‘ವೆಟ್ರಿ ಪಯಣಂ’ ಯೋಜನೆಗೆ ತಮಿಳು ನಾಡಿನಲ್ಲಿ ಚಾಲನೆ; ಸ್ವತಃ ಬಸ್ ಟಿಕೆಟ್ ಹಂಚಿದ ಸಿಎಂ ವಿಜಯ್ ; Video

ಕೊಯಂಬೇಡು ಬಸ್ ನಿಲ್ದಾಣದಲ್ಲಿ ಬಸ್‌ಗಳೊಳಗೆ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸುವ ಮೂಲಕ ವಿಜಯ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.
CM Vijay distributed bus ticket
ಬಸ್ ಟಿಕೆಟ್ ವಿತರಿಸಿದ ಸಿಎಂ ವಿಜಯ್
Updated on: 

ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಇಂದು ಶುಕ್ರವಾರ ಕೊಯಂಬೇಡು ಬಸ್ ನಿಲ್ದಾಣದಲ್ಲಿ ವಿಸ್ತರಿತ ‘ವೆಟ್ರಿ ಪಯಣಂ’ ಯೋಜನೆಗೆ ಚಾಲನೆ ನೀಡಿದರು. ಇದರಡಿ ತಮಿಳುನಾಡಿನಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಕೊಯಂಬೇಡು ಬಸ್ ನಿಲ್ದಾಣದಲ್ಲಿ ಬಸ್‌ಗಳೊಳಗೆ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ಗಳನ್ನು ವಿತರಿಸುವ ಮೂಲಕ ವಿಜಯ್ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಇದರೊಂದಿಗೆ ವಿಸ್ತರಿತ ಉಚಿತ ಪ್ರಯಾಣ ಸೌಲಭ್ಯ ಜಾರಿಗೆ ಬಂದಿದ್ದು, ಪ್ರತಿದಿನ ಸುಮಾರು 84.32 ಲಕ್ಷ ಮಹಿಳೆಯರಿಗೆ ಇದರ ಪ್ರಯೋಜನ ದೊರೆಯಲಿದೆ.

ಒಟ್ಟು 12,692 ಸರ್ಕಾರಿ ಬಸ್‌ಗಳನ್ನು ವಿಸ್ತರಿತ ಯೋಜನೆಯಡಿ ತರಲಾಗಿದೆ. ಏಳು ರಾಜ್ಯ ಸಾರಿಗೆ ಸಂಸ್ಥೆಗಳು ನಿರ್ವಹಿಸುವ ಒಟ್ಟು 18,413 ನಿಗದಿತ ಬಸ್‌ಗಳಲ್ಲಿ ಇದು ಶೇ.69ರಷ್ಟಾಗಿದೆ. ಒಟ್ಟು 1,94,649 ನಿಗದಿತ ಟ್ರಿಪ್‌ಗಳಲ್ಲಿ 1,65,312 ಟ್ರಿಪ್‌ಗಳು, ಅಂದರೆ ಶೇ.85ರಷ್ಟು ಟ್ರಿಪ್‌ಗಳು ಈ ಯೋಜನೆಯಡಿ ಕಾರ್ಯನಿರ್ವಹಿಸಲಿವೆ.

ಈ ವಿಸ್ತರಣೆಯಡಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಬಸ್‌ಗಳು, 40 ಕಿ.ಮೀ.ಗಿಂತ ಹೆಚ್ಚಿನ ದೂರದ ಮಾರ್ಗಗಳಲ್ಲಿ ಸಂಚರಿಸುವ ಮೊಫಸ್ಸಿಲ್ ಸಾಮಾನ್ಯ ಬಸ್‌ಗಳು ಹಾಗೂ ಘಾಟ್ ಸಾಮಾನ್ಯ ಬಸ್‌ಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಆದರೆ, ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ನಿಗಮ (SETC) ನಿರ್ವಹಿಸುವ ಬಸ್‌ಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಹಿಂದಿನ ಡಿಎಂಕೆ ಸರ್ಕಾರ ಜಾರಿಗೆ ತಂದಿದ್ದ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ‘ವಿಡಿಯಲ್ ಪಯಣಂ’ ಅಡಿಯಲ್ಲಿ, ಸಾಮಾನ್ಯ ನಗರ ಮತ್ತು ಪಟ್ಟಣ ಬಸ್‌ಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ 40 ಕಿ.ಮೀ.ವರೆಗೆ ಸಂಚರಿಸುವ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿತ್ತು. ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್, ಡಿಲಕ್ಸ್ ಮತ್ತು ಮೊಫಸ್ಸಿಲ್ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರಲಿಲ್ಲ.

ಬಸ್‌ಗಳಲ್ಲಿರುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ (ETM) ವ್ಯವಸ್ಥೆಯನ್ನು ಉಚಿತ ಪ್ರಯಾಣದ ದಾಖಲೆ ನಿರ್ವಹಿಸಲು ಸಂಯೋಜಿಸಲಾಗಿದೆ. ಸರ್ಕಾರ ಈ ಸಂಯೋಜನಾ ಕಾರ್ಯವನ್ನು ಪೂರ್ಣಗೊಳಿಸಿದ್ದು, ಸೆಪ್ಟೆಂಬರ್ 27ರಂದು ಪರೀಕ್ಷೆ, ಪರಿಶೀಲನೆ ಮತ್ತು ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.

ಮಹಿಳೆಯರಿಗೆ ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮನೆಯಿಂದ ದೂರದಲ್ಲಿರುವ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ತೆರಳುವ ಮಹಿಳೆಯರು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಪ್ರಯಾಣಿಸುವ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ಎ. ವಿಜಯ್ ತಮಿಳನ್ ಪಾರ್ಥಿಬನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com