

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ, ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇರೆಗೆ ಸಿನಿಮೀಯರ ರೀತಿಯಲ್ಲಿ 32 ವರ್ಷದ ಕಾಲೇಜು ಉಪನ್ಯಾಸಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ನಂತರ ಕಬ್ಬಿಣದ ರಾಡ್ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಲೆಕ್ಚರರ್ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನು ಮಾಧವ್ ಅಲಿಯಾಸ್ ನಿತಿನ್ ಧಾನಾಜಿ ಸಂಗಮೆ ಎಂದು ಗುರುತಿಸಲಾಗಿದೆ. ಮಾಧವ್ ಅವರನ್ನು ಭಾನುವಾರ ಲಾತೂರ್ ನಗರದಲ್ಲಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು, ನೆರೆಯ ಬೀಡ್ ಜಿಲ್ಲೆಯ ಅಂಬಾಜೋಗೈ ತಾಲೂಕಿನ ಬರ್ದಾಪುರ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
"ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಕಲ್ಲು ಪುಡಿ ಮಾಡುವ ಘಟಕವೊಂದರ ಬಳಿ ಮಾಧವ್ ಅವರ ಮೇಲೆ ಕಬ್ಬಿಣದ ರಾಡ್, ಕೋಲು ಮತ್ತು ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ," ಎಂದು ಪೊಲೀಸರು ಹೇಳಿದ್ದಾರೆ.
ಲಾತೂರ್ ನಿವಾಸಿಗಳಾದ ಪೃಥ್ವಿರಾಜ್ ದೇಶಮುಖ್, ಧವಲ್ ದೇಶಮುಖ್, ಪ್ರಥಮೇಶ್ ರೆಡ್ಡಿ ಮತ್ತು ಆದಿತ್ಯ ಭಾಲ್ಕೆ ವಿರುದ್ಧ ಅಪಹರಣ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅವರನ್ನು ಬಂಧಿಸಿದ್ದಾರೆ.