ಉ. ಪ್ರದೇಶದಲ್ಲಿ ‘ಬಿಜೆಪಿಯ ತುರ್ತು ಪರಿಸ್ಥಿತಿ': ಸಮಾಜವಾದಿ ಅಧಿಕಾರಕ್ಕೆ ಬಂದರೆ ‘ಲೋಕತಂತ್ರ ಸೇನಾನಿ’ಗಳಿಗೆ 51 ಸಾವಿರ ಮಾಸಿಕ ಪಿಂಚಣಿ: ಅಖಿಲೇಶ್ ಯಾದವ್

1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಅಖಿಲೇಶ್ ಯಾದವ್ ‘ಲೋಕತಂತ್ರ ಸೇನಾನಿಗಳು’ ಎಂದು ಕರೆಯುತ್ತಾರೆ. ಇಂತಹ ಹಲವರು ಎಸ್‌ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
Akhilesh Yadav
ಅಖಿಲೇಶ್ ಯಾದವ್
Updated on: 

ಲಖನೌ: 2027ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ‘ಲೋಕತಂತ್ರ ಸೇನಾನಿ’ಗಳ ಮಾಸಿಕ ಪಿಂಚಣಿಯನ್ನು 51 ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಅವರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಅಖಿಲೇಶ್ ಯಾದವ್ ‘ಲೋಕತಂತ್ರ ಸೇನಾನಿಗಳು’ ಎಂದು ಕರೆಯುತ್ತಾರೆ. ಇಂತಹ ಹಲವರು ಎಸ್‌ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇಂದಿನ ಹಣದುಬ್ಬರ ಮತ್ತು ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿದರೆ ಅವರು ಈಗ ಪಡೆಯುತ್ತಿರುವ ಗೌರವಧನ ತುಂಬಾ ಕಡಿಮೆಯಾಗಿದೆ ಎಂದು ಹೇಳಿದರು.

Akhilesh Yadav
SP-ಕಾಂಗ್ರೆಸ್ ಮೈತ್ರಿಯಲ್ಲಿ ಮತ್ತಷ್ಟು ಬಿರುಕು?: ಉತ್ತರ ಪ್ರದೇಶ ಸೀಟು ಹಂಚಿಕೆ ಕಗ್ಗಂಟು; INDIA ಬ್ಲಾಕ್ ಸಭೆಗೆ ಅಖಿಲೇಶ್ ಯಾದವ್ ಗೈರು!

ಸರ್ಕಾರಿ ಆಸ್ಪತ್ರೆಗಳಲ್ಲಿ ಲೋಕತಂತ್ರ ಸೇನಾನಿಗಳ ಆರೋಗ್ಯ, ಚಿಕಿತ್ಸೆ ಮತ್ತು ಔಷಧೋಪಚಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವಷ್ಟೇ ಗೌರವವನ್ನು ತಮಗೂ ನೀಡಬೇಕು ಹಾಗೂ ರೈಲು ಮತ್ತು ಬಸ್ ಪ್ರಯಾಣ ದರಗಳಲ್ಲಿ ರಿಯಾಯಿತಿ ನೀಡಬೇಕು ಎಂಬ ಅವರ ಬೇಡಿಕೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದರು.

ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅಖಲೇಶ್ ಯಾದವ್, ದೇಶವು ಬಿಜೆಪಿಯ ತುರ್ತು ಪರಿಸ್ಥಿತಿಯ ಯುಗದ ಮೂಲಕ ಸಾಗುತ್ತಿದೆ. ಇದರಲ್ಲಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುತ್ತಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ತುಳಿತಕ್ಕೊಳಗಾಗುವ ಯಾವುದೇ ಅವಧಿಯೂ ತುರ್ತು ಪರಿಸ್ಥಿತಿಯೇ ಆಗಿರುತ್ತದೆ ಎಂದು ಹೇಳಿದರು.

ಕೇಂದ್ರಕ್ಕೆ ತೆರಳಿ ಪ್ರಧಾನಿಯಾಗುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಅಖಿಲೇಶ್ ಯಾದವ್, ಸದ್ಯಕ್ಕೆ ನಾನು ಉತ್ತರ ಪ್ರದೇಶದಲ್ಲೇ ಇರಲು ಬಿಡಿ; ನಮ್ಮೊಳಗೆ ಜಗಳ ತಂದಿಡಬೇಡಿ ಎಂದು ಹೇಳಿದರು. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ INDIA ಮೈತ್ರಿಕೂಟದ ಭಾಗವಾಗಿರುವ ಹಿನ್ನೆಲೆಯಲ್ಲಿ ಅವರು ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿ ಈ ಮಾತು ಹೇಳಿದರು.

Akhilesh Yadav
NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!

ಪೊಲೀಸ್ ಆಡಳಿತದ ವಿರುದ್ಧವೂ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಪೊಲೀಸರನ್ನು ನಂಬಲು ಸಾಧ್ಯವಿಲ್ಲ. ಅವರು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ನಿಜವಾದ ಸಾಧು-ಸಂತರಿಗೆ ತೀವ್ರ ಅವಮಾನವಾಗಿದೆ ಮತ್ತು ಅವರಿಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿದರು.

ಉದ್ಯೋಗ ಹುಡುಕುವ ಬದಲು ಯುವಕರು ಇ-ರಿಕ್ಷಾ ಓಡಿಸಬೇಕು ಎಂಬ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಹೇಳಿಕೆಯನ್ನು ಟೀಕಿಸಿದ ಅಖಿಲೇಶ್, ಉಪ ಮುಖ್ಯಮಂತ್ರಿಯವರು ಇ-ರಿಕ್ಷಾ ಬುಕ್ ಮಾಡಿಕೊಳ್ಳಬೇಕು. ಆಸ್ಪತ್ರೆಗಳನ್ನೇ ಅನಾರೋಗ್ಯಕ್ಕೀಡು ಮಾಡಿರುವ ಉಪಮುಖ್ಯಮಂತ್ರಿ ಇವರೇ ಎಂದು ವ್ಯಂಗ್ಯವಾಡಿದರು.

ಮುಂಬರುವ ರಾಜ್ಯಸಭಾ ಚುನಾವಣೆಯ ಕುರಿತು ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿ ಒಂಬತ್ತು ಅಥವಾ ಹತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಸೋಲಲಿದೆ ಎಂದು ಹೇಳಿದರು.

ಬಿಜೆಪಿಯನ್ನು ಸೋಲಿಸಲು ಕೈಜೋಡಿಸಲು ಬಯಸುವ ಯಾರೇ ಆಗಿದ್ದರೂ ಸ್ವಾಗತ. ಇಂದಿಗೂ ನಾವು ಅದೇ ಪರಿಸ್ಥಿತಿಯಲ್ಲಿದ್ದೇವೆ. ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಗರಿಷ್ಠ ಮಟ್ಟದಲ್ಲಿವೆ ಎಂದು ಹೇಳಿದರು.

ಈ ಸರ್ಕಾರವನ್ನು ರಾಜ್ಯದಿಂದ ಅಧಿಕಾರದಿಂದ ಕೆಳಗಿಳಿಸಿದ ತಕ್ಷಣ ಬುಲ್ಡೋಜರ್ ಮಾದರಿಯ ಈ ಪರಿಸ್ಥಿತಿಯೂ ಅಂತ್ಯಗೊಳ್ಳಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com