'ಇಟಾಲಿಯನ್ ಫುಡ್ ಹುಡುಕಾಟ ರಾಜೀವ್ ಮೊದಲ ಭೇಟಿ ಹೇಗಾಯ್ತು?': ಎಕ್ಸ್ ಖಾತೆಗೆ ಪದಾರ್ಪಣೆ ಮಾಡಿ ಸೋನಿಯಾ ಗಾಂಧಿ ಹೇಳಿದ್ದೇನು?; Video

ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾಗುವ ಮುನ್ನ ಸೋನಿಯಾ ಗಾಂಧಿ ಈ ವಿಡಿಯೊ ಹಂಚಿಕೊಂಡಿದ್ದಾರೆ.
Sonia Gandhi and Rajeev Gandhi
ಸೋನಿಯಾ ಗಾಂಧಿ ಎಕ್ಸ್ ಖಾತೆಗೆ ಪದಾರ್ಪಣೆ
Updated on: 

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇನ್ಸ್ಟಾಗ್ರಾಂ ನಂತರ ಇಂದು ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ಗೆ (X) ಪದಾರ್ಪಣೆ ಮಾಡಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲಿ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆಯನ್ನು ಮೆಲುಕು ಹಾಕಿದ್ದಾರೆ. ಕೇಂಬ್ರಿಡ್ಜ್‌ನ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾಗುವ ಮುನ್ನ ಸೋನಿಯಾ ಗಾಂಧಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಆರಂಭಿಕ ಸಂಬಂಧ, ಅವರಲ್ಲಿ ಮೊದಲು ತಮ್ಮನ್ನು ಆಕರ್ಷಿಸಿದ ಗುಣಗಳು ಹಾಗೂ ಇಬ್ಬರ ನಡುವಿನ ಸ್ನೇಹ ಹೇಗೆ ಪ್ರೀತಿಯಾಗಿ ಬೆಳೆಯಿತು ಎಂಬುದನ್ನು ವಿವರಿಸಿದ್ದಾರೆ.

“ಕೇಂಬ್ರಿಡ್ಜ್‌ನ ಪುಟ್ಟ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನನ್ನ ಪ್ರೇಮಯಾನ ಆರಂಭವಾಯಿತು,” ಎಂದು ಸೋನಿಯಾ ಗಾಂಧಿ ತಮ್ಮ ಮೊದಲ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

“ರಾಜೀವ್ ಮತ್ತು ನಾನು ಪ್ರೀತಿ, ನಗು ಹಾಗೂ ನೆನಪುಗಳಿಂದ ತುಂಬಿದ ಸುಂದರ ಪ್ರಪಂಚವೊಂದನ್ನು ಕಟ್ಟಿಕೊಂಡಿದ್ದೆವು. ನವೆಂಬರ್ 10ರಂದು ಆ ಪ್ರಪಂಚವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಮೊದಲ ಭೇಟಿಯನ್ನು ನೆನಪಿಸಿಕೊಂಡ ಸೋನಿಯಾ

ವಿಡಿಯೊದಲ್ಲಿ ಸೋನಿಯಾ ಗಾಂಧಿ ಹಳೆಯ ಛಾಯಾಚಿತ್ರಗಳನ್ನು ವೀಕ್ಷಿಸುತ್ತಾ, ಇಂಗ್ಲೆಂಡ್‌ನಲ್ಲಿ ವಿದ್ಯಾರ್ಥಿನಿಯಾಗಿದ್ದ ದಿನಗಳು ಹಾಗೂ ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭಗಳನ್ನು ನೆನಪಿಸಿಕೊಂಡಿದ್ದಾರೆ.

ಆ ಕಾಲದಲ್ಲಿ ಇಂಗ್ಲೆಂಡ್‌ನ ಆಹಾರ ಪದ್ಧತಿ ತಮಗೆ ಸಂಪೂರ್ಣ ಭಿನ್ನವಾಗಿತ್ತು. ಹೀಗಾಗಿ, ತಾವು ಅಭ್ಯಾಸ ಮಾಡಿಕೊಂಡಿದ್ದ ಇಟಲಿಯ ಆಹಾರಕ್ಕೆ ಹತ್ತಿರವಾದ ಊಟ ಸಿಗುವ ರೆಸ್ಟೋರೆಂಟ್‌ಗಳನ್ನು ಹುಡುಕುತ್ತಿದ್ದುದಾಗಿ ಅವರು ಹೇಳಿದ್ದಾರೆ.

ಆ ದಿನಗಳಲ್ಲಿ ಇಂಗ್ಲೆಂಡ್‌ನ ಆಹಾರ ತುಂಬಾ ಕೆಟ್ಟದಾಗಿತ್ತು. ಈಗಿನಂತೆ ಅಷ್ಟೊಂದು ರೆಸ್ಟೋರೆಂಟ್‌ಗಳೂ ಇರಲಿಲ್ಲ ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.

ಇಟಲಿಯ ಆಹಾರಕ್ಕೆ ಹೋಲುವ ಊಟ ಸಿಗುವ ಸ್ಥಳವನ್ನು ಹುಡುಕುತ್ತಾ ಹೋದಾಗ, ಕೇಂಬ್ರಿಡ್ಜ್‌ನಲ್ಲಿ ಯುರೋಪ್ ಹಾಗೂ ಭಾರತದ ವಿದ್ಯಾರ್ಥಿಗಳ ನಡುವೆ ಜನಪ್ರಿಯವಾಗಿದ್ದ ಗ್ರೀಕ್ ರೆಸ್ಟೋರೆಂಟ್‌ವೊಂದಕ್ಕೆ ಭೇಟಿ ನೀಡಿದ್ದರಂತೆ.

Sonia Gandhi and Rajeev Gandhi
Instagramಗೆ ಸೋನಿಯಾ ಗಾಂಧಿ ಪದಾರ್ಪಣೆ; ತಮ್ಮ ಮುಂಬರುವ ಪುಸ್ತಕದ ಫಸ್ಟ್ ಲುಕ್ ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕಿ

ಅದು ಗ್ರೀಕ್ ರೆಸ್ಟೋರೆಂಟ್ ಆಗಿತ್ತು. ಅನೇಕ ವಿದ್ಯಾರ್ಥಿಗಳು, ವಿಶೇಷವಾಗಿ ಯುರೋಪಿಯನ್ ವಿದ್ಯಾರ್ಥಿಗಳು ಹಾಗೂ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಊಟಕ್ಕೆ ಬರುತ್ತಿದ್ದರು. ಅದೇ ರೆಸ್ಟೋರೆಂಟ್‌ನಲ್ಲಿ ನಾನು ಮೊದಲ ಬಾರಿಗೆ ರಾಜೀವ್ ಅವರನ್ನು ಭೇಟಿಯಾದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ನೋಡಿದಾಗಲೇ ಅವರೊಂದಿಗೆ ವಿಶೇಷವಾದ ಆತ್ಮೀಯತೆ ಮೂಡಿತ್ತು ಎಂದು ಸೋನಿಯಾ ತಿಳಿಸಿದ್ದಾರೆ.

ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗಲೇ, ನನ್ನ ಜೀವನದಲ್ಲಿ ಜೊತೆಯಾಗಿರಲು ಬಯಸುವ ವ್ಯಕ್ತಿ ಇವರೇ ಎಂಬ ಭಾವನೆ ಬಹುತೇಕ ತಕ್ಷಣವೇ ಮೂಡಿತು. ವಿಶೇಷವೆಂದರೆ, ಅವರಿಗೂ ನನ್ನ ಬಗ್ಗೆ ಅದೇ ರೀತಿಯ ಭಾವನೆ ಇತ್ತು ಎಂಬುದು ನಂತರ ನನಗೆ ತಿಳಿಯಿತು ಎಂದು ಸೋನಿಯಾ ಗಾಂಧಿ ತಮ್ಮ ಪ್ರೇಮದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ.

ಪರಸ್ಪರ ಪರಿಚಯವಿದ್ದ ಸ್ನೇಹಿತರೊಬ್ಬರು ತಮ್ಮಿಬ್ಬರನ್ನು ಪರಿಚಯಿಸಿದ್ದರು. ಆ ಬಳಿಕ ಇಬ್ಬರೂ ಒಟ್ಟಿಗೆ ಸಮಯ ಕಳೆಯಲು ಆರಂಭಿಸಿದ್ದೆವು. ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗುವುದು ಹಾಗೂ ಇತರ ವಿದ್ಯಾರ್ಥಿಗಳೊಂದಿಗೆ ಬೆರೆಯುವುದು ಸಾಮಾನ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ರಾಜೀವ್ ಗಾಂಧಿಯಲ್ಲಿ ಆಕರ್ಷಿಸಿದ ಗುಣವೇನು?

ರಾಜೀವ್ ಗಾಂಧಿ ಹಾಗೂ ಸ್ನೇಹಿತರೊಂದಿಗೆ ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಸಂದರ್ಭವನ್ನೂ ಸೋನಿಯಾ ನೆನಪಿಸಿಕೊಂಡಿದ್ದಾರೆ.

ರಾಜೀವ್ ಗಾಂಧಿ ಅವರಲ್ಲಿ ತಮ್ಮನ್ನು ಮೊದಲಿಗೆ ಆಕರ್ಷಿಸಿದ ಗುಣಗಳ ಬಗ್ಗೆ ಮಾತನಾಡಿದ ಸೋನಿಯಾ, ಅವರು ನೋಡಲು ಸುಂದರವಾಗಿದ್ದರೂ, ಅವರ ಸೌಮ್ಯ ಸ್ವಭಾವವೇ ತಮ್ಮ ಮನಸ್ಸನ್ನು ಹೆಚ್ಚು ಸೆಳೆದಿತ್ತು ಎಂದು ಹೇಳಿದ್ದಾರೆ.

ಅವರು ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಂತೆ ಕಾಣುತ್ತಿದ್ದರು. ಸಹಜವಾಗಿಯೇ ಅವರು ತುಂಬಾ ಸುಂದರವಾಗಿದ್ದರು. ಆದರೆ, ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುತ್ತಿದ್ದ ಆ ಸೌಮ್ಯತೆಯೇ ನನ್ನನ್ನು ವಿಶೇಷವಾಗಿ ಆಕರ್ಷಿಸಿತು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಸೋನಿಯಾ ಮತ್ತು ರಾಜೀವ್ ಗಾಂಧಿ 1968ರಲ್ಲಿ ವಿವಾಹವಾದರು. ನಂತರ ರಾಜೀವ್ ಗಾಂಧಿ 1984ರಿಂದ 1989ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1991ರ ಮೇ ತಿಂಗಳಲ್ಲಿ ಹತ್ಯೆಯಾದರು.

Sonia Gandhi and Rajeev Gandhi
ಪೌರತ್ವಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು; ಸೋನಿಯಾ ಗಾಂಧಿ ವಿರುದ್ಧ ತನಿಖೆ ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ರದ್ದು; ಮತ್ತೆ ತನಿಖೆಗೆ ಆದೇಶ!

ನವೆಂಬರ್ 10ಕ್ಕೆ ಸೋನಿಯಾ ಗಾಂಧಿ ಆತ್ಮಚರಿತ್ರೆ ಬಿಡುಗಡೆ

ಅಕ್ಟೋಬರ್ 22ರಂದು ಇನ್ಸ್ಟಾಗ್ರಾಂಗೆ ಪದಾರ್ಪಣೆ ಮಾಡಿದ್ದ ಸೋನಿಯಾ ಗಾಂಧಿ, ಎರಡು ದಿನಗಳ ಬಳಿಕ ಎಕ್ಸ್ ಸಾಮಾಜಿಕ ಜಾಲತಾಣಕ್ಕೂ ಪ್ರವೇಶಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ತಮ್ಮ ಮೊದಲ ಪೋಸ್ಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆಯ ಮೊದಲ ನೋಟವನ್ನು ಹಂಚಿಕೊಂಡಿದ್ದರು.

ಈ ಪುಸ್ತಕದಲ್ಲಿ ಇಟಲಿಯಲ್ಲಿನ ತಮ್ಮ ಬಾಲ್ಯದ ದಿನಗಳಿಂದ ಹಿಡಿದು ನೆಹರು-ಗಾಂಧಿ ಕುಟುಂಬದ ಸೊಸೆಯಾದ ಸಂದರ್ಭ, ರಾಜೀವ್ ಗಾಂಧಿ ಅವರೊಂದಿಗಿನ ವೈವಾಹಿಕ ಜೀವನ ಹಾಗೂ ನಂತರ ಭಾರತೀಯ ರಾಜಕೀಯಕ್ಕೆ ಪ್ರವೇಶಿಸಿದವರೆಗಿನ ತಮ್ಮ ಜೀವನಯಾನವನ್ನು ಸೋನಿಯಾ ಗಾಂಧಿ ವಿವರಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳು ಸೇರಿದಂತೆ ತಮ್ಮ ಜೀವನದಲ್ಲಿ ಸಂಭವಿಸಿದ ಪ್ರಮುಖ ವೈಯಕ್ತಿಕ ಹಾಗೂ ರಾಜಕೀಯ ಘಟನೆಗಳನ್ನೂ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅವಧಿಯ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

ಒಟ್ಟು 544 ಪುಟಗಳನ್ನು ಒಳಗೊಂಡಿರುವ ಈ ಆತ್ಮಚರಿತ್ರೆ ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಆಲ್ಫ್ರೆಡ್ ಎ. ನಾಫ್ (Alfred A. Knopf) ಪ್ರಕಾಶನ ಸಂಸ್ಥೆ ಪುಸ್ತಕವನ್ನು ಪ್ರಕಟಿಸುತ್ತಿದ್ದು, ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ (HarperCollins India) ಇದರ ಪ್ರಕಟಣೆ ಮತ್ತು ಬಿಡುಗಡೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com