

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಗೇಟ್‌ನತ್ತ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ದೆಹಲಿ ಪೊಲೀಸರು ಎಎಪಿ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರನ್ನು ವಶಕ್ಕೆ ಪಡೆದರು.
ಈ ವೇಳೆ ಎಎನ್‌ಐ (ANI) ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಭಾರದ್ವಾಜ್, ಪೊಲೀಸರು ನಮ್ಮೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನನ್ನನ್ನು ಫುಟ್‌ಬಾಲ್‌ನಂತೆ ಎಸೆದಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಇಷ್ಟೊಂದು ಜನ ಪೊಲೀಸರಿದ್ದರೂ ಯಾರೂ ಕೂಡಾ ತಮ್ಮವರೇ ಆದ ಎಸಿಪಿ ವಿರುದ್ಧ ಎಫ್‌ಐಆರ್ (FIR) ದಾಖಲಿಸುತ್ತಿಲ್ಲ ಅಥವಾ ಅವರನ್ನು ಬಂಧಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ದೆಹಲಿಯಲ್ಲಿ 5,000 ಪೊಲೀಸ್ ಸಿಬ್ಬಂದಿ ನಿಯೋಜನೆ: ಇಂಡಿಯಾ ಗೇಟ್‌ನಿಂದ ಜಂತರ್ ಮಂತರ್‌ವರೆಗೆ ಉದ್ದೇಶಿಸಿದ ಎರಡು ಪ್ರತಿಭಟನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕ್ಷೀಪ್ರ ಕಾರ್ಯ ಪಡೆ (RAF) ಮತ್ತು ಇತರ ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಸುಮಾರು 5,000 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಈ ಮೆರವಣಿಗೆಗಳನ್ನು ನಡೆಸಲಾಯಿತು. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನೇತೃತ್ವದಲ್ಲಿ 'ನಾಗರಿಕರ ಮೆರವಣಿಗೆ' (Citizens’ March) ಮಧ್ಯಾಹ್ನ 3 ಗಂಟೆಗೆ ನಡೆಯಿತು. ನಂತರ ಸಂಜೆ 5 ಗಂಟೆಗೆ ಅದೇ ಮಾರ್ಗದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ (IYC) ಮೆರವಣಿಗೆ ನಡೆಸಿತು.
ಅಲ್ಲದೇ ಇಂದು ರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಕೆಫೆಗಳು ಇರುವುದಿಲ್ಲ, ಕ್ಲಬ್ ಓಪನ್ ಆಗಲ್ಲ, ಭಿತ್ತಿಪತ್ರಗಳೇ ತುಂಬಿರುತ್ತವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ಪೋಸ್ಟ್ ಮಾಡಿದೆ.