

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಶಾಸಕರಿಂದ ಸಾರ್ವಜನಿಕ ಟೀಕೆ, ಭ್ರಷ್ಟಾಚಾರದ ಆರೋಪಗಳು, ಅಭಿವೃದ್ಧಿ ನಿಧಿಗಳ ಮೇಲಿನ ಭಿನ್ನಾಭಿಪ್ರಾಯಗಳು ಮತ್ತು ಹೊಸ ಅಧಿಕಾರ ಹಂಚಿಕೆ ಬೇಡಿಕೆಗಳು ಪಕ್ಷದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸುತ್ತಿವೆ.
ಅಭಿವೃದ್ಧಿ ನಿಧಿಗಳ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ ಅವರ ವಿರುದ್ಧ ಮತ್ತೊಮ್ಮೆ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುನುಗೋಡಿನಲ್ಲಿ ನಡೆದ ಪಿಂಚಣಿ ವಿತರಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ ಗೋಪಾಲ್ ರೆಡ್ಡಿ, ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡುವಂತೆ ಶಾಸಕರು ಒತ್ತಾಯಿಸಿದಾಗ ಮುಖ್ಯಮಂತ್ರಿ ನೀಡಿದ ಪ್ರತಿಕ್ರಿಯೆಯನ್ನು ಪ್ರಶ್ನಿಸಿದರು.
'ನೀವು ಎಂತಹ ಮುಖ್ಯಮಂತ್ರಿ? ಇದೇನು ಭಾಷೆ? ಅದೃಷ್ಟವಶಾತ್ ನೀವು ಮುಖ್ಯಮಂತ್ರಿಯಾದಿರಿ. ಕನಿಷ್ಠ ಮುಂದಿನ ಎರಡು ವರ್ಷಗಳಲ್ಲಾದರೂ ಸರಿಯಾಗಿ ನಡೆದುಕೊಂಡು, ತೆಲಂಗಾಣದ ಜನರ ಯೋಗಕ್ಷೇಮ ನೋಡಿಕೊಳ್ಳಿ' ಎಂದು ಅವರು ಹೇಳಿದರು.
ತಮ್ಮನ್ನು ವಿರೋಧಿಸುವವರನ್ನು ತುಳಿದುಹಾಕುವುದಾಗಿ ಮುಖ್ಯಮಂತ್ರಿ ರೇವಂತ್ ನೀಡಿದ್ದಾರೆನ್ನಲಾದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಶಾಸಕರು, 'ಕಾಂಗ್ರೆಸ್ನ ಹಿರಿಯ ಶಾಸಕರೊಬ್ಬರು ಅಭಿವೃದ್ಧಿ ನಿಧಿಯನ್ನು ಕೇಳಿದಾಗ, ನೀವು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬದಲಿಗೆ, ಅವರನ್ನು ತುಳಿದುಹಾಕುವುದಾಗಿ ಬೆದರಿಕೆ ಹಾಕುವುದು ಸರಿಯೇ?' ಎಂದು ಪ್ರಶ್ನಿಸಿದರು.
ಅಲ್ಲದೆ, ಮುಖ್ಯಮಂತ್ರಿಗಳ ಕ್ಷೇತ್ರವಾದ 'ಕೊಡಂಗಲ್' ಮತ್ತು ಉಪಮುಖ್ಯಮಂತ್ರಿ ಭಟ್ಟಿ ಪ್ರತಿನಿಧಿಸುವ 'ಮಧಿರಾ' ಕ್ಷೇತ್ರಗಳ ಮೇಲೆ ಸರ್ಕಾರ ವಿಶೇಷ ಗಮನ ಹರಿಸುತ್ತಿರುವುದನ್ನು ಅವರು ಪ್ರಶ್ನಿಸಿದರು.
'ತೆಲಂಗಾಣ ಎಂದರೆ ಕೇವಲ ಕೊಡಂಗಲ್ ಮತ್ತು ಮಧಿರಾ ಮಾತ್ರವಲ್ಲ. ಕೊಡಂಗಲ್ಗೆ 10,000 ಕೋಟಿ ರೂಪಾಯಿ ನೀಡಿ, ಅಥವಾ 20,000 ಕೋಟಿ ರೂಪಾಯಿಯನ್ನೇ ಕೊಡಿ; ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಮುನುಗೋಡುನಂತಹ ಹಿಂದುಳಿದ ಕ್ಷೇತ್ರಗಳಿಗೂ ಅವುಗಳಿಗೆ ಸಿಗಬೇಕಾದ ನ್ಯಾಯಯುತ ಪಾಲು ಸಿಗಲೇಬೇಕು. ಮುನುಗೋಡು ಅಭಿವೃದ್ಧಿಗೆ ಅನುದಾನವನ್ನು ತಡೆಹಿಡಿದರೆ, ಅದು ಮತ್ತೊಂದು ಕುರುಕ್ಷೇತ್ರವಾಗಲಿದೆ. ಇದನ್ನು ನೆನಪಿನಲ್ಲಿಡಿ' ಎಂದು ಅವರು ಹೇಳಿದರು.
ಅನುದಾನ ಕೊರತೆಯಿಂದಾಗಿ ರಸ್ತೆಗಳು ಮತ್ತು ನೀರಾವರಿ ಕಾಮಗಾರಿಗಳು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ. ಚೌಟುಪ್ಪಲ್ನಲ್ಲಿ ಪ್ರಸ್ತಾಪಿಸಲಾದ 100 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣದಲ್ಲಿನ ವಿಳಂಬದ ಬಗ್ಗೆಯೂ ಪ್ರಶ್ನಿಸಿದ ಅವರು, ಫ್ಲೋರೈಡ್ ಪೀಡಿತ ಪ್ರದೇಶಗಳತ್ತ ಗಮನ ಹರಿಸುವಂತೆ ಆಗ್ರಹಿಸಿದರು.
'ಮೂರು ವರ್ಷಗಳ ನಿಮ್ಮ ಆಡಳಿತದ ನಂತರವೂ ತೆಲಂಗಾಣದ ಜನರು ಸಂತೋಷವಾಗಿಲ್ಲ' ಎಂದು ಹೇಳಿದರು.
ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಕಾರಣಕ್ಕೆ ತಾವು ಮುಖ್ಯಮಂತ್ರಿಯನ್ನು ಟೀಕಿಸುತ್ತಿದ್ದೀರಿ ಎಂಬ ಅಭಿಪ್ರಾಯಗಳನ್ನು ತಳ್ಳಿಹಾಕಿದ ಅವರು, 'ನಾನು ಹುದ್ದೆಗಳ ಬೆನ್ನ ಹಿಂದೆ ಬಿದ್ದಿಲ್ಲ. ದೇವರ ದಯೆಯಿಂದ ನನ್ನ ಕುಟುಂಬ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಬಡವರಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ ಮತ್ತು ಅನ್ಯಾಯವಾದಾಗಲೆಲ್ಲಾ ಮುಕ್ತವಾಗಿ ಧ್ವನಿ ಎತ್ತುತ್ತೇನೆ. ನಾನು ಸಾರ್ವಜನಿಕ ಹಣವನ್ನು ಲಪಟಾಯಿಸುವವನಲ್ಲ, ಬದಲಾಗಿ ಅದನ್ನು ರಕ್ಷಿಸುವವನು. ನಾನು ಕಮಿಷನ್ ನೀಡುವುದೂ ಇಲ್ಲ, ಪಡೆಯುವುದೂ ಇಲ್ಲ' ಎಂದು ಹೇಳಿದರು. ಈ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತದ ಅಡಿಯಲ್ಲಿ 'ಕಮಿಷನ್ ರಾಜ್' ನಡೆಯುತ್ತಿದೆ ಎಂಬ ಸುಳಿವನ್ನು ಅವರು ನೀಡಿದರು.