

ಜೆರುಸಲೆಮ್: ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ದೇಶದ ಪ್ರತಿಷ್ಠಿತ 'ನಾಗರಿಕ ಶೌರ್ಯ ರಾಷ್ಟ್ರಪತಿ ಪ್ರಶಸ್ತಿ' (Presidential Award for Civil Heroism) ನೀಡಿ ಗೌರವಿಸುವುದಾಗಿ ಘೋಷಿಸಿದ್ದಾರೆ.
ಫ್ಲೈದುಬೈ (Flydubai) ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಮ್ಮ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ತಡೆದಿದ್ದಕ್ಕಾಗಿ ಅವರಿಗೆ ಈ ಗೌರವ ಸಿಕ್ಕಿದೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಜೆರುಸಲೆಮ್ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.
ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರಿಗೆ ಇಸ್ರೇಲ್ನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲಿ ಒಂದಾದ ‘ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಗುರುವಾರ ತಿಳಿಸಿದ್ದಾರೆ.
ಮಚ್ಛರ್ ಅವರ ಧೈರ್ಯ ಮತ್ತು ಸಮಯೋಚಿತ ಕ್ರಮಗಳು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಗಿವೆ ಎಂದು ಅವರು ಶ್ಲಾಘಿಸಿದ್ದಾರೆ. ಗಾಯಗಳಿಂದ ಚೇತರಿಸಿಕೊಂಡ ಬಳಿಕ ಅಧ್ಯಕ್ಷರೇ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ತಿಳಿದುಬಂದಿದೆ. ಸದ್ಯ ಸ್ಮಿತ್ ಮಚ್ಛರ್ ಅವರು ಸಂಯುಕ್ತ ಅರಬ್ ಎಮಿರೇಟ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಸ್ರೇಲ್ ಅಧ್ಯಕ್ಷರ ಕಚೇರಿ ಬಿಡುಗಡೆ ಮಾಡಿದ ಪ್ರತ್ಯೇಕ ಹೇಳಿಕೆಯಲ್ಲಿ ಹೆರ್ಜಾಗ್ ಅವರು ಭಾರತೀಯ ಪೈಲಟ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಸ್ರೇಲ್ ದೇಶದ ಪರವಾಗಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆಗಳನ್ನು ಸಲ್ಲಿಸುತ್ತೇನೆ. ಅವರ ದೃಢಸಂಕಲ್ಪ ಮತ್ತು ಸಮಯೋಚಿತ ಕ್ರಮಗಳು ದಾಳಿಕೋರನನ್ನು ನಿಷ್ಕ್ರಿಯಗೊಳಿಸಲು ನೆರವಾಗಿದ್ದು, ಅನೇಕ ಜೀವಗಳನ್ನು ಉಳಿಸಿವೆ ಎಂದು ತಿಳಿಸಿದ್ದಾರೆಂದು ತಿಳಿಸಿದೆ.
ಮಚ್ಛರ್ ಅವರು ಶೀಘ್ರವಾಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಹೆರ್ಜಾಗ್, ಅವರ ಧೈರ್ಯ ಮತ್ತು ದೃಢಸಂಕಲ್ಪವನ್ನು ಕೊಂಡಾಡಿದ್ದಾರೆ.
ದುಬೈನಿಂದ ಟೆಲ್ ಅವಿವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ 1073ರಲ್ಲಿ ಈ ಘಟನೆ ನಡೆದಿತ್ತು. ಕ್ಯಾಪ್ಟನ್ ಸ್ಮಿತ್ ಮಚ್ಛರ್ ವಿಮಾನವನ್ನು ಮುನ್ನಡೆಸುತ್ತಿದ್ದಾಗ, ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಕಾಕ್ಪಿಟ್ನಲ್ಲಿ ಕ್ರ್ಯಾಶ್ ಆ್ಯಕ್ಸ್ನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ವಿಮಾನವು ಎತ್ತರ ಕಳೆದುಕೊಂಡಿದ್ದು, ಪತನಗೊಳ್ಳುವ ಆತಂಕ ಎದುರಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದರೂ ಧೈರ್ಯ ಕಳೆದುಕೊಳ್ಳ ಮಚ್ಛರ್ ಅವರು, ಕಾಕ್ಪಿಟ್ನ ಬಾಗಿಲು ತೆರೆದು ವಿಮಾನದಲ್ಲಿದ್ದ ಇತರರಿಗೆ ಎಚ್ಚರಿಕೆ ನೀಡುವಲ್ಲಿ ಯಶಸ್ವಿಯಾದರು. ತಕ್ಷಣವೇ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾಕ್ಪಿಟ್ಗೆ ಧಾವಿಸಿ, ಆರೋಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದರು.
ಬಳಿಕ ವಿಮಾನದಲ್ಲಿದ್ದ ಇತರ ಪೈಲಟ್ಗಳು ನಿಯಂತ್ರಣ ವಹಿಸಿಕೊಂಡು, ಸೌದಿ ಅರೇಬಿಯಾದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಘಟನೆ ಬೆನ್ನಲ್ಲೇ ಮಚ್ಛರ್ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಜಾಗತಿಕ ನಾಯಕರು ಮಚ್ಚರ್ ಅವರು ಸಾಹಸವನ್ನು ಶ್ಲಾಘಿಸಿದ್ದಾರೆ.
ಇದೇ ವೇಳೆ, ಮಚ್ಛರ್ ಅವರ ಧೈರ್ಯವನ್ನು ಅಧಿಕೃತವಾಗಿ ಗುರುತಿಸುವ ಉದ್ದೇಶದಿಂದ ಅಮೆರಿಕದ ಕಾಂಗ್ರೆಸ್ನಲ್ಲಿ ನಿರ್ಣಯವೊಂದನ್ನು ಮಂಡಿಸುವ ಪ್ರಯತ್ನವೂ ನಡೆದಿದೆ.
ಸಂಭವಿಸಬಹುದಾಗಿದ್ದ ಭೀಕರ ವಿಮಾನ ದುರಂತವನ್ನು ತಡೆಯಲು ನೆರವಾದ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರ ಕೊಡುಗೆಯನ್ನೂ ಈ ನಿರ್ಣಯದಲ್ಲಿ ಗುರುತಿಸಲು ಉದ್ದೇಶಿಸಲಾಗಿದೆ.