

ಮುಂಬೈ (ಮಹಾರಾಷ್ಟ್ರ): ಮುಂಬೈನ ಪ್ರಸಿದ್ಧ ಮರೀನ್ ಡ್ರೈವ್ ಪ್ರದೇಶದಲ್ಲಿ ಪ್ಲಕಾರ್ಡ್‌ಗಳನ್ನು ಹಿಡಿದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಅವರನ್ನು ಮುಂಬೈ ಪೊಲೀಸರು ತಾತ್ಕಾಲಿಕವಾಗಿ ವಶಕ್ಕೆ ಪಡೆದು, ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ಅಕ್ರಮಗಳನ್ನು ಖಂಡಿಸಿ ಸಿಜೆಪಿ ಅಕ್ಟೋಬರ್ 2 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಬೃಹತ್ 'ಜೈಲ್ ಭರೋ ಆಂದೋಲನ' ಹಮ್ಮಿಕೊಂಡಿತ್ತು. ಆದರೆ, ಶಿವಾಜಿ ಪಾರ್ಕ್ ಮೈದಾನವು ಕೇವಲ ಕ್ರೀಡಾ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಮಾತ್ರ ಮೀಸಲಾಗಿದ್ದು, ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂಬ ಬಾಂಬೆ ಹೈಕೋರ್ಟ್‌ನ 2013ರ ಆದೇಶವನ್ನು ಉಲ್ಲೇಖಿಸಿ ಮುಂಬೈ ಪೊಲೀಸರು ಈ ಮೊದಲೇ ಸಿಜೆಪಿಯ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ ಸಂಚಾರ ದಟ್ಟಣೆ ಮತ್ತು ಸೌಂಡ್ ಪೊಲ್ಯೂಷನ್ ಕಾರಣಗಳನ್ನು ನೀಡಿ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದರು.
ಮುಂದುವರೆದು, ಪೊಲೀಸರ ನಿರಾಕರಣೆಯ ಹೊರತಾಗಿಯೂ, ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ ಮತ್ತು ಅವರ ಬೆಂಬಲಿಗರು ಮುಂಬೈನ ಮರೀನ್ ಡ್ರೈವ್ ಪ್ರೋಮಿನೇಡ್ ಬಳಿ ಪ್ಲಕಾರ್ಡ್‌ಗಳನ್ನು ಹಿಡಿದು ಪ್ರತಿಭಟನೆಗೆ ಮುಂದಾಗಿದ್ದರು. ಹಾಗಾಗಿ, ಸ್ಥಳಕ್ಕೆ ಧಾವಿಸಿದ ಮಹಿಳಾ ಇನ್ಸ್‌ಪೆಕ್ಟರ್ ಒಳಗೊಂಡ ಪೊಲೀಸ್ ತಂಡವು, ಅಭಿಜೀತ್ ಡಿಪ್ಕೆ ಅವರನ್ನು ವ್ಯಾನ್ ಹತ್ತಿಸಿ ಮರೀನ್ ಡ್ರೈವ್ ಪೊಲೀಸ್ ಠಾಣೆಗೆ ಕರೆದೊಯ್ದಿತು. ಅಲ್ಲಿ ಅವರ ಗುರುತು ಮತ್ತು ಹಿನ್ನೆಲೆಯ ಕುರಿತು ಹಿರಿಯ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದರು. ಇನ್ನು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮುಂಬೈ ಪೊಲೀಸರು ತಾವು ಡಿಪ್ಕೆ ಅವರನ್ನು ಅಧಿಕೃತವಾಗಿ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಜೆಪಿ ವಕ್ತಾರ ಅಶುತೋಷ್ ರಂಕಾ ಕೂಡ ಟ್ವೀಟ್ ಮಾಡಿ, "ಡಿಪ್ಕೆ ಅವರನ್ನು ಬಂಧಿಸಲಾಗಿಲ್ಲ, ಕೇವಲ ಠಾಣೆಗೆ ಕರೆದೊಯ್ದು ಮಾತುಕತೆ ನಡೆಸಿ ಬಿಡುಗಡೆ ಮಾಡಲಾಗಿದೆ" ಎಂದು ಖಚಿತಪಡಿಸಿದ್ದಾರೆ.
ಜೈಲ್ ಭರೋ ಎಚ್ಚರಿಕೆ
ಪೊಲೀಸ್ ಠಾಣೆಯಿಂದ ಹೊರಬಂದ ನಂತರ ಮಾತನಾಡಿದ ಅಭಿಜೀತ್ ಡಿಪ್ಕೆ, ಪೊಲೀಸರ ಇಂತಹ ತಂತ್ರಗಳಿಗೆ ನಾವು ಹೆದರುವುದಿಲ್ಲ ಮತ್ತು ಪೂರ್ವ ನಿಯೋಜಿತ ವೇಳಾಪಟ್ಟಿಯಂತೆಯೇ ಅಕ್ಟೋಬರ್ 2 ರಂದು ಶಿವಾಜಿ ಪಾರ್ಕ್‌ನಲ್ಲಿ ಶಾಂತಿಯುತವಾಗಿ ‘ಜೈಲ್ ಭರೋ ಆಂದೋಲನ’ ನಡೆಸಿಯೇ ಸೀರುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.