ನವದೆಹಲಿ: 'ಮತದಾರರ ನೋಂದಣಿಗಾಗಿ ಆನ್‌ಲೈನ್ ಫಾರ್ಮ್ 6 ಗೆ ಬದಲಾವಣೆಗಳನ್ನು ಮಾಡಲು ಯಾರು ಆದೇಶಿಸಿದರು ಮತ್ತು ಆ ಬದಲಾವಣೆಗಳನ್ನು ಮಾಡುವಂತೆ ಟಿಸಿಎಸ್ (TCS) ಮೇಲೆ ಯಾರಾದರೂ ಒತ್ತಡ ಹೇರಿದ್ದರೇ?' ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
'ಚುನಾವಣಾ ಆಯೋಗದ ಆಯುಕ್ತರು ದಾಖಲಿಸಿರುವಂತೆ ಆನ್‌ಲೈನ್ ಫಾರ್ಮ್ 6 ಅನ್ನು ಕಾನೂನುಬಾಹಿರವಾಗಿ ಬದಲಾಯಿಸಲಾಗಿದೆ\. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ ಆ ಬದಲಾವಣೆ ಮಾಡಲು ಚುನಾವಣಾ ಆಯೋಗದಲ್ಲಿ ಯಾರು ಆದೇಶಿಸಿದರು? TCS ನಲ್ಲಿ ಯಾರು ಅದಕ್ಕೆ ಸಹಿ ಹಾಕಿದರು? ಮತ್ತು ಅದನ್ನು ಮಾಡಲು ಅವರ ಮೇಲೆ ಒತ್ತಡ ಹೇರಲಾಗಿದೆಯೇ?' ಎಂದು ರಾಹುಲ್ X ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, 'ನಮೂನೆ 6' (Form 6) ರೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗವು ಹಿಂಪಡೆದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ಬುಧವಾರ ವರದಿ ಮಾಡಿದೆ.
ECINET ಆ್ಯಪ್ ಮತ್ತು ಪೋರ್ಟಲ್ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಪೋರ್ಟಲ್‌ಗಳಿಂದ ಈ ಘೋಷಣೆಯನ್ನು ತೆಗೆದುಹಾಕಲಾಗಿದೆ; ಇದರರ್ಥ, ಈ ರಾಜ್ಯಗಳಲ್ಲಿ ಮತದಾರರ ನೋಂದಣಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಕೇವಲ ಸಾಮಾನ್ಯ ಹಾಗೂ ಕಡ್ಡಾಯವಾದ 'ನಮೂನೆ 6' ಅನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.
SIR ಪ್ರಕ್ರಿಯೆಯು ಇನ್ನೂ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಹೆಚ್ಚುವರಿ ಘೋಷಣೆಯ ಸೌಲಭ್ಯವು ECINET ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ಈ ಘೋಷಣೆಯ ಅಡಿಯಲ್ಲಿ, ಹೊಸ ಅರ್ಜಿದಾರರು ತಮ್ಮನ್ನು, ತಮ್ಮ ಪೋಷಕರನ್ನು ಅಥವಾ ಅಜ್ಜ-ಅಜ್ಜಿಯರನ್ನು ಹಿಂದಿನ SIR ಪ್ರಕ್ರಿಯೆಯ ಸಂದರ್ಭದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯೊಂದಿಗೆ ಜೋಡಿಸುವ ವಿವರಗಳನ್ನು ಒದಗಿಸಬೇಕಾಗುತ್ತದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಒಳಗೊಂಡ ಪೂರ್ಣ ಆಯೋಗದ ಸೆಪ್ಟೆಂಬರ್ 26ರ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಭೆಯ ಬಳಿಕ, 'ಫಾರ್ಮ್ 6'ರೊಂದಿಗೆ ಲಗತ್ತಿಸಲಾದ ಘೋಷಣೆಯು 'ನಿರ್ದಿಷ್ಟವಾಗಿ ಎಸ್‌ಐಆರ್ (SIR)ಗಾಗಿ' ಉದ್ದೇಶಿಸಲಾಗಿದ್ದು, ಎಸ್‌ಐಆರ್ ಅವಧಿಯಲ್ಲದ ಸಂದರ್ಭದಲ್ಲಿ, ನಿಯಮಗಳ (ಮತದಾರರ ನೋಂದಣಿ ನಿಯಮಗಳು 1960) ಪ್ರಕಾರ ಅನ್ವಯವಾಗುವ ಫಾರ್ಮ್‌ಗಳನ್ನು ಬಳಸಲಾಗುತ್ತದೆ' ಎಂದು ಚುನಾವಣಾ ಆಯೋಗ ತಿಳಿಸಿದೆ.