

ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ 18 ವರ್ಷದ ಯುವಕನೊಬ್ಬನನ್ನು, ಆತನ ತಾಯಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ವ್ಯಕ್ತಿಯೇ ಸುತ್ತಿಗೆಯಿಂದ ಹೊಡೆದು ಮತ್ತು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಆರೋಪಿಯು, ಯುವಕನನ್ನು ಕೊಲೆ ಮಾಡಿದ ಬಳಿಕ ಆಕೆಯ ತಾಯಿಯನ್ನು ಸಹ ಅಪಾರ್ಟ್ಮೆಂಟ್ನ ಅದೇ ಕೋಣೆಯಲ್ಲಿ ಕೂಡಿಹಾಕಿ, ರೂಮ್ ಲಾಕ್ ಮಾಡಿದ್ದಾನೆ. ಹೀಗಾಗಿ ತಾಯಿ, ಮಗನ ಶವದ ಮುಂದೆ ಮೂರು ದಿನ ನರಳಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಆರೋಪಿಯು ಆ ಮಹಿಳೆಯನ್ನೂ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಅಮಾನವೀಯ ಘಟನೆಯು ನವೆಂಬರ್ 16 ರ ರಾತ್ರಿ ಪದ್ಮನಾಭನಗರದ ರಾಘವೇಂದ್ರ ಲೇಔಟ್ನಲ್ಲಿರುವ 'ಎಸ್ಆರ್ಆರ್ಕೆ ತುಳಸಿ ಅಪಾರ್ಟ್ಮೆಂಟ್ಸ್' (SRRK Tulasi Apartments) ನಲ್ಲಿ ನಡೆದಿದೆ. ಇಲ್ಲಿ ಆರೋಪಿ ಸುದೀಪ್, ತನ್ನ ಲಿವ್-ಇನ್ ಸಂಗಾತಿ ಸೀಮಾ ದಾಸ್ ಮತ್ತು ಆಕೆಯ ಮಗ ಸೋಹಮ್ ಜೊತೆ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು.
ಆರೋಪಿ, ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಮಗ ಸೋಹಮ್ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಗಾಯಗೊಂಡಿದ್ದ ಪತ್ನಿ ಸೀಮಾಳನ್ನು ರೂಂನಲ್ಲಿ ಕೂಡಿ ಹಾಕಿ, ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ.
ಮನೆ ಮಾಲೀಕರ ಪ್ರಕಾರ, ಈ ಜೋಡಿಯು 2024ರ ಅಕ್ಟೋಬರ್ನಿಂದ ಈ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿತ್ತು. ಕಳೆದ ಆರು ತಿಂಗಳುಗಳಿಂದ ಅವರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ತಮಗೆ ಪದೇ ಪದೇ ದೂರು ನೀಡಿದ್ದರು ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 16 ರ ರಾತ್ರಿ, ಮನೆಯಲ್ಲಿ ಕೌಟುಂಬಿಕ ಕಲಹ ನಡೆಯುತ್ತಿದೆ ಎಂಬ ದೂರಿನೊಂದಿಗೆ ಅವರಿಗೆ ಮತ್ತೊಂದು ಕರೆ ಬಂದಿದೆ. ಆದರೆ, ಒಂದು ಗಂಟೆಯ ನಂತರ ಅಪಾರ್ಟ್ಮೆಂಟ್ ಸಂಕೀರ್ಣದ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದಾಗ, ಮನೆಯಲ್ಲಿ ಈಗ ಎಲ್ಲವೂ ಶಾಂತವಾಗಿದ್ದು, ಯಾವುದೇ ಗಲಾಟೆ ನಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದರು.
ಆದರೆ ಮೂರು ದಿನಗಳಾದರೂ ಸೀಮಾ ಆಗಲಿ, ಮಗನಾಗಲಿ ಮನೆಯಿಂದ ಹೊರಗೆ ಬಾರದಿದ್ದನ್ನು ಕಂಡು ಅನುಮಾನಗೊಂಡ ಪಕ್ಕದ ಮನೆಯವರು, ಮಾಲೀಕ ಮಲ್ಲಯ್ಯ ಅವರಿಗೆ ವಿಷಯ ತಿಳಿಸಿದ್ದಾರೆ. ಮಾಲೀಕರು ಬಂದು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಸ್ಥಳಕ್ಕೆ ಬಂದ ಪೊಲೀಸರು ಕೀ ಮೇಕರ್ ಕರೆಸಿ ಬೀಗ ತೆಗೆಸಿದಾಗ, ರೂಂ ಒಳಗಿನಿಂದ ಸೀಮಾ ದಾಸ್ ಕೂಗುತ್ತಿದ್ದ ಶಬ್ದ ಕೇಳಿಸಿದೆ. ತಕ್ಷಣ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಹಾಲ್ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಬಾತ್ರೂಂನಲ್ಲಿ ಮಗ ಸೋಹಮ್ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳಿಂದ ಅನ್ನ-ನೀರಿಲ್ಲದೆ, ಕಣ್ಣಮುಂದೆಯೇ ಮಗನ ಶವ ನೋಡುತ್ತಾ ತಾಯಿ ನರಳಾಡಿದ್ದಾರೆ.
ಸದ್ಯ ಅಪಾರ್ಟ್ಮೆಂಟ್ ಮಾಲೀಕ ಮಲ್ಲಯ್ಯ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ಹಂತಕ ಸುದೀಪ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.