ಬೇರೆ ಹುಡುಗನ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ; ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಲೆಕ್ಚರರ್ ಬಂಧನ!

ಆರಂಭದಲ್ಲಿ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತು. ಹೀಗಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು.
Lecturer Kills Engineering Student For Befriending Another Man In Telangana
ಅಕ್ಷಿತಾರಾಣಿ
Updated on

ಹೈದರಾಬಾದ್: ತೆಲಂಗಾಣದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಆರಂಭದಲ್ಲಿ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತು. ಹೀಗಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮೇಲ್ನೋಟಕ್ಕೆ ಇದು ಸರಳ ಆತ್ಮಹತ್ಯೆ ಪ್ರಕರಣದಂತೆ ಕಂಡರೂ, ಆಕೆಗೆ ಬಲವಂತವಾಗಿ ಕೀಟನಾಶಕ ಸೇವಿಸುವಂತೆ ಮಾಡಲಾಗಿತ್ತು ಮತ್ತು ನಂತರ ನಡೆದ ಎಲ್ಲವೂ ಒಂದು ಪೂರ್ವನಿಯೋಜಿತ ಪಕ್ಕಾ ಪ್ಲಾನ್ ಎಂಬುದು ಪೊಲೀಸರಿಗೆ ತಿಳಿದುಬಂದಿದೆ.

ಮೃತ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಥಂಡ್ರಾ ಅಕ್ಷಿತಾರಾಣಿ(20) ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಉಪನ್ಯಾಸಕ ನವೀನ್ ಕುಮಾರ್ ಅವರನ್ನು ಬಂಧಿಸಲಾಗಿದೆ.

Lecturer Kills Engineering Student For Befriending Another Man In Telangana
ಚಿಕ್ಕಬಳ್ಳಾಪುರ: ಕಚೇರಿಯಲ್ಲೇ ರೈತ ಸಂಘದ ತಾಲೂಕು ಅಧ್ಯಕ್ಷ ಆತ್ಮಹತ್ಯೆಗೆ ಶರಣು; ಡೆತ್‌ನೋಟ್‌ನಲ್ಲಿ ಏನಿದೆ?

ವಿದ್ಯಾರ್ಥಿನಿ ನಸ್ಪೂರಿನ ಕಾಲೇಜುವೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುವಾಗ ಅತಿಥಿ ಉಪನ್ಯಾಸಕ ನವೀನ್ ಕುಮಾರ್ ಪರಿಚಯವಾಗಿದೆ. ಬಳಿಕ ಅಲ್ಲಿಂದ ಯುವತಿ ಹೈದರಾಬಾದ್‌ಗೆ ಮೈನಿಂಗ್ ಎಂಜಿನಿಯರಿಂಗ್ ಮಾಡಲು ತೆರಳಿದ್ದಳು. ಅಲ್ಲಿ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ ರವಿ ಕುಮಾರ್ ಎಂಬಾತನ ಪರಿಚಯವಾಗಿತ್ತು. ಬರಬರುತ್ತಾ ನವೀನ್ ಹಾಗೂ ಅಕ್ಷಿತಾರಾಣಿ ನಡುವಿನ ಸಂಬಂಧ ಹದಗೆಟ್ಟಿತ್ತು. ರವಿ ಜೊತೆಗೆ ಸಂಬಂಧ ಬೆಳೆಸುತ್ತಿರುವುದರಿಂದ ಅಕ್ಷಿತಾರಾಣಿ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ನವೀನ್ ಆಕ್ರೋಶಗೊಂಡಿದ್ದರು.

"ಅಕ್ಷಿತಾರಾಣಿ ತನ್ನಿಂದ ದೂರವಾಗಿ ರವಿ ಕುಮಾರ್‌ಗೆ ಹತ್ತಿರವಾಗುತ್ತಿರುವುದನ್ನು ಸಹಿಸಿಕೊಳ್ಳಲಾಗದೆ ನವೀನ್, ಯುವತಿಯನ್ನು ಕೊಲೆ ಮಾಡಿದ್ದಾನೆ" ಎಂದು ಪೆದ್ದಪಲ್ಲಿಯ ಪೊಲೀಸ್ ಉಪ ಆಯುಕ್ತ ಬಿ. ರಾಮ್ ರೆಡ್ಡಿ ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 12 ರಂದು ಅಕ್ಷಿತಾರಾಣಿ ಮನೆಗೆ ಮರಳುತ್ತಿದ್ದಾಗ, ನವೀನ್ ಕುಮಾರ್ ಆಕೆಯನ್ನು ಎಫ್‌ಸಿಐ (FCI) ಕ್ರಾಸ್‌ರೋಡ್ಸ್ ಬಳಿ ತಡೆದಿದ್ದು, ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು, ರವಿ ಕುಮಾರ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪತ್ರ ಬರೆಯುವಂತೆ ಒತ್ತಾಯಮಾಡಿದ್ದಾನೆ. ಒಪ್ಪದಿದ್ದಾಗ ಆಕೆಗೆ ಕೀಟನಾಶಕ ಕುಡಿಸಿದ್ದ. ಬಳಿಕ ಅಕ್ಷಿತಾರಾಣಿಗೆ ಕೂಡಲೇ ಸಿಗಬೇಕಿದ್ದ ವೈದ್ಯಕೀಯ ಚಿಕಿತ್ಸೆಗೂ ನವೀನ್ ಉದ್ದೇಶಪೂರ್ವಕವಾಗಿ ತಡಮಾಡಿಸಿದ್ದ ಎನ್ನಲಾಗಿದೆ.

ನಂತರ ಯುವತಿಯ ಮೊಬೈಲ್ ಮೂಲಕ ತಂದೆಗೆ ಕರೆ ಮಾಡಿ, ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರನ್ನು ನಂಬಿಸಿದ್ದ. ಆನಂತರ ಅಕ್ಷತಾರಾಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.

ಪೊಲೀಸರು ಕೊಲೆಯ ರಹಸ್ಯವನ್ನು ಭೇದಿಸಲು ಸಿಸಿಟಿವಿ, ಕಾಲ್ ಲಾಗ್, ಕಾಲ್ ರೆಕಾರ್ಡಿಂಗ್ ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದಾಗ ಅಸಲಿ ರಹಸ್ಯ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿ ನವೀನ್ ಕುಮಾರ್ ಹಾಗೂ ರವಿ ಕುಮಾರ್‌ನನ್ನು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಒಂದು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com