

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ SIR ವಿರುದ್ಧ ಸಿಜೆಪಿ ಪ್ರತಿಭಟನೆ ಹೆಚ್ಚಾಗುತ್ತಿರುವಂತೆಯೇ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮಧ್ಯಾಹ್ನ ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸಿದ ಪ್ರತಿಭಟನೆ, ಮಾದಕ ವಸ್ತುಗಳ ವಿರುದ್ಧದ ಹೋರಾಟ, ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಗ್ಯಾಂಗ್ಸ್ಟರ್ಗಳ ವಿರುದ್ಧದ ಕ್ರಮಗಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳ ಕುರಿತು ಅಮಿತ್ ಶಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮಿತ್ ಶಾ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೈ ಸಿಂಗ್ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಗೆ ಆಗಮಿಸಿದರು. ಅಲ್ಲಿ ಹಿರಿಯ ಅಧಿಕಾರಿಗಳು ಅವರಿಗೆ ಪೊಲೀಸ್ ಪಡೆಯ ಕಾರ್ಯಕ್ಷಮತೆ, ನಡೆಯುತ್ತಿರುವ ತನಿಖೆಗಳು ಮತ್ತು ಕಾನೂನು ಜಾರಿಗೊಳಿಸುವಲ್ಲಿ ಎದುರಾಗುತ್ತಿರುವ ಪ್ರಮುಖ ಸವಾಲುಗಳ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜುಲೈ ತಿಂಗಳಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸಿದ 'ಸಂಸದ್ ಚಲೋ' ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಅತಿಯಾದ ಬಲ ಪ್ರಯೋಗಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕಾರ್ಯವೈಖರಿಯ ಬಗ್ಗೆ ತೀವ್ರ ಪರಿಶೀಲನೆ ನಡೆಯುತ್ತಿರುವಾಗಲೇ ಅಮಿತ್ ಶಾ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸಭೆಯಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ಸನ್ನಿವೇಶಗಳು, ಪೊಲೀಸರ ಪ್ರತಿಕ್ರಿಯೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳನ್ನು ನಿರ್ವಹಿಸಿದ ರೀತಿಯ ಬಗ್ಗೆ ಟೀಕೆಗಳನ್ನು ಎದುರಿಸುತ್ತಿರುವ ಪೊಲೀಸ್ ಪಡೆಯ ಮನೋಸ್ಥೈರ್ಯವನ್ನು ಹೆಚ್ಚಿಸಲು ಗೃಹ ಸಚಿವರ ಈ ಭೇಟಿ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಅಲ್ಲದೆ, ಈ ಸಭೆಯು ಹಿರಿಯ ಅಧಿಕಾರಿಗಳಿಗೆ ಕಾರ್ಯಾಚರಣೆಗೆ ಸಂಬಂಧಿಸಿದ ಸವಾಲುಗಳನ್ನು ಚರ್ಚಿಸಲು ಮತ್ತು ರಾಜಧಾನಿಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಕೈಗೊಂಡ ಕ್ರಮಗಳನ್ನು ವಿವರಿಸಲು ಒಂದು ಅವಕಾಶವನ್ನು ಒದಗಿಸಲಿದೆ ಎಂದು ಮೂಲಗಳು ಹೇಳಿವೆ.