ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಇಲ್ಲ ಎಂದು ಮುಚ್ಚಳಿಕೆ: ತಿಹಾರ್ ಜೈಲಿನಿಂದ ಸೌರವ್ ದಾಸ್, ಆಶುತೋಷ್ ರಂಕಾ ಬಿಡುಗಡೆ

ವಿಚಾರಣೆ ಮುಗಿಯುವವರೆಗೆ ತಲಾ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಬಾಂಡ್ ಸಲ್ಲಿಸಿದ ಬಳಿಕ ಇಬ್ಬರೂ ನಾಯಕರು ತಿಹಾರ್ ಜೈಲಿನಿಂದ ನಿನ್ನೆ ಸಂಜೆ ಬಿಡುಗಡೆಯಾದರು.
CJP leaders Saurav Das and Ashutosh Ranka come out of Tihar Jail after the SEM Court ordered their release in New Delhi on Wednesday.
ದೆಹಲಿಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದ ಬಳಿಕ ಸಿಜೆಪಿ ನಾಯಕರು ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರು ತಿಹಾರ್ ಜೈಲಿನಿಂದ ಹೊರಬಂದರು.
Updated on: 

ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಹಾಗೂ ಶಾಂತಿಭಂಗ ಉಂಟುಮಾಡುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿನ್ನೆ ಬುಧವಾರ ಆದೇಶ ನೀಡಿದೆ.

ವಿಚಾರಣೆ ಮುಗಿಯುವವರೆಗೆ ತಲಾ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಬಾಂಡ್ ಸಲ್ಲಿಸಿದ ಬಳಿಕ ಇಬ್ಬರೂ ನಾಯಕರು ತಿಹಾರ್ ಜೈಲಿನಿಂದ ನಿನ್ನೆ ಸಂಜೆ ಬಿಡುಗಡೆಯಾದರು. ಜಾಮೀನುದಾರರು ನೀಡಿದ ಭರವಸೆಗಳನ್ನು ಅಂಗೀಕರಿಸಿದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ರಿತು ರಾಜ್ ಬಿಡುಗಡೆಗೆ ಆದೇಶಿಸಿದರು.

ಶಾಂತಿಭಂಗ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕ ಇನ್ನೂ ಮುಂದುವರಿದಿದೆ ಎಂದು ವಾದಿಸಿದ ದೆಹಲಿ ಪೊಲೀಸರು, ಇಬ್ಬರ ನ್ಯಾಯಾಂಗ ಬಂಧನವನ್ನು ಇನ್ನೂ ಮೂರು ದಿನ ವಿಸ್ತರಿಸುವಂತೆ ಈ ಹಿಂದೆ ಮನವಿ ಮಾಡಿದ್ದರು. ಅವರ ಹಿಂದಿನ ನಡವಳಿಕೆ ಮತ್ತು ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ಗಮನಿಸಿದರೆ ಈ ಆತಂಕವನ್ನು ನಿರ್ಲಕ್ಷಿಸಲಾಗದು ಎಂದು ಪೊಲೀಸರು ವಾದಿಸಿದ್ದರು.

CJP leaders Saurav Das and Ashutosh Ranka come out of Tihar Jail after the SEM Court ordered their release in New Delhi on Wednesday.
'ಹರ್ ಗಲಿ ಮೇ ಜಂತರ್ ಮಂತರ್': SIR ವಿರುದ್ಧದ ಪ್ರತಿಭಟನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ!

ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರು ನ್ಯಾಯಾಲಯದ ಮುಂದೆ ಹಾಗೂ ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಲ್ಲಿ, ಇಂತಹ ಚಟುವಟಿಕೆಗಳಿಂದ ದೂರ ಉಳಿಯುವ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ವಾದಿಸಿದ್ದರು. ನಿನ್ನೆ ವಿಚಾರಣೆ ವೇಳೆ ಸಲ್ಲಿಸಿದ ಲಿಖಿತ ಉತ್ತರವು ಈ ಹಿಂದೆ ನೀಡಿದ್ದ ಹೇಳಿಕೆಗಳಿಗೆ ವಿರುದ್ಧವಾಗಿದೆ ಎಂದೂ ಆಕ್ಷೇಪಿಸಿದ್ದರು.

ಹಿಂದಿನ ವಿಚಾರಣೆಯ ಬಳಿಕ ಇಬ್ಬರು ನಾಯಕರನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಸಿಜೆಪಿಯ ಮತ್ತೊಬ್ಬ ಸದಸ್ಯರು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯನ್ನು ಪೊಲೀಸರು ವಿಚಾರಣೆ ವೇಳೆ ಉಲ್ಲೇಖಿಸಿದರು. ಈ ಹೇಳಿಕೆಯು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅಧಿಕಾರವನ್ನು ದುರ್ಬಲಗೊಳಿಸುವಂತಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಪರ ವಕೀಲರು ಯಾವುದೇ ಷರತ್ತಿಲ್ಲದ ಕ್ಷಮೆಯಾಚನೆ ಸಲ್ಲಿಸಿ, ಇಂತಹ ವರ್ತನೆ ಮರುಕಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು ಎಂದು ವರದಿಯಾಗಿದೆ.

CJP leaders Saurav Das and Ashutosh Ranka come out of Tihar Jail after the SEM Court ordered their release in New Delhi on Wednesday.
CJP ನಾಯಕರ ಜೈಲು ವಾಸ ಮುಂದುವರಿಕೆ? ಸೌರವ್ ದಾಸ್, ಆಶುತೋಷ್ ರಂಕಾ ಕಸ್ಟಡಿ ಆದೇಶ ಕಾಯ್ದಿರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್!

ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಯನ್ನು ಕಾಪಾಡಲು ಅಗತ್ಯವಿರುವ ತಕ್ಷಣದ ಮುನ್ನೆಚ್ಚರಿಕೆ ಕ್ರಮಗಳನ್ನು ಬಾಂಡ್‌ಗಳ ಜಾರಿ ಹಾಗೂ ಇಬ್ಬರು ನಾಯಕರು ಸಲ್ಲಿಸಿರುವ ಲಿಖಿತ ಭರವಸೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟರು. ನ್ಯಾಯಾಲಯದ ಮುಂದೆ ನೀಡಿರುವ ಭರವಸೆಗಳನ್ನು ಪರಿಗಣಿಸಿದರೆ, ಈ ಹಂತದಲ್ಲಿ ಮತ್ತಷ್ಟು ನ್ಯಾಯಾಂಗ ಬಂಧನದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಪ್ರತ್ಯೇಕ ಲಿಖಿತ ಭರವಸೆಗಳಲ್ಲಿ, ಶಾಂತಿಭಂಗ ಉಂಟುಮಾಡುವ ಯಾವುದೇ ಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ವಾಗ್ದಾನ ಮಾಡಿದರು. ನ್ಯಾಯಾಂಗ ವ್ಯವಸ್ಥೆ ಮತ್ತು ಅದರ ಸಂಸ್ಥೆಗಳಾದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೇಲೂ ವಿಶ್ವಾಸ ವ್ಯಕ್ತಪಡಿಸಿದರು.

ಕಾನೂನುಬದ್ಧವಾಗಿ ಜಂತರ್ ಮಂತರ್‌ಗೆ ಸಂಬಂಧಿಸಿದ ಅಧಿಸೂಚನೆಯನ್ನು ಹಿಂಪಡೆಯುವವರೆಗೆ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ. ತಾವು ನಡೆಸುವ ಯಾವುದೇ ಪ್ರತಿಭಟನೆಯು ಸಂವಿಧಾನದ ಚೌಕಟ್ಟಿನೊಳಗೇ ಇರುತ್ತದೆ ಎಂದೂ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟರು.

ಮುಂದಿನ ವಿಚಾರಣೆ ವೇಳೆ ಜಾಮೀನುದಾರರ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ತನಿಖಾಧಿಕಾರಿಗೆ ಮ್ಯಾಜಿಸ್ಟ್ರೇಟ್ ಸೂಚಿಸಿದರು. ಇಬ್ಬರು ನಾಯಕರು ಮತ್ತು ಅವರ ಜಾಮೀನುದಾರರು ಮುಂದಿನ ವಿಚಾರಣೆಯ ದಿನದಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದೂ ನಿರ್ದೇಶಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com