

ಭೋಪಾಲ್: ಮಹಾರಾಷ್ಟ್ರದ ಮುಖ್ಯಮಂತ್ರಿಗೆ ನೇರವಾಗಿ ಸಲ್ಲಿಸಲಾದ ದೂರಿನೊಂದಿಗೆ ಈ ಪ್ರಕರಣ ತೆರೆದುಕೊಳ್ಳುತ್ತದೆ.
ನವೆಂಬರ್ 8ರಂದು ಮಹಾರಾಷ ನಾಗ್ಪುರ ಜಿಲ್ಲೆಯ ಲೋಹಾರಿ ಸಾವಂಗಾದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಹಲವು ಮಹಿಳಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ತೋಡಿಕೊಂಡರು.
‘ದೈನಿಕ್ ಶ್ರೇಷ್ಠ ನ್ಯೂಸ್’ ಹೆಸರಿನಲ್ಲಿ ಅಪರಿಚಿತ ಮಹಿಳೆಯರು ನಿರಂತರವಾಗಿ ಕರೆ ಮಾಡಿ ಜಾಹೀರಾತು ಪ್ರಕಟಿಸಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದರೆ ತಮ್ಮ ಗ್ರಾಮ ಪಂಚಾಯಿತಿಗಳ ವಿರುದ್ಧ ತಪ್ಪು ಮಾಹಿತಿ ಅಥವಾ ಹಾನಿಕಾರಕ ವರದಿಗಳನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ದೂರು ನೀಡಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಾಗ್ಪುರ ಗ್ರಾಮಾಂತರದ ನರ್ಕೇಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು. ಕೆಲವೇ ದಿನಗಳಲ್ಲಿ ತನಿಖೆಯ ಜಾಡು 600 ಕಿ.ಮೀ. ದೂರದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿದ್ದ ಮೂರು ಕಾಲ್ ಸೆಂಟರ್‌ಗಳವರೆಗೆ ತಲುಪಿತು.
ಹಣದ ಬೇಡಿಕೆ, ಕ್ಯೂಆರ್ ಕೋಡ್, ಬೆದರಿಕೆ
ನಾಗ್ಪುರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಎ. ಪೊದ್ದಾರ್ ಅವರ ಪ್ರಕಾರ, ಕರೆ ಮಾಡುತ್ತಿದ್ದವರು ‘ದೈನಿಕ್ ಶ್ರೇಷ್ಠ ನ್ಯೂಸ್’ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿದ್ದರು. ಒಂದು ಪ್ರಕರಣದಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳ ಜಾಹೀರಾತು ಪ್ರಕಟಿಸಲು ಸರಪಂಚರೊಬ್ಬರಿಗೆ 3,000 ರೂ ನೀಡುವಂತೆ ಕೇಳಿ, ಆನ್‌ಲೈನ್‌ನಲ್ಲಿ ಹಣ ಪಾವತಿಸಲು ಕ್ಯೂಆರ್ ಕೋಡ್ ಕಳುಹಿಸಲಾಗಿತ್ತು. ಸರಪಂಚರು ಹಣ ನೀಡಲು ನಿರಾಕರಿಸಿದಾಗ, ಗ್ರಾಮ ಪಂಚಾಯಿತಿಯನ್ನು ಭ್ರಷ್ಟ ಎಂದು ಬಿಂಬಿಸುವ ವರದಿಗಳನ್ನು ಪ್ರಕಟಿಸುವುದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಜುನೋನ ಫುಕೆ ಗ್ರಾಮದ ಸರಪಂಚರಾದ ಪ್ರಭಾ ಓಂಪ್ರಕಾಶ್ ಗೌತಮಾರೆ ಅವರಿಂದ 500 ರೂಪಾಯಿ ಸುಲಿಗೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಮೂರು ಕಾಲ್ ಸೆಂಟರ್‌ಗಳು, ಸಂಬಳ ಪಡೆಯುತ್ತಿದ್ದ 35 ಮಂದಿ
ನಾಗ್ಪುರ ಗ್ರಾಮಾಂತರ ಪೊಲೀಸರ ಸಹಕಾರದೊಂದಿಗೆ ಭೋಪಾಲ್ ಅಪರಾಧ ವಿಭಾಗದ ತಂಡಗಳು ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದವು. ಟಿಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷವರ್ಧನ್ ನಗರದಲ್ಲಿನ ಕಾಲ್ ಸೆಂಟರ್‌ನಲ್ಲಿ 27 ಮಹಿಳೆಯರು, ನಿಶಾತ್‌ಪುರದಲ್ಲಿ ನಾಲ್ವರು ಮತ್ತು ಎಂಪಿ-1 ನಗರದಲ್ಲಿ ನಾಲ್ವರು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ 35 ಮಂದಿಗೂ ನಿಯಮಿತವಾಗಿ ಸಂಬಳ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಕಾರ್ಪೊರೇಟ್ ಸಂಸ್ಥೆಯೊಂದರ ವ್ಯವಸ್ಥಿತ ಕಾರ್ಯನಿರ್ವಹಣೆ ರೀತಿಯಲ್ಲಿ ಸಂಘಟಿಸಲಾಗಿತ್ತು ಎನ್ನಲಾಗಿದೆ. ಪಂಚಾಯಿತಿಗೆ ಸಂಬಂಧಿಸಿದ ಪೋರ್ಟಲ್ ಮೂಲಕ ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ಗ್ರಾಮ ಪಂಚಾಯಿತಿಗಳ ವಿವರಗಳನ್ನು ಈ ತಂಡ ಸಂಗ್ರಹಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿ ಕರೆ ಮಾಡುವವರಿಗೂ ಅವರ ಭಾಷಾ ಪ್ರಾವೀಣ್ಯತೆಗೆ ಅನುಗುಣವಾಗಿ ಒಂದೊಂದು ರಾಜ್ಯದ ಜವಾಬ್ದಾರಿ ನೀಡಲಾಗಿತ್ತು. ಇದರಿಂದ ಅವರು ಆಯಾ ರಾಜ್ಯಗಳ ಗ್ರಾಮ ಪಂಚಾಯಿತಿ ಮುಖ್ಯಸ್ಥರನ್ನು ಅವರದೇ ಭಾಷೆಯಲ್ಲಿ ಸಂಪರ್ಕಿಸಿ ಒತ್ತಡ ಹೇರುವಲ್ಲಿ ಯಶಸ್ವಿಯಾಗುತ್ತಿದ್ದರು.
ವಶಪಡಿಸಿಕೊಂಡ ವಸ್ತುಗಳು
ಪೊಲೀಸರು 54 ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, ಎರಡು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಮತ್ತು ಒಂದು ಪ್ರಿಂಟರ್ ವಶಪಡಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳ ಸಂಪರ್ಕ ವಿವರಗಳಿದ್ದ 618 ರಿಜಿಸ್ಟರ್‌ಗಳು, ‘ದೈನಿಕ್ ಶ್ರೇಷ್ಠ ನ್ಯೂಸ್’ ಹೆಸರಿನ ಲಕೋಟೆಗಳು ಮತ್ತು ಕರಪತ್ರಗಳು, ಯೆಸ್ ಬ್ಯಾಂಕ್ ಸ್ಕ್ಯಾನರ್ ರಸೀದಿಗಳು ಹಾಗೂ ಚೆಕ್ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಭೋಪಾಲ್‌ನಲ್ಲಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು, ಟ್ರಾನ್ಸಿಟ್ ರಿಮ್ಯಾಂಡ್ ಮೂಲಕ ನಾಗ್ಪುರಕ್ಕೆ ಕರೆತಂದಿದ್ದಾರೆ. ಬಂಧಿತರನ್ನು ನರಸಿಂಗ್‌ಗಢದ ಛತ್ರಿ ಚೌರಾಹಾ ನಿವಾಸಿಗಳಾದ ಮೋನಿಕಾ ಲಾಲ್ಸಿಂಗ್ ಸೂರ್ಯವಂಶಿ ಮತ್ತು ನೇಹಾ ಲಾಲ್ಸಿಂಗ್ ಸೂರ್ಯವಂಶಿ, ಭೀಮ್ ನಗರದ ಅಕ್ಷರಾ ಮಿಲಿಂದ್ ಅರಕ್ ಹಾಗೂ ಗೋವಿಂದಪುರದ ಅನ್ನಾ ನಗರದ ಕೋಮಲ್ ಮೋಹನ್ ಮೋರೆ ಎಂದು ಗುರುತಿಸಲಾಗಿದೆ.
ಈ ಜಾಲದೊಂದಿಗೆ ಸಂಪರ್ಕ ಹೊಂದಿರುವ ಇತರ ಮಹಿಳೆಯರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.