ಖುಲಾಸೆಯಾದರೂ 7 ವರ್ಷ ಜೈಲುವಾಸ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಸುಪ್ರೀಂ, ಸಂತ್ರಸ್ತನಿಗೆ 30 ಲಕ್ಷ ಪರಿಹಾರ ನೀಡಲು ಆದೇಶ

ಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ನಿಂದ ಖುಲಾಸೆಯಾದ ನಂತರವೂ 7 ವರ್ಷ 3 ತಿಂಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಿದ ಛತ್ತೀಸ್‌ಗಢದ ದೇವಿಲಾಲ್ ಗೊಂಡ್ ಅವರಿಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
Supreme Court
ಸುಪ್ರೀಂ ಕೋರ್ಟ್Online Desk
Updated on: 

ನವದೆಹಲಿ: ಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ನಿಂದ ನಿರ್ದೋಷಿಯೆಂದು ಖುಲಾಸೆಯಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 7 ವರ್ಷ 3 ತಿಂಗಳಿಗೂ ಹೆಚ್ಚು ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಿದ ಛತ್ತೀಸ್‌ಗಢದ ದೇವಿಲಾಲ್ ಗೊಂಡ್ ಅವರಿಗೆ ₹30 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಡಿಸೆಂಬರ್ 7, 2012 ರಂದು ಕೊಲೆ ಪ್ರಕರಣವೊಂದರಲ್ಲಿ ದೇವಿಲಾಲ್ ಗೊಂಡ್ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್ 14, 2013 ರಂದು ರಾಜನಂದಗಾಂವ್ ಸೆಷನ್ಸ್ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಜನವರಿ 20, 2018 ರಂದು ಛತ್ತೀಸ್‌ಗಢ ಹೈಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿ ನಿರ್ದೋಷಿ ಎಂದು, ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ (ಖುಲಾಸೆ) ಆದೇಶ ನೀಡಿತ್ತು.

7 ವರ್ಷಗಳ ಅಕ್ರಮ ಬಂಧನ

ಹೈಕೋರ್ಟ್‌ನ ಖುಲಾಸೆ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪದ ಕಾರಣ ಮತ್ತು ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ದೇವಿಲಾಲ್ ಅವರು ಬಿಡುಗಡೆಯಾಗದೆ ಜೈಲಿನಲ್ಲೇ ಉಳಿಯುವಂತಾಯಿತು. ಮೇ 2025 ರಲ್ಲಿ ಜೈಲು ದಾಖಲೆಗಳ ಪರಿಶೀಲನೆ ನಡೆಸುವಾಗ ಈ ಎಡವಟ್ಟು ಬೆಳಕಿಗೆ ಬಂದು, ಮೇ 19, 2025 ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಅದರಂತೆ, ಈ ಅಕ್ರಮ ಬಂಧನವನ್ನು ಪ್ರಶ್ನಿಸಿ ದೇವಿಲಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಛತ್ತೀಸ್‌ಗಢ ಹೈಕೋರ್ಟ್, ಮೇ 2026 ರಲ್ಲಿ ಕೇವಲ 2 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, ಪರಿಹಾರವು ಕೇವಲ ಸಾಂಕೇತಿಕವಾಗಿರದೆ ಸಂತ್ರಸ್ತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ನೆರವಾಗುವಂತಿರಬೇಕು ಎಂದು ಅಭಿಪ್ರಾಯಪಟ್ಟು, ಪರಿಹಾರದ ಮೊತ್ತವನ್ನು 30 ಲಕ್ಷ ರೂ.ಗೆ ಹೆಚ್ಚಿಸಿ 4 ವಾರಗಳಲ್ಲಿ ಪಾವತಿಸಲು ಆದೇಶಿಸಿದೆ.

Supreme Court
ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ 1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆಗೆ ನಲುಗಿದ ಆದಿವಾಸಿ ವೃದ್ಧ!

ವ್ಯವಸ್ಥೆಯ ವೈಫಲ್ಯಕ್ಕೆ ತರಾಟೆ

ಇದು ಸಂವಿಧಾನದ 21ನೇ ವಿಧಿಯ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗಿದ್ದು, ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದಾಗಿ ವ್ಯಕ್ತಿಯೊಬ್ಬರು ತಮ್ಮ ಅಮೂಲ್ಯ ಯೌವನವನ್ನು ಜೈಲಿನಲ್ಲಿ ಕಳೆಯುವಂತಾಯಿತು ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರೊಂದಿಗೆ, 30 ಲಕ್ಷ ರೂ. ಪರಿಹಾರದಲ್ಲಿ 5 ಲಕ್ಷ ರೂ.ಗಳನ್ನು ದೇವಿಲಾಲ್ ಅವರ ಉಳಿತಾಯ ಖಾತೆಗೆ ಜಮಾ ಮಾಡಬೇಕು ಮತ್ತು ಉಳಿದ 25 ಲಕ್ಷ ರೂ.ಗಳನ್ನು ಅವರ ಹೆಸರಿನಲ್ಲಿ FD ಇಟ್ಟು, ಅದರ ಮಾಸಿಕ ಬಡ್ಡಿ ಅವರಿಗೆ ಸಿಗುವಂತೆ ವ್ಯವಸ್ಥೆ ಮಾಡಲು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಇಂತಹ ಅಕ್ರಮ ಬಂಧನ ಪ್ರಕರಣಗಳಿಗೆ ಪರಿಹಾರ ನೀಡಲು ಸೂಕ್ತ ಶಾಸನಬದ್ಧ ಕಾನೂನು ರೂಪಿಸುವ ಅಗತ್ಯವನ್ನೂ ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X