲ್ಗಾಂನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಆದರೆ, ಲತೀಫ್ ಭಟ್ ತಪ್ಪಿಸಿಕೊಂಡಿದ್ದ. ಬಳಿಕ ಆತನಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದವು.

ಈ ಹಿಂದೆ 2025ರ ಡಿಸೆಂಬರ್‌ನಲ್ಲಿ ಅನಂತನಾಗ್‌ನಲ್ಲಿ ಆತನನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಭದ್ರತಾ ಪಡೆಗಳ ಸುತ್ತುವರಿದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಆತ ಪರಾರಿಯಾಗಿದ್ದ.

Lateef Bhat Meets His End Exactly A Year After Joining Lashkar
'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ಉಗ್ರರ ಜಾಲದ ಬಗ್ಗೆ ತನಿಖೆ

ಲತೀಫ್ ಭಟ್‌ಗೆ ಶಸ್ತ್ರಾಸ್ತ್ರಗಳು ಮತ್ತು ಇತರ ನೆರವು ಒದಗಿಸಿದವರು ಯಾರು? ಪಾಕಿಸ್ತಾನದಲ್ಲಿರುವ ಆತನ ಸಂಪರ್ಕಕಾರರು ಯಾರು? ಇಷ್ಟು ದಿನ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯವಾಯಿತು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತನಿಗೆ ಸಹಾಯ ಮಾಡುತ್ತಿದ್ದವರು ಹಾಗೂ ಉಗ್ರರ ಜಾಲದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X