ನವದೆಹಲಿ: ದೆಹಲಿಯಲ್ಲಿ ಕೇವಲ 10 ರೂಪಾಯಿಯ ಹರಿದ ನೋಟಿನ ವಿಚಾರವಾಗಿ ಉಂಟಾದ ಜಗಳ ಹಾಗೂ ಹಲ್ಲೆಯಿಂದ ಮನನೊಂದು 24 ವರ್ಷದ ಡೆಲಿವರಿ ಏಜೆಂಟ್ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ. ಮೃತರನ್ನು ಸಮೀರ್ ಹುಸೇನ್ ಸೈಫಿ ಎಂದು ಗುರುತಿಸಲಾಗಿದ್ದು, ಆತ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ ಕೊನೆಯ ವಿಡಿಯೋದಲ್ಲಿ ತನಗಾದ ಅನ್ಯಾಯ ಮತ್ತು ನೋವನ್ನು ಬಿಚ್ಚಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಅಕ್ಟೋಬರ್ 4 ರಂದು ಪೂರ್ವ ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ಸಮೀರ್ ಕ್ಯಾಶ್ ಆನ್ ಡೆಲಿವರಿ ಆರ್ಡರ್ ನೀಡಲು ಹೋಗಿದ್ದಾಗ, ಗ್ರಾಹಕರು ಹರಿದ 10 ರೂಪಾಯಿ ನೋಟನ್ನು ನೀಡಿದ್ದರು. ಸಮೀರ್ ಅದನ್ನು ನಿರಾಕರಿಸಿದಾಗ, ಗ್ರಾಹಕರು "ತಗೊಂಡ್ರೆ ತಗೋ, ಇಲ್ಲದಿದ್ರೆ ಬಿಡು" ಎಂದು ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ಗ್ರಾಹಕ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಸಮೀರ್‌ಗೆ ಎಲ್ಲರ ಎದುರೇ ಕೆನ್ನೆಗೆ ಬಾರಿಸಿ, ತೀವ್ರವಾಗಿ ನಿಂದಿಸಿದ್ದರು. "ಆ ಏಟು ನನ್ನ ಹೃದಯಕ್ಕೆ ತಗುಲಿತು" ಎಂದು ಸಮೀರ್ ತನ್ನ ಕೊನೆಯ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾನೆ. ತನ್ನ ಬಡತನದ ಹಿನ್ನೆಲೆಯನ್ನು ನೋಡಿ ಅವರು ತನಗೇ ಹೊಡೆದರು ಎಂದು ಆತ ಅಳಲು ತೋಡಿಕೊಂಡಿದ್ದಾನೆ.
ಮುಂದುವರೆದು, ತಾವು ಪ್ರಾಮಾಣಿಕವಾಗಿ ದುಡಿಯಲು ಬಂದರೂ ಇಷ್ಟೊಂದು ಹೀಯಾಳಿಸಲಾಯಿತು. ತನಗೆ ಸಾರ್ವಜನಿಕವಾಗಿ ಹೊಡೆಯುವಾಗ ಸುತ್ತಮುತ್ತಲಿದ್ದ ಯಾರೊಬ್ಬರೂ ತನ್ನ ಸಹಾಯಕ್ಕೆ ಬರಲಿಲ್ಲ ಮತ್ತು ವಂಚಕರನ್ನು ಪ್ರಶ್ನಿಸಲಿಲ್ಲ ಎಂದು ಸಮೀರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾನೆ. ಜೊತೆಗೆ, ಘಟನೆಯ ಬಳಿಕ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಮತ್ತು ತಮಗೆ ಯಾರೂ ಸಹಾಯ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಏತನ್ಮಧ್ಯೆ, ತನ್ನ ದೂರಿಗೆ ನ್ಯಾಯ ಸಿಗದಿದ್ದರೆ ತಾನು ವಿಷ ಸೇವಿಸುವುದಾಗಿ ವಿಡಿಯೋದಲ್ಲಿ ಎಚ್ಚರಿಸಿದ್ದರು. ಅದರಂತೆ ಅಕ್ಟೋಬರ್ 5 ರಂದು ಅವರು ವಿಷಕಾರಿ ವಸ್ತುವನ್ನು ಸೇವಿಸಿದ್ದರು. ಇನ್ನು, ವಿಷ ಸೇವಿಸಿದ ಬಳಿಕ ಸಮೀರ್ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 16 ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿದ ಅವರು ಅಕ್ಟೋಬರ್ 20 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆಯ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದ ಆರೋಪಿಗಳಾದ ರಾಕೇಶ್ ಅಲಿಯಾಸ್ ಬುಂತಿ (30) ಮತ್ತು ರಾಂಪಾಲ್ ಸಿಂಗ್ (65) ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಈಗ ಎಫ್‌ಐಆರ್‌ನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (BNS ಸೆಕ್ಷನ್ 108) ಆರೋಪವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
ಒಟ್ಟಾರೆಯಾಗಿ, ಈ ಘಟನೆಯು ಆನ್‌ಲೈನ್ ಡೆಲಿವರಿ ಕೆಲಸ ಮಾಡುವ ಸಿಬ್ಬಂದಿಗಳು ಪ್ರತಿದಿನ ಎದುರಿಸುವ ಒತ್ತಡ, ಗ್ರಾಹಕರಿಂದ ಎದುರಾಗುವ ದುರ್ವರ್ತನೆ ಹಾಗೂ ಅವರಿಗೆ ಸಿಗಬೇಕಾದ ಸಾಮಾಜಿಕ ಮತ್ತು ಕಾನೂನು ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.