

ನವದೆಹಲಿ: ತಿಹಾರ್ ಜೈಲಿನಿಂದ ಬಿಡುಗಡೆಯಾದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನಾ ಪ್ರಕರಣದಲ್ಲಿ 7 ದಿನಗಳ ಬಂಧನದ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ನಾಯಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಬಿಡುಗಡೆಗೊಂಡಿರುವುದಕ್ಕೆ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಇಬ್ಬರೂ ತಮಗಿಂತ ದೊಡ್ಡ ನಾಯಕರು ಎಂದು ಬಣ್ಣಿಸಿರುವ ಅವರು, ಅವರ ಸೂಚನೆಗಳನ್ನು ಪಾಲಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಅಕ್ಟೋಬರ್ 14ರಂದು ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿಯ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದಾಸ್ ಮತ್ತು ರಂಕಾ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಇಬ್ಬರು ಜೈಲಿನಿಂದ ಹೊರಬಂದಿದ್ದಾರೆ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ದೀಪ್ಕೆ, ಇಬ್ಬರು ನಾಯಕರನ್ನು ಹೊಗಳಿದ್ದಾರೆ. “ಸೌರವ್ ಮತ್ತು ಆಶು ಕೇವಲ ನನಗಿಂತ ಉತ್ತಮ ನಾಯಕರಷ್ಟೇ ಅಲ್ಲ, ನನಗಿಂತಲೂ ಬಹಳ ದೊಡ್ಡ ನಾಯಕರು. ನನ್ನ ನಾಯಕರೇ, ನಿಮ್ಮ ಆದೇಶಗಳನ್ನು ಪಾಲಿಸಲು ನನಗೆ ಸಂತೋಷವಿದೆ. ನನ್ನ ಜೀವವೇ ನಿಮಗಾಗಿ ಮೀಸಲು ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ ಹಾಸ್ಯಭರಿತವಾಗಿ ಹಿಂದಿಯಲ್ಲಿ ಮತ್ತೊಂದು ಮಾತನ್ನೂ ಸೇರಿಸಿರುವ ಅವರು, ಆದರೆ ಇನ್ನು ಮುಂದೆ ನನ್ನನ್ನು ಬಿಟ್ಟು ಯಾರೂ ಉದ್ಯಾನದಲ್ಲಿ ಒಬ್ಬರೇ ತಿರುಗಾಡುವಂತಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ದಾಸ್ ಮತ್ತು ರಂಕಾ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ದೀಪ್ಕೆ, ಅದಕ್ಕೆ “ನನ್ನ ನಾಯಕರು” ಎಂಬ ಶೀರ್ಷಿಕೆ ನೀಡಿದ್ದಾರೆ.
ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಕೂಡ ಇಬ್ಬರ ಬಿಡುಗಡೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ನಿರ್ಧಾರ ಬಹಳ ಹಿಂದೆಯೇ ಆಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ತೀರ್ಮಾನ ಬಹಳ ಹಿಂದೆಯೇ ಆಗಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಆದರೂ ಈಗಲಾದರೂ ನಿರ್ಧಾರ ಕೈಗೊಂಡಿರುವುದು ಸಂತಸದ ವಿಚಾರ ಎಂದು ಹೇಳಿದ್ದಾರೆ.
ಇಬ್ಬರ ಬಂಧನವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸುವಂತೆ ಪೊಲೀಸರು ಮನವಿ ಮಾಡಿದ್ದರು. ಸನ್ನಿಹಿತ ಅಪಾಯವಿರುವುದನ್ನು ಇದಕ್ಕೆ ಕಾರಣವಾಗಿ ಉಲ್ಲೇಖಿಸಿದ್ದರು. ಆದರೆ, ಅಂತಹ ಯಾವುದೇ ಅಪಾಯವಿಲ್ಲ ಮತ್ತು ಪ್ರತಿಭಟನೆಗೆ ಯಾವುದೇ ಕರೆ ನೀಡಲಾಗಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು ಎಂದು ರತ್ನಾ ಸಿಂಗ್ ತಿಳಿಸಿದ್ದಾರೆ.
ಇದನ್ನು ಕೇವಲ ಊಹೆಯ ಆಧಾರದ ಮೇಲೆ ಪರಿಗಣಿಸಿ ನ್ಯಾಯಾಂಗ ಬಂಧನವನ್ನು ವಿಸ್ತರಿಸಲು ಸಾಧ್ಯವಿಲ್ಲ. ಎಸ್‌ಇಎಂ ಈ ಅಂಶವನ್ನು ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿಗದಿಪಡಿಸಿದ್ದ ಸ್ಥಳದ ಮಾನ್ಯತೆಯನ್ನು ರದ್ದುಗೊಳಿಸಿದ ಬಳಿಕವೂ ಅಲ್ಲಿ ಪ್ರವೇಶಿಸಿ, ಶಾಂತಿ ಕಾಪಾಡುವ ಬಾಂಡ್‌ಗಳ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಕ್ಟೋಬರ್ 14ರಂದು ದಾಸ್ ಮತ್ತು ರಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅಕ್ಟೋಬರ್ 19ರಂದು ಈ ಬಂಧನವನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಲಾಗಿತ್ತು.
ಇಬ್ಬರ ನ್ಯಾಯಾಂಗ ಬಂಧನದ ಕುರಿತು ಬುಧವಾರ ದೆಹಲಿ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಕೇಳಿದಾಗ, ನ್ಯಾಯಾಧೀಶರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಆದರೆ, ಸಿಜೆಪಿ ಅದನ್ನು ಒಪ್ಪಲೇಬೇಕೆಂದಿಲ್ಲ ಎಂದು ರತ್ನಾ ಸಿಂಗ್ ಹೇಳಿದ್ದಾರೆ.
ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಅದು ಮೌಖಿಕ ಅವಲೋಕನ ಮಾತ್ರ. ಪ್ರಕರಣದ ಅರ್ಹತೆಗಳ ಕುರಿತು ನ್ಯಾಯಾಲಯದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕಳೆದ ಒಂದು ವಾರದಿಂದ ಸೌರವ್ ಮತ್ತು ಅಶುತೋಷ್ ಬಿಡುಗಡೆಗಾಗಿ ನಾವು ಪ್ರಯತ್ನಿಸುತ್ತಿದ್ದೆವು. ಇಂದು ಅದಕ್ಕಾಗಿ ಇಲ್ಲಿಗೆ ಬಂದಿದ್ದೆವು. ಕೊನೆಗೂ ಬಿಡುಗಡೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಬಿಡುಗಡೆಯ ಬಳಿಕ ಇಬ್ಬರು ನಾಯಕರನ್ನು ಭೇಟಿಯಾಗಲು ಸಿಜೆಪಿ ತಂಡ ಕಾತರದಿಂದ ಕಾಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ತಂಡದ ಸದಸ್ಯರು ಈಗ ಭಾವುಕರಾಗಿದ್ದಾರೆ. ಬಹಳ ದಿನಗಳಿಂದ ಎಲ್ಲರಿಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರನ್ನು ಭೇಟಿಯಾಗಲು ಎಲ್ಲರೂ ಬಯಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಜಾಮೀನುದಾರರ ವ್ಯವಸ್ಥೆ ಅಥವಾ ಇತರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಯಾರ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಬಾರದು ಎಂಬ ಆಶಯವನ್ನೂ ರತ್ನಾ ಸಿಂಗ್ ವ್ಯಕ್ತಪಡಿಸಿದ್ದಾರೆ.
ಬಿಡುಗಡೆ ಆದೇಶವನ್ನು ಈಗಾಗಲೇ ಕಳುಹಿಸಲಾಗಿದ್ದು, ದಾಸ್ ಮತ್ತು ರಂಕಾ ಅವರನ್ನು ಶೀಘ್ರದಲ್ಲೇ ಭೇಟಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಬುಧವಾರ, ದಾಸ್ ಮತ್ತು ರಂಕಾ ಅವರ ನ್ಯಾಯಾಂಗ ಬಂಧನದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಎಸ್‌ಇಎಂ ನ್ಯಾಯಾಲಯದ ತೀರ್ಪಿಗಾಗಿ ಕಾಯುವಂತೆ ಸೂಚಿಸಿದ್ದ ನ್ಯಾಯಾಲಯ, ಆ ಬಳಿಕವೂ ಅಸಮಾಧಾನ ಮುಂದುವರಿದರೆ ಮೇಲ್ಮನವಿ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿತ್ತು.