ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ 1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆಗೆ ನಲುಗಿದ ಆದಿವಾಸಿ ವೃದ್ಧ!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಗ್ರಾಮದ 75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್ ಅವರ ಗುಡಿಸಲಿಗೆ ವಿದ್ಯುತ್ ಕಂಪನಿಯು ₹1,39,232 ಮೊತ್ತದ ಬಾಕಿ ವಿದ್ಯುತ್ ಬಿಲ್ ಮತ್ತು ವಸೂಲಿ ನೋಟಿಸ್ ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:
No Power Connection for Seven Years, Yet 75-Year-Old Tribal Man Gets Rs 1.39 Lakh Electricity Bill Shock
75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್AI Image
Updated on: 

ಸಾಗರ್ (ಮಧ್ಯಪ್ರದೇಶ): ಕತ್ತಲ ಗುಡಿಸಲಿನಲ್ಲಿ ಬದುಕು, ಮೈಮೇಲೆ ಹಳೆಯ ಮಾಸಿದ ಕುರ್ತಾ, ಕಾಲಿಗೆ ಹರಿದ ಬೂಟು; ಆದರೆ ಕೈಯಲ್ಲಿ ಮಾತ್ರ ಬರೋಬ್ಬರಿ 1.45 ಲಕ್ಷ ರೂಪಾಯಿಯ ಕರೆಂಟ್ ಬಿಲ್! ಹೌದು, ಕಳೆದ ಏಳು ವರ್ಷಗಳಿಂದ ಒಂದು ಬಲ್ಬ್ ಕೂಡ ಇಲ್ಲದೆ ಕತ್ತಲೆಯಲ್ಲೇ ದಿನ ದೂಡುತ್ತಿರುವ 70 ವರ್ಷದ ಅಸಹಾಯಕ ಆದಿವಾಸಿ ವೃದ್ಧನಿಗೆ ವಿದ್ಯುತ್ ಇಲಾಖೆ ನೀಡಿದ ಈ ಆಘಾತಕಾರಿ ಶಾಕ್ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ. ಬಿಲ್ ಕಟ್ಟದಿದ್ದರೆ ಜೈಲಿಗೆ ಹಾಕುತ್ತೇವೆ ಎಂಬ ಬೆದರಿಕೆಗೆ ಬೆಚ್ಚಿಬಿದ್ದಿರುವ ಆ ವೃದ್ಧ, ಬಸ್ ಚಾರ್ಜ್‌ಗೂ ಬೇರೆಯವರ ಬಳಿ ಸಾಲ ಮಾಡಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ ಮನಕಲಕುವ ಕಥೆ ಇಲ್ಲಿದೆ:

ಏನಿದು ಘಟನೆ?

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಗ್ರಾಮದ 75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್ ಅವರು, ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಟಿವಿ, ಫ್ಯಾನ್ ಅಥವಾ ಯಾವುದೇ ವಿದ್ಯುತ್ ಉಪಕರಣಗಳಿಲ್ಲ. ಅಷ್ಟೇ ಯಾಕೆ, ದುಲಿಚಂದ್ ಅವರಿಗೆ ಸ್ವಂತ ಮನೆ ಅಥವಾ ಜಮೀನು ಇಲ್ಲ. ಹಾಗಾಗಿ, ಗ್ರಾಮದ ವ್ಯಕ್ತಿಯೊಬ್ಬರ ಜಾಗದಲ್ಲಿ ಕಳೆದ 7 ವರ್ಷಗಳಿಂದ ಸಣ್ಣ ಗುಡಿಸಲು (ಟಪರಿಯಾ) ನಿರ್ಮಿಸಿಕೊಂಡು ಕತ್ತಲೆಯಲ್ಲೇ ಜೀವನ ನಡೆಸುತ್ತಿದ್ದಾರೆ. ಜೊತೆಗೆ, ಅವರು ಎಂದಿಗೂ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಮತ್ತು ಅವರ ಗುಡಿಸಲಿಗೆ ವಿದ್ಯುತ್ ಪೂರೈಕೆಯೇ ಇಲ್ಲ. ಆದರೂ 2020ರಲ್ಲಿ ಬಮ್ಹೋರಿ ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಅವರ ಅನುಮತಿಯಿಲ್ಲದೆ ಕೆಲಸ ಮಾಡದ (ನಿಷ್ಕ್ರಿಯ) ಮೀಟರ್ ಅನ್ನು ಅಳವಡಿಸಿ, ಅದರ ಹೆಸರಿನಲ್ಲಿ ₹1.39 ಲಕ್ಷಕ್ಕೂ ಅಧಿಕ ಬಿಲ್ ಕಳುಹಿಸಿದ್ದಾರೆ ಎಂದು ದುಲಿಚಂದ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

No Power Connection for Seven Years, Yet 75-Year-Old Tribal Man Gets Rs 1.39 Lakh Electricity Bill Shock
ಐಷಾರಾಮಿ ಜೀವನ, ₹15 ಕೋಟಿ ಉದ್ಯಮ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಒಂದೇ ಕುಟುಂಬದ ನಾಲ್ವರು ನಿರ್ಧಾರ!

ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಬಿಲ್!

ತಮಗೆ ಅಧಿಕೃತ ವಿದ್ಯುತ್ ಸಂಪರ್ಕವೇ ಇಲ್ಲದಿದ್ದರೂ, 2020ರ ಆಗಸ್ಟ್‌ನಿಂದ ವಿದ್ಯುತ್ ಕಂಪನಿಯು ತಮ್ಮ ಹೆಸರಿನಲ್ಲಿ ತಪ್ಪು ಬಿಲ್‌ಗಳನ್ನು ಕಳುಹಿಸುತ್ತಿದೆ ಎಂದು ದುಲಿಚಂದ್ ದೂರಿದ್ದಾರೆ. 2022ರ ಡಿಸೆಂಬರ್‌ನಲ್ಲಿ 4,226 ರೂ. ನೋಟಿಸ್ ನೀಡಿದ್ದ ಕಂಪನಿ, ಈಗ ಏಕಾಏಕಿ 1.39 ಲಕ್ಷ ರೂ. ವಸೂಲಾತಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ವಿದ್ಯುತ್ ಇಲಾಖೆಯ ಸಿಬ್ಬಂದಿ ಮನೆಗೆ ಬಂದು ಬಿಲ್ ಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಹಣ ಕಟ್ಟದಿದ್ದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವೃದ್ಧ ಕಾರ್ಮಿಕ ಆರೋಪಿಸಿದ್ದಾರೆ.

ಏತನ್ಮಧ್ಯೆ, ಈ ನೋಟಿಸ್‌ನಿಂದ ಆತಂಕಗೊಂಡಿರುವ ದುಲಿಚಂದ್ ಅವರು ಮಂಗಳವಾರ (ನವೆಂಬರ್ 17) ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರಿಗೆ ಲಿಖಿತ ದೂರು ಸಲ್ಲಿಸಿ, ನಕಲಿ ಬಿಲ್ ರದ್ದುಪಡಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಇನ್ನು, ವೃದ್ಧನ ಗುಡಿಸಲಿನಲ್ಲಿ ವಿದ್ಯುತ್ ಬಳಕೆಯೇ ಇಲ್ಲದಿರುವುದನ್ನು ಮನಗಂಡ ಜಿಲ್ಲಾಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವಂತೆ ಮತ್ತು ತಪ್ಪು ಬಿಲ್ ರದ್ದುಗೊಳಿಸಿ ವೃದ್ಧನಿಗೆ ತಕ್ಷಣವೇ ನ್ಯಾಯ ಒದಗಿಸುವಂತೆ ವಿದ್ಯುತ್ ಕಂಪನಿಯ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X