

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ರೈಲ್ವೆ ಯಾರ್ಡ್‌ನಲ್ಲಿ, ಬಳಕೆಯಲ್ಲಿಲ್ಲದ ರೈಲ್ವೆ ಬೋಗಿಯೊಂದರೊಳಗೆ 54 ವರ್ಷದ ಮಹಿಳೆ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದ್ದು, ಆಕೆಯ ಬಳಿ ಇದ್ದ ಚಿನ್ನದ ಉಂಗುರವೊಂದರ ಮೇಲಿದ್ದ 'ಹಾಲ್‌ಮಾರ್ಕ್'(hallmark) ಪೊಲೀಸರು ಪ್ರಕರಣ ಭೇದಿಸಲು ಸಹಾಯ ಮಾಡಿದೆ.
ನವೆಂಬರ್ 13 ರ ಮಧ್ಯರಾತ್ರಿ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಲಾಗಿದ್ದ ಬೋಗಿಯೊಂದರೊಳಗೆ ಈ ಕೃತ್ಯ ಎಸಗಲಾಗಿದೆ. ಈ ಬೋಗಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಆಕೆಯ ಗುರುತನ್ನು ಪತ್ತೆಹಚ್ಚಲು ತಕ್ಷಣಕ್ಕೆ ಯಾವುದೇ ಸುಳಿವುಗಳು ಸಿಗದಿದ್ದಾಗ, ರೈಲ್ವೆ ಪೊಲೀಸರು ಆಕೆಯ ಬಳಿಯಿದ್ದ ಏಕೈಕ ಗುರುತಿಸಬಹುದಾದ ವಸ್ತುವಿನತ್ತ ಗಮನ ಹರಿಸಿದ್ದಾರೆ. ಅದು ಹಾವಿನ ವಿನ್ಯಾಸವಿದ್ದ ಚಿನ್ನದ ಉಂಗುರ.
ರೈಲ್ವೆ ಎಸ್‌ಪಿ(ತ್ರಿಚಿ) ಆದರ್ಶ್ ಪಚೇರಾ ಅವರ ಪ್ರಕಾರ, ಉಂಗುರದ ಮೇಲಿದ್ದ ಹಾಲ್‌ಮಾರ್ಕ್ ವಿವರಗಳು, ಅದು ಗುಜರಾತ್‌ನಿಂದ ಬಂದಿರುವುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ನೆರವಾದವು. ಗುಜರಾತ್‌ನ ಮಾರಾಟಗಾರರು, ತಾವು ಈ ಉಂಗುರವನ್ನು ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಚಿಲ್ಲರೆ ವ್ಯಾಪಾರಿಯೊಬ್ಬರಿಗೆ ಪೂರೈಸಿರುವುದನ್ನು ದೃಢಪಡಿಸಿದ್ದಾರೆ. ಈ ಸುಳಿವಿನ ಆಧಾರದ ಮೇಲೆ, ಪೊಲೀಸರು ಆ ಮಹಿಳೆಯ ಪ್ಯಾನ್ (PAN) ಕಾರ್ಡ್ ವಿವರಗಳನ್ನು ಹಾಗೂ ಆಭರಣ ಖರೀದಿಸುವಾಗ ಆಕೆ ನೀಡಿದ್ದ ಮಧ್ಯಪ್ರದೇಶದ ವಿಳಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದಾಗಿ ಪೊಲೀಸರು ಆಕೆಯ ಕುಟುಂಬವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಈ ಮಹಿಳೆ ಕಳೆದ ಮೂರು ತಿಂಗಳುಗಳಿಂದ ತನ್ನ ಊರಿನಿಂದ ನಾಪತ್ತೆಯಾಗಿದ್ದಳು ಎಂದು ತಿಳಿದುಬಂದಿದೆ. ಆಕೆಯ ಪತಿ ಮತ್ತು ಮಕ್ಕಳು ಈಗ ಕನ್ಯಾಕುಮಾರಿಯತ್ತ ಪ್ರಯಾಣಿಸುತ್ತಿದ್ದಾರೆ.
6 ಗಂಟೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಸಂತ್ರಸ್ತೆಯನ್ನು ಗುರುತಿಸಿದ ಬೆನ್ನಲ್ಲೇ, ತನಿಖೆ ಆರಂಭಿಸಿದ ಪೊಲೀಸರು ಕೇವಲ ಆರು ಗಂಟೆಗಳ ಒಳಗೆಯೇ ಆರೋಪಿಯನ್ನು ಬಂಧಿಸುವ ಮೂಲಕ, ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ತ್ವರಿತವಾಗಿ ಭೇದಿಸಿದ್ದಾರೆ.
ತನಿಖಾಧಿಕಾರಿಗಳು ಆರಂಭದಲ್ಲಿ ಮೂವರು ಶಂಕಿತರ ಮೇಲೆ ಗಮನ ಕೇಂದ್ರೀಕರಿಸಿದ್ದರು. ರೈಲು ನಿಲ್ದಾಣದ ಸಿಸಿಟಿವಿ (CCTV) ದೃಶ್ಯಾವಳಿಗಳು ತನಿಖೆಯ ವ್ಯಾಪ್ತಿಯನ್ನು ಕಿರಿದಾಗಿಸಲು ನಿರ್ಣಾಯಕ ಸಾಕ್ಷ್ಯವಾಗಿ ಪರಿಣಮಿಸಿತು. ಈ ದೃಶ್ಯಾವಳಿಯಲ್ಲಿ ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ರೈಲಿನ ಬೋಗಿಯೊಂದರಿಂದ ಹೊರಗೆ ಬರುತ್ತಿರುವುದು ಕಂಡುಬಂದಿದೆ. ವಿಚಾರಣೆ ನಡೆಸಿದಾಗ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯನ್ನು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಲೆದಾಡುತ್ತಿದ್ದ ಭಿಕ್ಷುಕನೆಂದು ಗುರುತಿಸಲಾಗಿದೆ. ಈ ಹಿಂದೆ ಕೂಡ ಆ ಮಹಿಳೆಯನ್ನು ಕೆಲವೊಮ್ಮೆ ಆರೋಪಿ ಭೇಟಿಯಾಗಿದ್ದನೆಂದು ನಂಬಲಾಗಿದೆ. ಆತ ಮಹಿಳೆಯನ್ನು ಬಳಕೆಯಲ್ಲಿ ಇಲ್ಲದ ಬೋಗಿಯೊಂದಕ್ಕೆ ಕರೆದೊಯ್ದು, ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.