ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ಗಾಂಧಿ ಕುಟುಂಬವು ಕಾಂಗ್ರೆಸ್‌ಗೆ ಹೊರೆಯಾಗಿ ಪರಿಣಮಿಸಿದೆ ಎಂದು ಬಣ್ಣಿಸಿದ ಪ್ರಧಾನಿ, ಪಕ್ಷದ ಹಿರಿಯ ನಾಯಕರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಒಪ್ಪಿಕೊಂಡರೂ ಬಹಿರಂಗವಾಗಿ ಮಾತನಾಡಲು ಮೌನ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
PM Narendra Modi
ಪ್ರಧಾನಿ ನರೇಂದ್ರ ಮೋದಿ
Updated on: 

ನವದೆಹಲಿ: ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಕಾಂಗ್ರೆಸ್ ಯತ್ನಿಸುತ್ತಿದೆ, ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುತ್ತಿದೆ, ಇತರ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆ ದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ, ಕೆಲವರು ಭಾರತದಲ್ಲಿ ಅರಾಜಕತೆಯ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ವಿದೇಶಗಳಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವ ಮೂಲಕ ವಿರೋಧ ಪಕ್ಷದ ನಾಯಕರು ಭಾರತದ ಪ್ರತಿಷ್ಠೆಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜಾಗತಿಕ ಮಟ್ಟದಲ್ಲಿ ಇಷ್ಟೊಂದು ಅರಾಜಕತೆ ತಲೆದೋರಿರುವ ಈ ಸಂದರ್ಭದಲ್ಲಿ, ಬಲಿಷ್ಠ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ವ್ಯಕ್ತಿಗಳು ಭಾರತದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಲು ಪಣತೊಟ್ಟಿರುವಂತೆ ಕಾಣುತ್ತಿದೆ ಎಂದರು.

PM Narendra Modi
'ಪ್ರತಿಭಟನೆಗಳಿಂದ ಏನೂ ಸಾಧಿಸಲಾಗದು, ಇನ್ನು 30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ': ಅಮಿತ್ ಶಾ; Video

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಅವರು ವಿದೇಶಗಳಿಗೆ ಹೋಗಿ ಭಾರತಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ಅಲ್ಲದೆ, ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತೆ ವಿದೇಶಿಯರನ್ನು ಬೇಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ತಮ್ಮ ನಾಯಕನನ್ನು ಮತ್ತೆ ಮತ್ತೆ ಮುಂಚೂಣಿಗೆ ತರಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಗಳಿಗೆ ವ್ಯಂಗ್ಯವಾಗಿ ಟೀಕಿಸಿದ ಪ್ರಧಾನಿ ಮೋದಿ, ದೇಶವನ್ನು ಪಣಕ್ಕಿಟ್ಟು ತನ್ನ ‘ವಿಫಲ ಉತ್ಪನ್ನ’ವನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಪಕ್ಷ ಇನ್ನೆಷ್ಟು ಕಾಲ ಪ್ರಯತ್ನಿಸುತ್ತಿರುತ್ತದೆ ಎಂಬುದೇ ಅಚ್ಚರಿಯ ಸಂಗತಿ ಎಂದು ಹೇಳಿದರು. ಹೀಗೆ ಹೇಳುವಾಗ ಪ್ರಧಾನಿಯವರು ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ.

ಈ ಸಂದರ್ಭದಲ್ಲಿ ಉಪಗ್ರಹ ಉಡಾವಣೆಗಳೊಂದಿಗೆ ಹೋಲಿಕೆ ಮಾಡಿದ ಮೋದಿ, ವಾಸ್ತವವಾಗಿ, ಒಂದು ವರ್ಷದಲ್ಲಿ ನಮ್ಮ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ನಡೆಯುವ ಉಡಾವಣೆಗಳ ಸಂಖ್ಯೆಗಿಂತ, ತನ್ನ ನಾಯಕನನ್ನು ಮುಂಚೂಣಿಗೆ ತರಲು ಕಾಂಗ್ರೆಸ್ ನಡೆಸುವ ವಿಫಲ ಪ್ರಯತ್ನಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.

ಪದೇಪದೇ ಎದುರಾಗುತ್ತಿರುವ ವೈಫಲ್ಯಗಳ ಕಳಂಕದಿಂದ ತನ್ನ ಕುಟುಂಬವನ್ನು ರಕ್ಷಿಸಲು ಕಾಂಗ್ರೆಸ್ ಮಾಡುತ್ತಿರುವ ಕೆಲಸ ಭಾರತದ ಸಾಧನೆಗಳನ್ನು ಪ್ರಶ್ನಿಸುತ್ತಿರುವುದು. ಆದರೆ, ಕಾಂಗ್ರೆಸ್ ತನ್ನದೇ ಪತನಕ್ಕೆ ದಾರಿ ಮಾಡಿಕೊಳ್ಳುತ್ತಿದೆ. ಅದರಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನಿರಂತರ ವೈಫಲ್ಯಗಳ ಕಳಂಕದಿಂದ ತಮ್ಮ ಕುಟುಂಬವನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ಕಾಂಗ್ರೆಸ್ ಈಗ ಭಾರತದ ಸಾಧನೆಗಳು, ಗುಣವೈಶಿಷ್ಟ್ಯಗಳು ಮತ್ತು ಪ್ರಗತಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.

“ದ್ರಾಕ್ಷಿ ಹಣ್ಣು ಅತಿಯಾಗಿ ಹುಳಿಯಾಗಿರುವುದರಿಂದ, ಕಾಂಗ್ರೆಸ್ ಈಗ ಆ ಹಣ್ಣುಗಳನ್ನು ನೀಡುವ ಬಳ್ಳಿಯನ್ನೇ ಕತ್ತರಿಸಲು ಮುಂದಾಗಿದೆ ಎಂದು ಮೋದಿ ಟೀಕಿಸಿದರು.

PM Narendra Modi
ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

ಗಾಂಧಿ ಕುಟುಂಬವು ಕಾಂಗ್ರೆಸ್‌ಗೆ ಹೊರೆಯಾಗಿ ಪರಿಣಮಿಸಿದೆ ಎಂದು ಬಣ್ಣಿಸಿದ ಪ್ರಧಾನಿ, ಪಕ್ಷದ ಹಿರಿಯ ನಾಯಕರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಒಪ್ಪಿಕೊಂಡರೂ ಬಹಿರಂಗವಾಗಿ ಮಾತನಾಡಲು ಮೌನ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಾಸ್ತವವಾಗಿ, ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ಹೊರೆಯಾಗಿದೆ. ಪಕ್ಷದ ಹಿರಿಯ ನಾಯಕರಿಗೂ ಈ ಸಂಗತಿ ತಿಳಿದಿದೆ. ನಾವು ಖಾಸಗಿಯಾಗಿ ಭೇಟಿಯಾದಾಗ ಅವರೂ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೂ, ಅವಮಾನದ ಕಹಿಯನ್ನು ನುಂಗುತ್ತಾ ಮೌನವಾಗಿರಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ಇಂತಹ ವರ್ತನೆಯಿಂದ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸರ್ಕಾರವನ್ನು ಟೀಕಿಸಲು ಬಯಸುವ ವಿರೋಧ ಪಕ್ಷದ ನಾಯಕರಿಗೂ ಹಾನಿಯಾಗುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ನ ಇಂತಹ ಧೋರಣೆಯಿಂದ ಸರ್ಕಾರವನ್ನು ಪ್ರಾಮಾಣಿಕವಾಗಿ ಟೀಕಿಸುವವರಿಗೂ ಹಾನಿಯಾಗುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆಲೆಯನ್ನು ತೆರಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಸರ್ಕಾರದ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಬಯಸುವವರ ಧ್ವನಿಗಳು ಕಾಂಗ್ರೆಸ್ ಸೃಷ್ಟಿಸುವ ಗದ್ದಲದಲ್ಲಿ ಮುಳುಗಿಹೋಗುತ್ತವೆ. ಪ್ರಾಮಾಣಿಕವಾಗಿ ಟೀಕಿಸುವವರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ಹೇಳಿದರು.

ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಹಿತದ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರು, ಸರ್ಕಾರದ ಪ್ರಬಲ ವಿರೋಧಿಗಳಾಗಿದ್ದರೂ ಸಹ, ಕಾಂಗ್ರೆಸ್‌ನ ನಿರಂತರ ಘೋಷಣೆಗಳು ಮತ್ತು ಗದ್ದಲದ ನಡುವೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವೇ ಸಿಗುತ್ತಿಲ್ಲ.

ಇತರ ವಿರೋಧ ಪಕ್ಷಗಳ ಸಂಸದರು ಮಾತನಾಡದಂತೆ ತಡೆಯಲು ಕಾಂಗ್ರೆಸ್ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುತ್ತಿದೆ. ಒಬ್ಬ ವ್ಯಕ್ತಿಯನ್ನೇ ಸದಾ ಸುದ್ದಿಯ ಮುಂಚೂಣಿಯಲ್ಲಿಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ ಎಂದು ಟೀಕಿಸಿದರು.

ವಿರೋಧ ಪಕ್ಷಗಳ ಅನೇಕ ಪ್ರತಿಭಾವಂತ ಯುವ ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸರ್ಕಾರವನ್ನು ಟೀಕಿಸಲು ಬಯಸುವುದನ್ನು ನಾವು ಸಂಸತ್‌ನಲ್ಲಿ ನೋಡಿದ್ದೇವೆ. ಆದರೆ, ಇತರರಿಗೆ ಮಾತನಾಡುವ ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಸಂಸತ್ ಕಲಾಪಗಳು ಸುಗಮವಾಗಿ ನಡೆಯದಂತೆ ತಡೆಯುತ್ತಿದೆ. ಏಕೆಂದರೆ, ಒಬ್ಬ ವ್ಯಕ್ತಿಯೇ ಸದಾ ಸುದ್ದಿಯ ಮುಂಚೂಣಿಯಲ್ಲಿರಬೇಕು ಎಂಬುದು ಕಾಂಗ್ರೆಸ್‌ನ ಬಯಕೆ. ಈ ಮೂಲಕ ಕಾಂಗ್ರೆಸ್ ವಿರೋಧ ಪಕ್ಷಗಳ ಯುವ ಸಂಸದರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದರು.

ಸರ್ಕಾರದ ನ್ಯೂನತೆಗಳನ್ನು ಬಹಿರಂಗಪಡಿಸಲು ಅಥವಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಚಳವಳಿಗಳನ್ನೂ ಕಾಂಗ್ರೆಸ್ ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.

ಸರ್ಕಾರದ ನ್ಯೂನತೆಗಳನ್ನು ನೈಜವಾಗಿ ಎತ್ತಿತೋರಿಸಲು ಅಥವಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಯತ್ನಿಸುವ ಚಳವಳಿಗಳಿಗೂ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿವೆ ಎಂದು ಹೇಳಿದರು.

ಕಾಂಗ್ರೆಸ್ ನ್ನು ‘ಪರಾವಲಂಬಿ’ ಎಂದು ಬಣ್ಣಿಸಿದ ಮೋದಿ, ನಗರ ನಕ್ಸಲರ ಪ್ರಭಾವಕ್ಕೆ ಪಕ್ಷ ಒಳಗಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಇತರರು ಪ್ರಗತಿ ಸಾಧಿಸಲು ಬಿಡದ ‘ಪರಜೀವಿ’ಯಾಗಿ ಮಾರ್ಪಟ್ಟಿದೆ. ‘ನಗರ ನಕ್ಸಲರ’ (ಸೈದ್ಧಾಂತಿಕ ನಕ್ಸಲರ) ಪ್ರಭಾವಕ್ಕೆ ಸಂಪೂರ್ಣವಾಗಿ ಒಳಗಾಗಿರುವ ಕಾಂಗ್ರೆಸ್, ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಒಂದು ಕಾಲದಲ್ಲಿ ನಮ್ಮ ಅರಣ್ಯಗಳಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದವರು ಈಗ ಕಾಂಗ್ರೆಸ್‌ಗೆ ನುಸುಳಿದ್ದಾರೆ. ಅವರು ದೇಶದ ವಿನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯ ಕುರಿತು ಮಾತನಾಡಿದ ಮೋದಿ, ‘ವಿಕಸಿತ ಭಾರತ’ ನಿರ್ಮಾಣದ ಗುರಿ ಸಾಧಿಸಲು ದೇಶ ಬದ್ಧವಾಗಿದೆ , ಈ ಎಲ್ಲ ಸವಾಲುಗಳ ನಡುವೆಯೂ ನಾವು ‘ವಿಕಸಿತ ಭಾರತ’ ಎಂಬ ಮಹತ್ತರ ಗುರಿಯನ್ನು ನಮ್ಮ ಮುಂದಿಟ್ಟುಕೊಂಡಿದ್ದೇವೆ. ನಮ್ಮ ದೇಶದ ಆಶೋತ್ತರಗಳಿಗೆ ಮಿತಿಯೇ ಇಲ್ಲ. ಇಂದು ಭಾರತದಾದ್ಯಂತ ಒಂದೇ ಸಂಕಲ್ಪದ ಧ್ವನಿ ಪ್ರತಿಧ್ವನಿಸುತ್ತಿದೆ—‘ನಾವು ಸಾಧಿಸುತ್ತೇವೆ, ನಾವು ಸಾಧಿಸಿಯೇ ತೀರುತ್ತೇವೆ’. ನಾವು ದೊಡ್ಡ ಕನಸುಗಳನ್ನು ಕಾಣುತ್ತೇವೆ, ಪ್ರತಿಯೊಂದು ಸವಾಲನ್ನೂ ಅವಕಾಶವಾಗಿ ಪರಿವರ್ತಿಸುತ್ತೇವೆ ಮತ್ತು ಕೈಗೊಂಡ ಪ್ರತಿಯೊಂದು ಸಂಕಲ್ಪವನ್ನೂ ಯಶಸ್ವಿಯಾಗಿ ಈಡೇರಿಸುತ್ತೇವೆ” ಎಂದು ಹೇಳಿದರು.

ನಮ್ಮ ಆತ್ಮವಿಶ್ವಾಸವೇ ನಮ್ಮ ಶಕ್ತಿ. ನಮ್ಮ 140 ಕೋಟಿ ನಾಗರಿಕರ ಕನಸುಗಳೇ ನಮಗೆ ಸ್ಫೂರ್ತಿ. ನಾವು ನಾವೀನ್ಯತೆಗೆ ಉತ್ತೇಜನ ನೀಡುತ್ತೇವೆ, ಹೊಸ ಮಾರ್ಗಗಳನ್ನು ರೂಪಿಸುತ್ತೇವೆ, ಹೊಸ ಎತ್ತರಗಳನ್ನು ತಲುಪುತ್ತೇವೆ ಮತ್ತು ಭಾರತದ ಯಶಸ್ಸನ್ನು ಜಗತ್ತಿನ ಯಶಸ್ಸಿನೊಂದಿಗೆ ಬೆಸೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com