‘ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿ ಚೀನಾಕ್ಕೆ ರಿಯಾಯಿತಿ ಕೊಡುತ್ತಿದ್ದಾರೆ’: ಅರುಣಾಚಲ ಪ್ರದೇಶದಲ್ಲಿ ಸಂಘರ್ಷ ಮುಂದುವರಿಕೆಗೆ ಕಾಂಗ್ರೆಸ್ ಟೀಕೆ

ಕಳೆದ ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಮುಖಾಮುಖಿ ಸಂಘರ್ಷಗಳು ನಡೆದಿದ್ದು, ಅವು ಇನ್ನೂ ಮುಂದುವರಿದಿವೆ ಎಂದು ಶತ್ರುಜೀತ್ ಕಪೂರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
China border
ಚೀನಾ ಗಡಿಭಾಗ
Updated on: 

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಮುಖಾಮುಖಿ ಸಂಘರ್ಷಗಳು ನಡೆದಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಚೀನಾದೊಂದಿಗೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ಮೌನ ವಹಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ‘ತಾನು ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಿಯವರು ಚೀನಾಕ್ಕೆ ಲೆಕ್ಕಾಚಾರದ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ , ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿಯೊಂದನ್ನು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಮುಖಾಮುಖಿ ಸಂಘರ್ಷಗಳು ನಡೆದಿದ್ದು, ಅವು ಇನ್ನೂ ಮುಂದುವರಿದಿವೆ ಎಂದು ಶತ್ರುಜೀತ್ ಕಪೂರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ನ ಈ ಆರೋಪಗಳು ಮತ್ತು ಹೇಳಿಕೆಗಳಿಗೆ ಕೇಂದ್ರ ಸರ್ಕಾರ ಅಥವಾ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

China border
ಚೀನಾ ಪಡೆಗಳೊಂದಿಗೆ ಸಂಘರ್ಷ ಇನ್ನೂ ಮುಂದುವರಿದಿದೆ: ಶೌರ್ಯ ಕಮಾಂಡೋಗಳ ಕಾರ್ಯಕ್ಕೆ ITBP ಶ್ಲಾಘನೆ

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಂ ರಮೇಶ್, ತಾನು ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಿಯವರು ಚೀನಾಕ್ಕೆ ಲೆಕ್ಕಾಚಾರದ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಇದೇ ವೇಳೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಜೊತೆ ಇತ್ತೀಚೆಗೆ ನಡೆದ ಮುಖಾಮುಖಿ ಸಂಘರ್ಷಗಳಲ್ಲಿ ಐಟಿಬಿಪಿಯ ಕಾರ್ಯಕ್ಷಮತೆಯನ್ನು ಅದರ ಮಹಾನಿರ್ದೇಶಕರು ಶ್ಲಾಘಿಸಿದ್ದಾರೆ. ಇದು ಸರಿಯಾದ ಕ್ರಮವೂ ಹೌದು. ಆದರೆ, ಈ ವಿಚಾರದಲ್ಲಿ ಪ್ರಧಾನಿ ಮತ್ತು ಅವರ ಆಡಳಿತ ವ್ಯವಸ್ಥೆ ಸಂಪೂರ್ಣ ಮೌನ ವಹಿಸಿವೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಅರುಣಾಚಲ ಪ್ರದೇಶದ ವಾಚಾ ಮತ್ತು ದಮೈ ಪ್ರದೇಶಗಳಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿದ್ದವು. ತಕ್ಸಿಂಗ್‌ನಲ್ಲಿ ನಡೆದ ಮುಖಾಮುಖಿ ಸಂಘರ್ಷದ ಬಳಿಕ ಈ ಮಾತುಕತೆಗಳು ನಡೆದಿದ್ದವು ಎಂದು ಜೈರಾಂ ತಿಳಿಸಿದ್ದಾರೆ.

ಲಡಾಖ್‌ನಲ್ಲಿ ನಡೆದಂತೆ, ಗಸ್ತು ತಿರುಗುವ ಹಲವು ಸ್ಥಳಗಳ ಮೇಲಿನ ಹಿಡಿತವನ್ನು ಭಾರತ ಮತ್ತೊಮ್ಮೆ ಕಳೆದುಕೊಂಡಿದೆ. ಚೀನಾ ಅರುಣಾಚಲ ಪ್ರದೇಶದ ನಮ್ಮ ಪಟ್ಟಣಗಳಿಗೆ ಹೊಸ ಹೆಸರುಗಳನ್ನು ಇಡುವುದನ್ನು ಮುಂದುವರಿಸಿದೆ. ಅಲ್ಲದೆ, ನಮ್ಮ ಪರಿಸರ ಮತ್ತು ಜಲ ಭದ್ರತೆಗೆ ಬೆದರಿಕೆಯೊಡ್ಡುವ 60,000 ಮೆಗಾವಾಟ್ ಸಾಮರ್ಥ್ಯದ ಅಣೆಕಟ್ಟನ್ನೂ ನಿರ್ಮಿಸುತ್ತಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.

ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ದಾಖಲೆಯ ಮಟ್ಟಕ್ಕೆ ಏರಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ. 2025–26ರಲ್ಲಿ ಭಾರತದ ವ್ಯಾಪಾರ ಕೊರತೆ 112 ಶತಕೋಟಿ ಡಾಲರ್‌ಗೆ ತಲುಪಿದ್ದು, ಹಿಂದಿನ ವರ್ಷ ಇದು 99 ಶತಕೋಟಿ ಡಾಲರ್ ಆಗಿತ್ತು.

ಇದರಿಂದ ಹಲವು ಉದ್ಯಮ ವಲಯಗಳಲ್ಲಿರುವ ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ತೀವ್ರವಾಗಿ ನಲುಗಿವೆ. ‘ಮೇಕ್ ಇನ್ ಇಂಡಿಯಾ’ ಈಗ ‘ಇಂಪೋರ್ಟ್ ಫ್ರಂ ಚೀನಾ’ ಆಗಿ ಬದಲಾಗಿದೆ. ಇಷ್ಟೊಂದು ಬೃಹತ್ ವ್ಯಾಪಾರ ಕೊರತೆಯೇ ನಮ್ಮ ಆರ್ಥಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.

2020ರ ಜೂನ್ 19ರಂದು ಪ್ರಧಾನಿ ಚೀನಾಕ್ಕೆ ನೀಡಿದ ‘ಕ್ಲೀನ್ ಚಿಟ್‌’ನ ಬೆಲೆಯನ್ನು ಭಾರತ ಇಂದಿಗೂ ತೆರುತ್ತಿದೆ. ನಮ್ಮ 20 ಮಂದಿ ಧೈರ್ಯಶಾಲಿ ಯೋಧರು ಹುತಾತ್ಮರಾದ ಬಳಿಕ ಪ್ರಧಾನಿ, ‘ಅಲ್ಲಿ ಯಾರೂ ನಮ್ಮ ಗಡಿಯೊಳಗೆ ನುಸುಳಿ ಬಂದಿಲ್ಲ; ಯಾರೂ ಒಳಗೆ ನುಸುಳಿಯೂ ಇಲ್ಲ. ನಮ್ಮ ಯಾವುದೇ ಗಡಿ ಠಾಣೆಯೂ ಬೇರೆಯವರ ವಶದಲ್ಲಿಲ್ಲ’ ಎಂದು ಹೇಳಿದ್ದರು ಎಂದು ಜೈರಾಂ ರಮೇಶ್ ಟೀಕಿಸಿದ್ದಾರೆ.

2025ರ ಜುಲೈ 4ರಂದು ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ , ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಕಾರ್ಯಾಚರಣೆಯಲ್ಲಿ ಚೀನಾ ವಹಿಸಿದ್ದ ವ್ಯಾಪಕ ಹಾಗೂ ಆಳವಾದ ಪಾತ್ರದ ಕುರಿತು ಬಹಿರಂಗವಾಗಿ ಮಾತನಾಡಿದ್ದರು ಎಂದು ನೆನಪಿಸಿದ್ದಾರೆ.

ಆದರೆ, ಕಳೆದ ಆಗಸ್ಟ್ 25ರಂದು ನಿವೃತ್ತ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಅವರ ಬಹಿರಂಗಪಡಿಸುವಿಕೆಗೆ ವಿರುದ್ಧವಾದ ಹೇಳಿಕೆ ನೀಡಿದರು. ಅದಾದ ಕೆಲವೇ ದಿನಗಳಲ್ಲಿ ಆರ್‌ಎಸ್‌ಎಸ್‌–ಬಿಜೆಪಿ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಚಿಂತಕರ ಚಾವಡಿಯನ್ನು ಅವರು ಸೇರಿಕೊಂಡರು ಎಂದು ಹೇಳಿದ್ದಾರೆ.

ಚೀನಾದೊಂದಿಗಿನ ಸಂಬಂಧಗಳ ನಿರ್ವಹಣೆ ಮತ್ತು ಚೀನಾದ ಒಳನುಸುಳುವಿಕೆಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರವನ್ನು ಟೀಕಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಪ್ರತಿಪಕ್ಷಗಳು ಮಾಡಿದ್ದ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿತ್ತು.

ಇದೇ ವೇಳೆ, ಕಾಂಗ್ರೆಸ್ ಪಕ್ಷವು ಸೇನಾ ಪಡೆಗಳ ಮನೋಬಲ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಈ ಹಿಂದೆ ಆರೋಪಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com