''ಗೋಮಾಂಸ'ದ ಬಗ್ಗೆ ಮಾತ್ರ ಮೋದಿ ಹಾಗೆ ಹೇಳಿರಬಹುದು': ಕಾರ್ಪೊರೇಟ್ ಇಂಡಿಯಾ ಹೇಳಿಕೆ ಬೆಂಬಲಿಸುತ್ತಲೇ ಪ್ರಧಾನಿ ಕಾಲೆಳೆದ ಶಶಿ ತರೂರ್

ತೆರಿಗೆ ವಿನಾಯಿತಿ ಪಡೆದ ನಂತರವೂ ಉದ್ಯಮಗಳು ತಮ್ಮ ಬದ್ಧತೆಗಳನ್ನು ಈಡೇರಿಸಲು ವಿಫಲವಾಗಿವೆ ಎಂಬ ಪ್ರಧಾನಿ ಹೇಳಿಕೆಯು, ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
Shashi tharoor- Narendra Modi
ಶಶಿ ತರೂರ್- ನರೇಂದ್ರ ಮೋದಿ
Updated on: 

ತೆರಿಗೆ ಕಡಿತದ ಹೊರತಾಗಿಯೂ ಉದ್ಯೋಗ ಸೃಷ್ಟಿಸುವಲ್ಲಿ ಮತ್ತು ವೇತನ ಹೆಚ್ಚಿಸುವಲ್ಲಿ ವಿಫಲವಾದ ಕಾರ್ಪೊರೇಟ್ ವಲಯವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ದಾರೆ. ದೇಶದಲ್ಲಿ, ವಿಶೇಷವಾಗಿ ಪದವೀಧರರಿಗೆ ಉದ್ಯೋಗ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ನಿಯಂತ್ರಣ ಚೌಕಟ್ಟನ್ನು ಟೀಕಿಸಿದ ತರೂರ್, ಭ್ರಷ್ಟಾಚಾರವು ಇನ್ನಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿಯವರ 'ನಾ ಖಾವುಂಗಾ, ನಾ ಖಾನೆ ದೂಂಗಾ' (ನಾನು ತಿನ್ನಲ್ಲ, ಬೇರೆಯವರನ್ನೂ ತಿನ್ನಲು ಬಿಡಲ್ಲ) ಎಂಬ ಘೋಷಣೆಯನ್ನು ಪರೋಕ್ಷವಾಗಿ ಟೀಕಿಸಿದರು.

ಕೇರಳದ ತಿರುವನಂತಪುರದಲ್ಲಿ ಮಾತನಾಡಿದ ಶಶಿ ತರೂರ್, ತೆರಿಗೆ ವಿನಾಯಿತಿ ಪಡೆದ ನಂತರವೂ ಉದ್ಯಮಗಳು ತಮ್ಮ ಬದ್ಧತೆಗಳನ್ನು ಈಡೇರಿಸಲು ವಿಫಲವಾಗಿವೆ ಎಂಬ ಪ್ರಧಾನಿ ಹೇಳಿಕೆಯು, ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

'ಪ್ರಧಾನಿ ಹೇಳಿರುವುದು ವಾಸ್ತವ ಎಂದು ನಾನು ಭಾವಿಸುತ್ತೇನೆ. ಕಾರ್ಪೊರೇಟ್ ಸಂಸ್ಥೆಗಳು ಇದಕ್ಕೆ ತಮ್ಮದೇ ಆದ ಸಮರ್ಥನೆಗಳನ್ನು ಹೊಂದಿರಬಹುದು; ಆದರೆ ನನ್ನ ತಿಳುವಳಿಕೆಯ ಪ್ರಕಾರ, ಕಂಪನಿಗಳು ಹೆಚ್ಚಿನ ಹೂಡಿಕೆ ಮಾಡಲಿ, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿ ಮತ್ತು ವೇತನವನ್ನು ಹೆಚ್ಚಿಸಲಿ ಎಂಬ ಉದ್ದೇಶದಿಂದ ಸರ್ಕಾರವು ತೆರಿಗೆ ಕಡಿಮೆ ಮಾಡಿದೆ. ಆದರೆ, ಈ ಒಪ್ಪಂದದ ಭಾಗವಾಗಿ ತಮಗೆ ವಹಿಸಲಾದ ಜವಾಬ್ದಾರಿಯನ್ನು ಕಂಪನಿಗಳು ನಿರ್ವಹಿಸಿಲ್ಲ' ಎಂದು ದೂರಿದರು.

'ಉದ್ಯೋಗ ಪಡೆಯುವುದು ಬಹಳ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ನಮಗೆ ಹೇಳುತ್ತಿದ್ದಾರೆ; ಉದಾಹರಣೆಗೆ, ಐಐಟಿ (IIT) ಪದವೀಧರರೊಬ್ಬರಿಗೆ ಉದ್ಯೋಗ ಸಿಗದಂತಹ ಪರಿಸ್ಥಿತಿ ಇದೇ ಮೊದಲ ಬಾರಿಗೆ ಬಂದಿದೆ. ಹಿಂದೆಂದೂ ಇಂತಹ ಸಂಗತಿಗಳನ್ನು ಕೇಳಿರಲಿಲ್ಲ, ಆದ್ದರಿಂದ ಉದ್ಯೋಗಾವಕಾಶಗಳ ವಾತಾವರಣ, ಅದರಲ್ಲೂ ವಿಶೇಷವಾಗಿ ಕಾಲೇಜು ಪದವೀಧರರ ವಿಷಯದಲ್ಲಿ, ಪರಿಸ್ಥಿತಿ ಸಾಕಷ್ಟು ಗಂಭೀರವಾಗಿದೆ ಎಂದು ಇದು ಸೂಚಿಸುತ್ತದೆ' ಎಂದು ಅವರು ಹೇಳಿದರು.

ಆರ್ಥಿಕತೆಯ ಕಡೆಗೆ ಗಮನ ಹರಿಸುವ ಅಗತ್ಯವಿದೆ. ಆರ್ಥಿಕ ಬೆಳವಣಿಗೆಯ ಜವಾಬ್ದಾರಿಯ ವಿಷಯದಲ್ಲಿ ಸರ್ಕಾರ ಮತ್ತು ಕಾರ್ಪೊರೇಟ್ ವಲಯದ ನಡುವೆ ನಡೆಯುತ್ತಿರುವ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಲಹೆ ನೀಡಿದರು.

Shashi tharoor- Narendra Modi
ಅಂದು ಜನರು ನನ್ನ ಮಾತು ಕೇಳಿದ್ದಕ್ಕೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ

'ಪ್ರಧಾನಮಂತ್ರಿಯವರು ಕಂಪನಿಗಳತ್ತ ಬೆರಳು ತೋರಿಸುತ್ತಿದ್ದರೆ ಮತ್ತು ಕಂಪನಿಗಳು ಸರ್ಕಾರದ ನೀತಿಗಳತ್ತ ಬೆರಳು ತೋರಿಸಲು ಬಯಸುತ್ತಿದ್ದರೆ, ಅದರತ್ತ ನಾವು ವಿಷೇಷವಾಗಿ ಗಮನಹರಿಸಬೇಕು. ಸರ್ಕಾರವು ಇನ್ನೂ ಉತ್ತಮವಾಗಿ ನಿರ್ವಹಿಸಬಹುದಾದ ಕೆಲವು ವಿಷಯಗಳಿವೆ ಎಂದು ನಾವು ನಂಬುತ್ತೇವೆ' ಎಂದು ತರೂರ್ ಹೇಳಿದರು.

ಬ್ಯುಸಿನೆಸ್ ನಡೆಸುವ ಸುಲಭತೆಯಲ್ಲಿ (ease of doing business) ಸುಧಾರಣೆಗಳಾಗಿವೆ ಎಂಬ ಹೇಳಿಕೆಗಳಿದ್ದರೂ, ಉದ್ಯಮಗಳು ಇನ್ನೂ ತೊಂದರೆಗಳನ್ನು ಎದುರಿಸುತ್ತಲೇ ಇವೆ. 'ಅವರು ನಿಯಮಗಳನ್ನು ಸರಳಗೊಳಿಸಬಹುದಿತ್ತು; ಆದರೆ ವಾಸ್ತವದಲ್ಲಿ ಬ್ಯುಸಿನೆಸ್ ನಡೆಸುವುದು ಸುಲಭವಾಗಿಲ್ಲ' ಎಂದು ಅವರು ಹೇಳಿದರು.

'ನಾನು ಮಾತನಾಡುವ ಪ್ರತಿಯೊಬ್ಬ ಉದ್ಯಮಿಯ ಅಭಿಪ್ರಾಯದ ಪ್ರಕಾರ, ಭ್ರಷ್ಟಾಚಾರವು ಹಿಂದೆಂದಿಗಿಂತಲೂ ಈಗ ತೀರಾ ಹದಗೆಟ್ಟಿದೆ ಎಂದು ಹೇಳಲು ನನಗೆ ವಿಷಾದವಾಗುತ್ತದೆ' ಎಂದರು.

ಭ್ರಷ್ಟಾಚಾರವನ್ನು ತಡೆಗಟ್ಟುವ ಕುರಿತು ಮೋದಿ ನೀಡಿದ್ದ ಹಿಂದಿನ ಭರವಸೆಯನ್ನು ವ್ಯಂಗ್ಯವಾಡಿದ ಶಶಿ ತರೂರ್, 'ನಿಜ ಹೇಳಬೇಕೆಂದರೆ, ಪ್ರಧಾನ ಮಂತ್ರಿಯವರು 'ನಾ ಖಾಊಂಗಾ, ನಾ ಖಾನೆ ದೂಂಗಾ' ಎಂದು ಬಹಳ ಪ್ರಸಿದ್ಧವಾಗಿ ಹೇಳಿದ್ದರು. ಆದರೆ ಈಗ ನಮಗೆ ಅರಿವಾಗುತ್ತಿರುವುದೇನೆಂದರೆ, ಅವರು 'ಗೋಮಾಂಸ'ದ ಬಗ್ಗೆ ಮಾತ್ರ ಹಾಗೆ ಹೇಳಿದ್ದರು' ಎಂದು ತರೂರ್ ಹೇಳಿದರು.

ಪ್ರಧಾನಿ ಮೋದಿ ಹೇಳಿದ್ದೇನು?

ನವೆಂಬರ್ 19 ರಂದು ನವದೆಹಲಿಯಲ್ಲಿ 'ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ' (FICCI) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮೋದಿ ಅವರು ಕಾರ್ಪೊರೇಟ್ ನಾಯಕರನ್ನು ಟೀಕಿಸಿದರು. ಸರ್ಕಾರದ ತೆರಿಗೆ ವಿನಾಯಿತಿ ಕ್ರಮಗಳ ಹೊರತಾಗಿಯೂ, ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆಯೇ ಅಥವಾ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ವಿಸ್ತರಿಸಿವೆಯೇ ಎಂದು ಅವರು ಪ್ರಶ್ನಿಸಿದರು.

ಸರ್ಕಾರವು ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಮತ್ತು ವೈಯಕ್ತಿಕ ತೆರಿಗೆದಾರರಿಗೆ ಪರಿಹಾರ ನೀಡಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಆದರೆ, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ವೇತನಗಳನ್ನು ಸುಧಾರಿಸುವ ಮೂಲಕ ಭಾರತೀಯ ಕಾರ್ಪೊರೇಟ್ ವಲಯವು ಇದಕ್ಕೆ ಪ್ರತಿಯಾಗಿ ಏನಾದರೂ ಕೊಡುಗೆ ನೀಡಿದೆಯೇ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಕೊಡುಗೆ ನೀಡದೆ, ಕೇವಲ ಸರ್ಕಾರದ ನೀತಿಗಳಿಂದ ಲಾಭ ಪಡೆಯುತ್ತಿವೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X