

ನವದೆಹಲಿ: ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಶುಕ್ರವಾರ ಘೋಷಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಲೇಬೇಕೆಂದು ಆಗ್ರಹಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರಾದ ನಂತರ ಈ ಇಬ್ಬರು ನಾಯಕರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದರು.
"ನಮ್ಮ ಹೋರಾಟ ಮುಂದುವರಿಯುತ್ತದೆ. ಈ ದೇಶದ ಜನರು ನಮಗೆ ನೀಡಿರುವ ಈ ವೇದಿಕೆಯ ರಕ್ಷಕರು ನಾವಾಗಿದ್ದೇವೆ. ನಾವು ನಮ್ಮಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾವು ಜೈಲಿನಲ್ಲಿದ್ದರೂ ಸಹ ಈ ಹೋರಾಟ ಮುಂದುವರಿಯುತ್ತದೆ ಎಂದು ರಂಕಾ ತಿಳಿಸಿದರು.
"ನಮ್ಮ ಬಗ್ಗೆ ಮತ್ತು ಪ್ರಸ್ತುತ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ. ನಾವು ಬದಲಾಗುತ್ತೇವೆ ಮತ್ತು ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತೇವೆ ಎಂದು ಹೇಳಿದ ಅವರು, ಮುಂದಿನ ಶೀಘ್ರದಲ್ಲೇ ಮುಂದಿನ ಘೋಷಣೆ ಹೊರಡಿಸಲಾಗುವುದು.ಮುಂದಿನ ವಿಚಾರಣೆಯ ದಿನಾಂಕದ ಬಗ್ಗೆ ಕ್ರೈಮ್ ಬ್ರಾಂಚ್‌ನಿಂದ ಮಾಹಿತಿ ಬರುವುದಕ್ಕಾಗಿ ಕಾಯುತ್ತಿದ್ದೇವೆ ಎಂದು ರಂಕಾ ಹೇಳಿದರು.
ಹೋರಾಟದ ಮುಂದಿನ ಹಂತದ ಬಗ್ಗೆ ಎಲ್ಲರೂ ಒಟ್ಟಾಗಿ ನಿರ್ಧರಿಸಲಿದ್ದಾರೆ. ಇದೊಂದು ಸಾಮೂಹಿಕ ನಿರ್ಧಾರ. ಕೇವಲ ಸಿಜೆಪಿ ಮಾತ್ರವಲ್ಲ, ಇನ್ನೂ ಅನೇಕ ಜನರು ಈ ಹೋರಾಟದೊಂದಿಗೆ ಇದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲೇಬೇಕು ಎಂದು ದಾಸ್ ಹೇಳಿದರು.
ಅಕ್ಟೋಬರ್ 13 ರಂದು ರಂಕಾ, ದಾಸ್ ಮತ್ತಿತರ ಕಾರ್ಯಕರ್ತರು, ಬಿಗಿ ಭದ್ರತೆ ಮತ್ತು ತಡೆಗೋಡೆಗಳನ್ನು ಹೊಂದಿದ್ದ ಜಂತರ್ ಮಂತರ್ ಪ್ರದೇಶವನ್ನು ಪ್ರವೇಶಿಸಿ, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು. ನಂತರವೂ ಈ ಸಂಘಟನೆಯು ತಮ್ಮ ಪ್ರತಿಭಟನೆಗಳನ್ನು ಮುಂದುವರಿಸಿತು. ಇದರಲ್ಲಿ ಕನ್ನಾಟ್ ಪ್ಲೇಸ್‌ನಲ್ಲಿ 'ತಿರಂಗಾ ಮೆರವಣಿಗೆ' ನಡೆಸುವ ಕರೆ ಕೂಡ ಸೇರಿತ್ತು.
ಅಕ್ಟೋಬರ್ 14 ರಂದು ರಂಕಾ ಮತ್ತು ದಾಸ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಅವರ ಬಂಧನದ ಅವಧಿಯನ್ನು ವಿಸ್ತರಿಸಲಾಗಿತ್ತು. ಆದರೆ ಅಕ್ಟೋಬರ್ 21 ರಂದು ಮ್ಯಾಜಿಸ್ಟ್ರೇಟ್ ಅವರು ಇಬ್ಬರನ್ನೂ ಬಿಡುಗಡೆ ಮಾಡಲು ಆದೇಶಿಸಿದರು.
ತನಿಖೆಯಲ್ಲಿ ಪಾಲ್ಗೊಳ್ಳಲು ಗುರುವಾರ ಹೆಚ್ಚುವರಿ ಸಮಯ ಕೋರಿದ್ದ ಇವರು, ಶುಕ್ರವಾರ SEM ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.