ಆಪರೇಷನ್ ಸಿಂಧೂರ ಬಳಿಕ ಪಾಕ್ ಸಚಿವ ಭಾರತಕ್ಕೆ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾ ಭೇಟಿಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ಭಾರತ ಭೇಟಿಯ ಸಂದರ್ಭದಲ್ಲಿ ಮಲಿಕ್ ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ.
Musadik Malik
ಮುಸಾದಿಕ್ ಮಲಿಕ್
Updated on: 

ನವದೆಹಲಿ: ಈ ವಾರ ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್, ಇದೀಗ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ನವೆಂಬರ್ 20 ರಿಂದ 22 ರವರೆಗೆ ರಾಜಧಾನಿಯಲ್ಲಿರುವ ಐತಿಹಾಸಿಕ 'ಪುರಾಣ ಕಿಲ್ಲಾ'ದಲ್ಲಿ, ಶಾಂಘೈ ಸಹಕಾರ ಸಂಘಟನೆಯ (SCO) ಮೊದಲ 'ನಾಗರಿಕ ಸಂವಾದ ವೇದಿಕೆ' (Civilisational Dialogue Forum) ನಡೆಯುತ್ತಿದೆ.

ಭಾರತ ಭೇಟಿಯ ಸಂದರ್ಭದಲ್ಲಿ ಮಲಿಕ್ ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಭದ್ರತಾ ಅನುಮತಿ ಸಿಕ್ಕರೆ ತಾಜ್ ಮಹಲ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದರೂ, ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಪಾಕಿಸ್ತಾನದ ಸಚಿವರಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ.

ಆಗ್ರಾದ ತಾಜ್ ಮಹಲ್ ಮತ್ತು ರಾಜಧಾನಿಯಲ್ಲಿರುವ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಪಾಕಿಸ್ತಾನದ ಸಚಿವರು ಅನುಮತಿ ಕೋರಿದ್ದರು. ಆದರೆ, SCO ಸಭೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಭಾರತ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಅವರು ಕೇವಲ SCO ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಬೇಕು ಮತ್ತು ಬೇರೆ ಯಾವುದೇ ಸ್ಥಳಕ್ಕೆ ಭೇಟಿ ನೀಡಬಾರದು ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

2023 ರಲ್ಲಿ ಗೋವಾದಲ್ಲಿ ನಡೆದ SCO ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ ನಂತರ, ಪಾಕಿಸ್ತಾನದ ಒಕ್ಕೂಟ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅಲ್ಲದೆ, ಮೇ 2025 ರಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ 'ಆಪರೇಷನ್ ಸಿಂಧೂರ್ ಬಳಿಕ, ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಶಿಷ್ಟಾಚಾರದಂತೆ ಪಾಕಿಸ್ತಾನ ಸೇರಿದಂತೆ SCO ಸದಸ್ಯ ರಾಷ್ಟ್ರಗಳೆಲ್ಲಕ್ಕೂ ಆಹ್ವಾನ ನೀಡಲಾಗಿದೆ ಎಂದು ಭಾರತ ಅಕ್ಟೋಬರ್ 28 ರಂದು ಘೋಷಿಸಿತ್ತು. ನಂತರ, ಮುಸಾದಿಕ್ ಮಲಿಕ್ ಅವರು ಭಾಗವಹಿಸುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿತು. "ಪರಸ್ಪರ ಗೌರವದ ಭಾವನೆಯೊಂದಿಗೆ, SCO ಚೌಕಟ್ಟಿನೊಳಗೆ ನಾಗರಿಕತೆ ಸಂವಾದ ಉತ್ತೇಜಿಸಲು ಮತ್ತು ಜನರ ನಡುವಿನ ಸಂಪರ್ಕವನ್ನು ಬೆಳೆಸಲು ಪಾಕಿಸ್ತಾನ ಸರ್ಕಾರ ಬದ್ಧವಾಗಿದೆ ಎಂದು ಪಾಕಿಸ್ತಾನ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Musadik Malik
'ಭಾರತದೊಂದಿಗೆ ನಮ್ಮ ಎಲ್ಲಾ ಸಂಬಂಧಗಳು ಸುಧಾರಿಸುತ್ತವೆ': ಪಾಕ್ ಸಚಿವನ ಭರವಸೆ; ಆದರೆ ಭಯೋತ್ಪಾದನೆ ಬಗ್ಗೆ ಮೌನ!

ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನದ ಬಗ್ಗೆ ನೀತಿ ಬದಲಾವಣೆಗೆ ಕಾರಣವೇನು ಎಂದು ಪಾಕಿಸ್ತಾನ ಸಚಿವರನ್ನು ಆಹ್ವಾನಿಸಿರುವ ಕೇಂದ್ರವನ್ನು ಪ್ರತಿಪಕ್ಷಗಳು ಟೀಕಿಸಿವೆ. ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ಬಗ್ಗೆ ಮುಸಾದಿಕ್ ಮಲಿಕ್ ಅವರ ಪ್ರಚೋದನಕಾರಿ ಹೇಳಿಕೆಗಳನ್ನು ಸಹ ಪ್ರತಿಪಕ್ಷಗಳು ಬೆಟ್ಟು ಮಾಡಿವೆ. 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ಗಣರಾಜ್ಯ, ಕಝಾಕಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು SCO ಅನ್ನು ಸ್ಥಾಪಿಸಿದರು. 2017 ರಲ್ಲಿ ಭಾರತ ಮತ್ತು ಪಾಕಿಸ್ತಾನ ಅದರ ಶಾಶ್ವತ ಸದಸ್ಯರಾದರು. 2023 ರಲ್ಲಿ ಇರಾನ್ ಸದಸ್ಯತ್ವ ಪಡೆಯಿತು.

ಅಕ್ಟೋಬರ್ 2024 ರಲ್ಲಿ ಇಸ್ಲಾಮಾಬಾದ್ SCO ಸರ್ಕಾರದ ಮುಖ್ಯಸ್ಥರ ಮಂಡಳಿಯ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ಪ್ರಧಾನಿ ಪರವಾಗಿ ಭಾಗವಹಿಸಿದ್ದರು. ಭಾರತವು ಕಳೆದ ತಿಂಗಳು ತನ್ನ SCO ರಾಷ್ಟ್ರೀಯ ಸಂಯೋಜಕ ಅಲೋಕ್ ದಿಮ್ರಿಯನ್ನು ಮುಂದಿನ SCO ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಗೆ ಪೂರ್ವಸಿದ್ಧತಾ ಸಭೆಗಾಗಿ ಇಸ್ಲಾಮಾಬಾದ್‌ಗೆ ಕಳುಹಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X