

ಬೆಂಗಳೂರು: 12ನೇ ಶತಮಾನದ ವಚನಕಾರ ಬಸವಣ್ಣನವರ ಬಗ್ಗೆ ಬಸವ ಮಂಟಪ ಕೃತಿಯಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಕೃತಿಯಲ್ಲಿ ಬರೆದಿದ್ದಾರೆ ಎಂಬ ಆರೋಪದ ಮೇಲೆ ಎಫ್ ಐಆರ್ ದಾಖಲಾಗಿ ಬೆಳಗಾವಿ ಪೊಲೀಸರು ಜಾರಿಗೊಳಿಸಿದ್ದ ಲುಕ್‌ಔಟ್ ನೊಟೀಸ್ (Lookout Notice) ಹಿನ್ನೆಲೆಯಲ್ಲಿ ಇಂದು ಶನಿವಾರ ಲೇಖಕ ರವಿ ಹಂಜ್ ಅವರನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಲೇಖಕ ರವಿ ಹಂಜ್ ಅವರ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಾರ್ಕೆಟ್ ಠಾಣೆಯ ಪೊಲೀಸರು ಈ ಹಿಂದೆ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಅವರನ್ನು ತಡೆದು ವಶಕ್ಕೆ ಪಡೆದಿರುವ ಏರ್‌ಪೋರ್ಟ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ, ತಕ್ಷಣವೇ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ರವಾನಿಸಿದ್ದಾರೆ.