

ನವದೆಹಲಿ: ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ರಾಜಕೀಯ ಪ್ರೇರಿತ ನಿರ್ಬಂಧ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಭಾರತೀಯ ಯುವ ಕಾಂಗ್ರೆಸ್ (IYC), ಟೆಕ್ ದೈತ್ಯ ‘ಮೆಟಾ’ (Meta) ಸಂಸ್ಥೆಗೆ 7 ದಿನಗಳ ಅಂತಿಮ ಗಡುವು (ಅಲ್ಟಿಮೇಟಮ್) ನೀಡಿದ್ಜು. ಖಾತೆಗಳ ಮರುಸ್ಥಾಪಿಸುವಂತೆ ಶನಿವಾರ ಆಗ್ರಹಿಸಿದೆ.
ಹೈದರಾಬಾದ್, ಮುಂಬೈ ಮತ್ತು ಗುರುಗ್ರಾಮ್ನಲ್ಲಿರುವ ಮೆಟಾ ಕಚೇರಿಗಳ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ಎಚ್ಚರಿಕೆ ನೀಡಲಾಗಿದೆ.
ಮೆಟಾ ರಾಜಕೀಯ ಸೆನ್ಸಾರ್ಶಿಪ್ ನಡೆಸುತ್ತಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.
ಇದೇ ವೇಳೆ ಕಳೆದ ಆರು ತಿಂಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ನಿರ್ಬಂಧಿಸಲಾದ ಭಾರತೀಯರ ಸಾಮಾಜಿಕ ಜಾಲತಾಣ ಖಾತೆಗಳ ವಿವರ ಹಾಗೂ ಈ ಪೈಕಿ ಇನ್ನೂ ಎಷ್ಟು ಖಾತೆಗಳು ನಿರ್ಬಂಧದಲ್ಲಿವೆ ಎಂಬ ಮಾಹಿತಿಯನ್ನು ಒದಗಿಸುವಂತೆಯೂ ಒತ್ತಾಯಿಸಿದೆ.
ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸುವ ಅಥವಾ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸುವ ಪೋಸ್ಟ್ಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಮೆಟಾವನ್ನು ಕೇಳಿದೆ.
ಪ್ರತಿಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪ್ರಭಾವ ಬೀರುವವರ ಖಾತೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಬಿಜೆಪಿ ರಾಜಕೀಯ ಸೂಚನೆಗಳನ್ನು ಪಾಲಿಸುವ ಬದಲು ಸಂವಿಧಾನಕ್ಕೆ ಗೌರವ ನೀಡಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಯುವ ಕಾಂಗ್ರೆಸ್, "ಮೆಟಾ ಜಾಗತಿಕ ಮಟ್ಟದ ದೊಡ್ಡ ಸಂಸ್ಥೆಯಾಗಿದ್ದರೆ ಧೈರ್ಯ ತೋರಿಸಬೇಕು. ಭಾರತದಲ್ಲಿ ವ್ಯಾಪಾರ ಮುಂದುವರಿಸಬೇಕಾದರೆ ಭಾರತೀಯ ಸಂವಿಧಾನವನ್ನು ಗೌರವಿಸಬೇಕು. ಬಿಜೆಪಿಯ ಅನಿಯಂತ್ರಿತ ಆದೇಶಗಳಿಗೆ ಶರಣಾಗಬಾರದು. ಯಾವ ಭಾರತೀಯನಿಗೆ ಮಾತನಾಡುವ ಹಕ್ಕಿದೆ ಎಂಬುದನ್ನು ನಿರ್ಧರಿಸುವ ಅಧಿಕಾರ ಯಾವುದೇ ಖಾಸಗಿ ಕಂಪನಿಗೆ ಇಲ್ಲ ಎಂದು ಹೇಳಿದೆ.
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರು ಮಾತನಾಡಿ, ಬಿಜೆಪಿಯು ಮೆಟಾ ಜೊತೆ ಕೈಜೋಡಿಸಿ ಆನ್ಲೈನ್ನಲ್ಲಿ ತನ್ನನ್ನು ಟೀಕಿಸುವ ಧ್ವನಿಗಳನ್ನು ಹತ್ತಿಕ್ಕುವ ಮೂಲಕ ಗೂಂಡಾಗಿರಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಮುದ್ದಿನ ಮಗ ಮೆಟಾ' ಎಂದು ಉಲ್ಲೇಖಿಸಿ ಮತ್ತೊಂದು ಪೋಸ್ಟ್ ಮಾಡಿರುವ ಯುವ ಕಾಂಗ್ರೆಸ್, ಭಾರತ ಪ್ರಜಾಪ್ರಭುತ್ವ ರಾಷ್ಟ್ರವೇ ಹೊರತು ನರೇಂದ್ರ ಮೋದಿಯವರ ಖಾಸಗಿ ಆಸ್ತಿಯಲ್ಲ ಎಂದು ಹೇಳಿದೆ.
ನಿರ್ಬಂಧಿತ ಖಾತೆಗಳು ಮತ್ತು ಪೋಸ್ಟ್ಗಳನ್ನು ಏಳು ದಿನಗಳೊಳಗೆ ಮರುಸ್ಥಾಪಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದೆ.
ಮೆಟಾ ಬಿಜೆಪಿಯ ಅಂಗಸಂಸ್ಥೆಯಂತೆ ವರ್ತಿಸದೆ ತಟಸ್ಥ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ನ್ಯಾಯಾಲಯಗಳಲ್ಲಿ, ಬೀದಿಗಳಲ್ಲಿ ಮತ್ತು ಮೆಟಾ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಹಿಂದೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಸೇರಿದಂತೆ ಹಲವರ ಇನ್ಸ್ಟಾಗ್ರಾಂ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಅವರ ಕೆಲವು ಪೋಸ್ಟ್ಗಳನ್ನೂ ತೆಗೆದುಹಾಕಲಾಗಿತ್ತು.
ಇದರ ಬೆನ್ನಲ್ಲೇ ಶುಕ್ರವಾರ ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಜಕ್ಕಿಡಿ ಶಿವ ಚರಣ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಹೈದರಾಬಾದ್ನ ಮೆಟಾ ಕಚೇರಿ ಆವರಣಕ್ಕೆ ಪ್ರವೇಶಿಸಿ ಪ್ರತಿಭಟನೆ ನಡೆಸಿದರು. ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಗಚಿಬೌಲಿ, ಮಾಧಾಪುರ ಮತ್ತು ರೈದುರ್ಗಂ ಪ್ರದೇಶಗಳ ನಡುವಿನ ಕಚೇರಿ ಸಂಕೀರ್ಣದಲ್ಲಿ ನಡೆದ ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಪ್ರತಿಭಟನಾಕಾರರು ಕಚೇರಿಯ ಕಾರಿಡಾರ್ಗಳು ಮತ್ತು ಕೆಫೆಟೇರಿಯಾ ಸಮೀಪ ಸಂಚರಿಸುತ್ತಿರುವುದು ಹಾಗೂ ಕಟ್ಟಡದ ಹೊರಗೆ ಹೂವಿನ ಕುಂಡ ಒಡೆದಿರುವುದೂ ವಿಡಿಯೊಗಳಲ್ಲಿ ಕಂಡುಬಂದಿದೆ.
ಪೊಲೀಸರು ಸುಮಾರು 20ರಿಂದ 21 ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದು, ಸುಮಾರು ಮೂರು ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದಾರೆ.
ಇದರಂತೆ ಮುಂಬೈ ಮತ್ತು ಗುರುಗ್ರಾಮದಲ್ಲಿಯೂ ಯುವ ಕಾಂಗ್ರೆಸ್ ಘಟಕಗಳು ಇದೇ ರೀತಿಯ ಪ್ರತಿಭಟನೆ ನಡೆಸಿವೆ. ಮುಂಬೈನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರ ಭಿತ್ತಿಚಿತ್ರವನ್ನೂ ಪ್ರತಿಭಟನಾಕಾರರು ಸುಟ್ಟಿರುವುದಾಗಿ ವರದಿಗಳು ತಿಳಿಸಿವೆ.
"ಹೈದರಾಬಾದ್, ಗುರುಗ್ರಾಮ, ಈಗ ಮುಂಬೈ. ದೇಶದಾದ್ಯಂತ ಮೆಟಾ ಕಚೇರಿಗಳ ಬಾಗಿಲು ತಟ್ಟುತ್ತಿದ್ದೇವೆ" ಎಂದು ಯುವ ಕಾಂಗ್ರೆಸ್ ಎಕ್ಸ್ನಲ್ಲಿ ಮತ್ತೊಂದು ಪೋಸ್ಟ್ ಮಾಡಿದೆ.
ಪ್ರತ್ಯೇಕವಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯುವ ಕಾಂಗ್ರೆಸ್, ಹೈದರಾಬಾದ್ನ ಮೆಟಾ ಕಚೇರಿಗೆ ತನ್ನ ಕಾರ್ಯಕರ್ತರು ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.
ಕಾರ್ಯಕರ್ತರನ್ನು 'ಬಬ್ಬರ್ ಶೇರ್' ಎಂದು ಬಣ್ಣಿಸಿರುವ ಯುವ ಕಾಂಗ್ರೆಸ್, ಬಿಜೆಪಿ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಮೆಟಾವನ್ನು ಒತ್ತಾಯಿಸಿದೆ.
ಭಾರತೀಯ ಯುವ ಕಾಂಗ್ರೆಸ್ನ ಧೈರ್ಯಶಾಲಿ ಕಾರ್ಯಕರ್ತರು ಹೈದರಾಬಾದ್ನ ಮೆಟಾ ಕಚೇರಿಗೆ ನುಗ್ಗಿದ್ದಾರೆ. ಬಿಜೆಪಿಯ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ" ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಇದೇ ವೇಳೆ ಏಳು ದಿನಗಳ ಗಡುವು ನೀಡಿರುವ ಸಂಘಟನೆ, ಪ್ರತಿಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣ ಪ್ರಭಾವಿಗಳ ಖಾತೆಗಳ ಮೇಲಿನ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ದೇಶದಾದ್ಯಂತ ಮೆಟಾ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಭಾರತದಲ್ಲಿ ಕಂಪನಿಯ ವ್ಯವಹಾರ ನಡೆಸುವುದೇ ಕಷ್ಟವಾಗುವಂತಹ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಈ ವಿವಾದಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷಗಳ ನಾಯಕರೂ ಪ್ರತಿಕ್ರಿಯಿಸಿದ್ದಾರೆ. "ವ್ಯಾಪಾರ ಮಾಡಿ, ರಾಜಕೀಯವಲ್ಲ" ಎಂದು ಅವರು ಮೆಟಾಗೆ ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ, ಶುಕ್ರವಾರ ತಡರಾತ್ರಿ ಯುವ ಕಾಂಗ್ರೆಸ್ ತನ್ನ ನಾಯಕರ ಅಮಾನತುಗೊಂಡ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.